ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿಯವರಿಂದ ನಗದು ಬಹುಮಾನ ಘೋಷಣೆ
ವಿಟ್ಲ: ಅಡ್ಯನಡ್ಕದಲ್ಲಿ ನಡೆದ ಕರ್ಣಾಟಕ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಂದ 25, 70, 918 ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ನಡೆಸಿದ ತಂಡಕ್ಕೆ ದ.ಕ.ಜಿಲ್ಲಾ ಎಸ್ಪಿ ರಿಷ್ಯಾಂತ್ ರವರು ನಗದು ಬಹುಮಾನ ಘೋಷಿಸಿದ್ದಾರೆ.
ಬಂಟ್ವಾಳ ತಾಲೂಕು ಬಿಮೂಡ ಗ್ರಾಮದ ಗೂಡಿನ ಬಳಿ ಜುಮ್ಮಾ ಮಸೀದಿ ಬಳಿಯ ನಿವಾಸಿ ಇಸ್ಮಾಯಿಲ್ ರವರ ಪುತ್ರ ಮಹಮ್ಮದ್ ರಫೀಕ್ ಅಲಿಯಾಸ್ ಗೂಡಿನಬಳಿ ರಫೀಕ್ (35 ವ.), ಮಂಜೇಶ್ವರ ತಾಲೂಕಿನ ಉಪ್ಪಳ ಮೊಗ್ರಾಳ ನಿವಾಸಿ ಅಬ್ದುಲ್ ಕುಂಞಿರವರ ಪುತ್ರ ಇಬ್ರಾಹಿಂ ಖಲಂದರ್ (41 ವ.), ಹಾಗೂ ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಗಾಳಿಯಡ್ಕ ದಿ.ಐತ ರವರ ಪುತ್ರ ದಯಾನಂದ ಎಸ್.(37 ವ.) ಬಂಧಿತ ಆರೋಪಿಗಳಾಗಿದ್ದು, ಉಳಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕಿನ ಹಿಂಭಾಗದ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದ ಘಟನೆ ಫೆ.8ರಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿತ್ತು.
ಕಳವು ಕೃತ್ಯದಲ್ಲಿ ಭಾಗಿಯಾದವರೆಲ್ಲರೂ ಕಳವು ನಡೆಸಿದ ಬಳಿಕ ಕೇರಳಕ್ಕೆ ಪಲಾಯನ ನಡೆಸಿದ ತಂಡ ಅಲ್ಲಿಂದ ಎಲ್ಲರೂ ಬೇರ್ಪಟ್ಟು ಬೇರೆ ಬೇರೆ ಕಡೆಗಳಿಗೆ ತೆರಳಿದ್ದರೆನ್ನಲಾಗಿದೆ. ಬ್ಯಾಂಕ್ ನ ಹಿಂಭಾಗ ಪೊದರುಗಳಿಂದ ಆವೃತವಾಗಿದ್ದು, ಈ ದಾರಿಯಾಗಿ ಬಂದ ಕಳ್ಳರು ಬ್ಯಾಂಕ್ ನ ಹಿಂಭಾಗದ ಕಿಟಕಿಯ 8 ಸರಳುಗಳನ್ನು ಕಬ್ಬಿಣ ತುಂಡರಿಸುವ ಗರಗಸ ಬಳಸಿ ತುಂಡರಿಸಿ ಬಳಿಕ ಒಳಗೆ ನುಸುಳಿದ್ದರು. ಬಳಿಕ ಬ್ಯಾಂಕ್ ನ ಒಳಗಿದ್ದ 17,28,735 ರೂ ನಗದು ಹಾಗೂ 696.21 ಗ್ರಾಂ ಚಿನ್ನಭರಣ ಹಾಗೂ 1,00,000 ರೂ ಮೌಲ್ಯದ ಬೆಳ್ಳಿ ಕಳ್ಳತನ ಮಾಡಲಾಗಿತ್ತು. ಗ್ರಾಹಕರ ವೈಯಕ್ತಿಕ ಲಾಕರ್ ಗಳ ಪೈಕಿ ನಾಲ್ಕನ್ನು ತೆರೆಯುವಲ್ಲಿ ತಂಡ ಯಶಸ್ವಿಯಾಗಿದೆ. ಉಳಿದಂತೆ ಅಡವಿರಿಸಿದ ಚಿನ್ನಾಭರಣವಿದ್ದ ಸೇಫ್ ಲಾಕರ್ ನ ಬಾಗಿಲನ್ನು ಗ್ಯಾಸ್ ಕಟ್ಟರು ಬಳಸಿ ತುಂಡರಿಸುವ ಪ್ರಯತ್ನ ನಡೆದಿದೆಯಾದರೂ ಅದು ವಿಫಲವಾಗಿತ್ತು.
