ಭಕ್ತರ ಸೇವೆಗೆ ದೇವರು ಫಲ ನೀಡುವುದು ನಿಶ್ಚಿತ : ಸಂತೋಷ್ ಕುಮಾರ್ ರೈ
ನಳೀಲು ಸ್ವಯಂಸೇವಕರ ಅವಿರತ ಶ್ರಮ ನೆನೆದು ಭಾವುಕರಾದ ಸಂತೋಷ್ ರೈ
ಪುತ್ತೂರು :ನಳೀಲು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮಕಲಶೋತ್ಸವ ಹತ್ತೂರಿಗೆ ಮಾದರಿ ಎಂಬಂತೆ ನಡೆದಿದೆ. ಇದರ ಹಿಂದೆ ದುಡಿದ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶ್ರೀ ಸುಬ್ರಹ್ಮಣ್ಯ ದೇವರೇ ನಿಮ್ಮಲ್ಲರ ಅವಿರತ ಶ್ರಮದ ಸೇವೆಗೆ ಫಲ ನೀಡುವುದು ನಿಶ್ಚಿತ ಎಂದು ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಹೇಳಿದರು.
ಫೆ.16 ರಿಂದ 24 ರ ತನಕ ನಡೆದ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೆಯಲ್ಲಿ ಕರ ಸೇವಕರಾಗಿ ಸೇವೆ ಸಲ್ಲಿಸಿದ ಭಕ್ತ ವೃಂದಕ್ಕೆ ಮಾ.10 ರಂದು ಶ್ರೀ ಕ್ಷೇತ್ರದಲ್ಲಿ ನಡೆದ ಕೃತಜ್ಞತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತೆರೆಮರೆಯಲ್ಲಿ ದುಡಿದವರು ಸಾವಿರಾರು ಮಂದಿ. ಅದನ್ನು ಸಂಖ್ಯೆಯಲ್ಲಿ ಹೇಳಲು ಸಾಧ್ಯವಿಲ್ಲ. ಹಗಲು ರಾತ್ರಿ ಎನ್ನದೇ ಕರಸೇವೆ ಮಾಡಿದ್ದಾರೆ. ಕ್ಷೇತ್ರದ ಸಂಪರ್ಕ ರಸ್ತೆಯ ಅಲಂಕಾರದಿಂದ ತೊಡಗಿ ಸ್ವಚ್ಚತೆ, ಟ್ರಾಫಿಕ್, ಅನ್ನದಾನ ಹೀಗೆ ಹತ್ತಾರು ವಿಭಾಗದಲ್ಲಿ ಭಕ್ತರ ತಂಡ ಸಮರ್ಪಣಭಾವದಿಂದ ಕೆಲಸ ನಿರ್ವಹಿಸಿದ ಕಾರಣ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಿತು ಎಂದರು.
ಸ್ವಯಂಸೇವಕರ ದುಡಿಮೆಗೆ ಭಾವುಕರಾದ ಸಂತೋಷ್ ರೈ
ನಾನು ಪುತ್ತೂರಿನಲ್ಲಿ ಮನೆ ಮಾಡಿದ್ದರೂ ಊರಿನ ದೈವ ದೇವರ ಕಾರ್ಯದ ಬಗ್ಗೆ ಮೊದಲ ಆದ್ಯತೆ ನೀಡುತ್ತೇನೆ. ನನಗೆ ನನ್ನ ಊರು ಮೊದಲು. ಹಾಗಾಗಿ ನಳೀಲು ಕ್ಷೇತ್ರದಲ್ಲಿ ಅಭೂತಪೂರ್ವ ರೀತಿಯಲ್ಲಿ ಬ್ರಹ್ಮಕಲಶೋತ್ಸವ ನಡೆಸಬೇಕು ಎನ್ನುವ ಬಯಕೆ ಇತ್ತು. ಅದು ನನ್ನೊಬ್ಬನಿಂದ ಅಸಾಧ್ಯ ಅನ್ನುವುದು ಗೊತ್ತಿತ್ತು. ಮೊದಲ ಪೂರ್ವಭಾವಿ ಸಭೆಯಿಂದ ತೊಡಗಿ ಹಂತ ಹಂತವಾಗಿ ನಡೆದ ಕಾರ್ಯಚಟುವಟಿಕೆಗಳಲ್ಲಿ ಊರ ಪರವೂರಿನ ಭಕ್ತರು ಹತ್ತಾರು ಸಲಹೆ ಸೂಚನೆ ನೀಡಿದರು. ಹಲವು ವಿಭಾಗದ ಜವಾಬ್ದಾರಿ ವಹಿಸಿಕೊಂಡರು. ಅಪೂರ್ವ ರೀತಿಯಲ್ಲಿ ಎಲ್ಲವೂ ಒಂದಕ್ಕೊಂದು ಜೋಡಣೆ ಆಗುತ್ತಾ ಸಾಗಿತ್ತು. ಅಂತಿಮವಾಗಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆದು ಹತ್ತೂರಲ್ಲಿ ಹೆಸರು ಪಡೆಯಿತು ಎಂದು ಹಂತ ಹಂತದ ಚಟುವಟಿಕೆ, ಸ್ವಯಂಸೇವಕರ ಶ್ರಮವನ್ನು ನೆನೆದ ಸಂತೋಷ್ ರೈ ಅವರು ಕೆಲ ಕ್ಷಣ ಭಾವುಕರಾದ ಘಟನೆಯು ನಡೆಯಿತು.
ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಹುತ್ತದ ರೂಪದಲ್ಲಿ ನಾಗನ ಆರಾಧನೆ ನಡೆಯುವ ನಳೀಲು ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮಕಲಶೋತ್ಸವ ಅರ್ಥಪೂರ್ಣ ರೀತಿಯಲ್ಲಿ ಸಂಪನ್ನಗೊಂಡಿದೆ. ಇಲ್ಲಿನ ಎಲ್ಲ ಕಾರ್ಯವನ್ನು ಸ್ಮರಣ ಸಂಚಿಕೆಯ ಮೂಲಕ ಕಾಪಿಡುವ ಪ್ರಯತ್ನವು ನಡೆಯಲಿದೆ.ತಾಳ್ಮೆ,ಶಿಸ್ತುಬದ್ಧತೆಯಿಂದ ಸಂತೋಷ್ ರೈ ನೇತೃತ್ವದ ತಂಡ ಅಪೂರ್ವ ರೀತಿಯಲ್ಲಿ ದೇವರ ಕಾರ್ಯ ಮಾಡಿದ್ದಾರೆ ಎಂದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಖಜಾಂಚಿ ಡಾ.ಸುಚೇತ ಜೆ ಶೆಟ್ಟಿ ನಳೀಲು, ಉಪಾಧ್ಯಕ್ಷ ನಾರಾಯಣ ರೈ ಮೊದೆಲ್ಕಾಡಿ, ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಶುಭ ಹಾರೈಸಿದರು.ಕೆಯ್ಯೂರು ಕೆಪಿಎಸ್ ಉಪ ಪ್ರಾಂಶುಪಾಲ ವಿನೋದ್ ಕುಮಾರ್, ದೇವಿಪ್ರಸಾದ್ ಮಣಿಯಾಣಿ , ಸುರೇಶ್ ರೈ ವಿಟ್ಲ, ವಸಂತ ರೈ ಮಾಡಾವು, ಅಮರನಾಥ ರೈ ಬಾಕಿಜಾಲು, ಕಿರಣ್ ಪ್ರಸಾದ್ ಕುಂಡಡ್ಕ ,ವಿದ್ಯಾಧರ ಗೌಡ ಪಾರ್ಲ, ಜಗನ್ನಾಥ ರೈ ಮಣಿಕ್ಕಾರ, ಕಿಶೋರ್ ಕುಮಾರ್ ರೈ ನಳೀಲು, ಪುಷ್ಪಾವತಿ ರೈ ಅಡ್ಕ ಪಾಲ್ತಾಡಿ, ಸುರೇಶ್ ರೈ ಕೊಲ್ಯ, ಡಾ.ವೀಣಾ ಸಂತೋಷ್ ರೈ ನಳೀಲು, ಪ್ರವೀಣ್ ರೈ ನಡುಕೂಟೇಲು, ಸುಧಾಕರ ರೈ ಪಾಲ್ತಾಡಿ, ಶಶಿಕುಮಾರ್ ನೆಲ್ಲಿಕುಮೇರ್, ಸತೀಶ್ ರೈ ನಳೀಲು, ಬೇಬಿ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು. ಮೀನಾಕ್ಷಿ ವಿ ರೈ ಮಾಡಾವು ಪ್ರಾರ್ಥಿಸಿದರು. ಪ್ರವೀಣ್ ಚೆನ್ನಾವರ ಸ್ವಾಗತಿಸಿ, ಸುಬ್ರಾಯ ಗೌಡ ವಂದಿಸಿದರು. ಕೆ.ವಿ.ಗಣೇಶ್ ಪೆರುವಾಜೆ ನಿರೂಪಿಸಿದರು.