ವೈಯ್ಯಕ್ತಿಕ ಸೇಫ್ ಲಾಕರ್ ಪೈಕಿ ನಾಲ್ಕನ್ನು ತೆರೆಯಲಾಗಿತ್ತಾದರೂ ಈ ಪೈಕಿ ಎರಡರಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳರು ದೋಚಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದೆ. ಬಂಧಿತರಿಂದ ರೂ 2,40,700 ನಗದು , ಕಳ್ಳತನದ ಹಣದಿಂದ ಖರೀದಿಸಿದ ೨ಲಕ್ಷ ರೂಪಾಯಿ ಮೌಲ್ಯದ ಗೃಹಉಪಯೋಗಿ ಸಾಮಗ್ರಿ, ರೂ 12,48,218 ಮೌಲ್ಯದ ಚಿನ್ನಾಭರಣ, ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕೆಎ-01-ಎನ್‌ಜಿ-2227ನೇ ನೊಂದಣಿ ನಂಬ್ರದ ಒಂದು ಬ್ರೀಝಾ ಕಾರು, ಒಂದು ಗ್ಯಾಸ್ ಕಟರ್ ಹಾಗೂ ಇತರೆ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾದೀನಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ ರೂ 25,70,918 ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳಾದ ಮಹಮ್ಮದ್ ರಫೀಕ್ ಅಲಿಯಾಸ್ ಗೂಡಿನ ಬಳಿ ರಫೀಕ್ ಎಂಬಾತನ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 2, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸ್ ಠಾಣೆಯಲ್ಲಿ 2, ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ 1, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ 1, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1, ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಠಾಣಾ 4, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಠಾಣಾಯಲ್ಲಿ 1 , ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 6 , ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ 1, ಉಡುಪಿ ಜಿಲ್ಲೆಯಲ್ಲಿ 3, ವಿಟ್ಲ ಪೊಲೀಸ್ ಠಾಣೆಯಲ್ಲಿ 1 ಒಟ್ಟು 23 ಪ್ರಕರಣಗಳು ದಾಖಲಾಗಿದೆ.
ಇಬ್ರಾಹಿಂ ಕಲಂದರ್ ಎಂಬಾತನ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 2, ವಿಟ್ಲ ಪೊಲೀಸ್ ಠಾಣೆಯಲ್ಲಿ 3, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 1, ಮೂಡಬಿದ್ರೆ ಠಾಣೆಯಲ್ಲಿ 1, ಕೇರಳದ ಕುಂಬಳೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣಗಳಿದ್ದು, ಎಲ್ಲಾ ಠಾಣೆಗಳಲ್ಲಾಗಿ ಒಟ್ಟು 8 ಪ್ರಕರಣಗಳು ದಾಖಲಾಗಿದೆ. ದಯಾನಂದ ಎಸ್. ರವರ ಇದು ಪ್ರಥಮ ಪ್ರಕರಣವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಶೀಘ್ರ ಬಂಧಿಸುವ ಭರವಸೆ ನೀಡಿದ್ದಾರೆ.
ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯಂತ್ ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎನ್ ಎಂ ಹಾಗೂ ರಾಜೇಂದ್ರ ಡಿ ಎಸ್ ರವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯ ಪ್ರಸಾದ್ ರವರ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಹೆಚ್ ಈ ರವರ ನೇತ್ರತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್, ಉದಯರವಿ, ಹರೀಶ್ ಕುಮಾರ್, ವಿದ್ಯಾ ಕೆ.ಜೆ. ಸಿಬ್ಬಂಧಿಗಳಾದ ವೆಂಕಟರಮಣ ಗೌಡ, ಪ್ರವೀಣ್ ಮೂರುಗೋಳಿ, ಉದಯ ರೈ, ರಕ್ಷಿತ್ ರೈ , ಪ್ರವೀಣ್ ರೈ ಪಾಲ್ತಾಡಿ, ಅದ್ರಾಮ, ಕರುಣಾಕರ, ರಾಹುಲ್ ರಾವ್, ಶ್ರೀಧರ ಸಿ ಎಸ್, ಜಗದೀಶ್ ಅತ್ತಾಜೆ, ಹೇಮರಾಜ್, ಅಶೋಕ್, ವಿವೇಕ್ ಕೆ., ಕುಮಾರ್ ಹೆಚ್.ಕೆ. , ಸಂಪತ್, ದಿವಾಕರ್, ಸಂತೋಷ್ ,ಕುಮಾರ್ ಮಾಯಪ್ಪರವರು ಭಾಗವಹಿಸಿದ್ದಾರೆ.