ಅಧ್ಯಕ್ಷ ಮಾಮಚ್ಚನ್ ಎಂ, ಉಪಾಧ್ಯಕ್ಷ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್
ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ಸಿಟಿ ಆಸ್ಪತ್ರೆಯ ಬಳಿಯ ಡಾಯಸ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜುಗಳ ಶಿಕ್ಷಕರ, ಉಪನ್ಯಾಸಕರ, ನಿವೃತ್ತ ಶಿಕ್ಷಕರು, ನಿವೃತ್ತ ಉಪನ್ಯಾಸಕರ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಒಳಗೊಂಡು, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಕೇಂದ್ರ ಕಛೇರಿಯಾಗಿರುವ ಶಿಕ್ಷಕರ ಸಹಕಾರ ಸಂಘ ನಿ. ಪುತ್ತೂರು ಈಗಾಗಲೇ ಆಸ್ತಿತ್ವಕ್ಕೆ ಬಂದಿದೆ.
ಈ ಶಿಕ್ಷಕರ ಸಹಕಾರ ಸಂಘ ನಿ. ಇದರ ನಿರ್ದೇಶಕ ಮಂಡಳಿಗೆ ಚುನಾವಣಾ ಪ್ರಕ್ರಿಯೆಯು ಇತ್ತೀಚೆಗೆ ಜಿಲ್ಲಾ ಚುನಾವಣಾಧಿಕಾರಿ ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ ಮಂಗಳೂರು ಇದರ ಸಹಾಯಕ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯರವರ ನೇತೃತ್ವದಲ್ಲಿ ನೆರವೇರಿತ್ತು. ಸ್ಥಾಪಕಾಧ್ಯಕ್ಷರಾಗಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ. ಹಾಗೂ ಉಪಾಧ್ಯಕ್ಷರಾಗಿ ಕುಡಿಪಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಪ್ರಭಾರ ಮುಖ್ಯಗುರು ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಶ್ರೀಕಾಂತ್ ನಾಯ್ಕ್ ಎಂ, ಬಾಬು ಟಿ, ಮೋಲಿ ಫರ್ನಾಂಡೀಸ್, ಸುಮತಿ ಎ.ಆರ್, ಅಬ್ದುಲ್ ಬಶೀರ್(ಸಾಮಾನ್ಯ ಸ್ಥಾನ), ರತ್ನಕುಮಾರಿ, ಸ್ಮಿತಾಶ್ರೀ ಬಿ(ಮಹಿಳಾ ಮೀಸಲು ಸ್ಥಾನ), ಮೋನಪ್ಪ ಎಂ, ಗಿರೀಶ್ ಡಿ(ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನ), ಸುನಿಲ(ಪರಿಶಿಷ್ಟ ಜಾತಿ ಮೀಸಲು ಸ್ಥಾನ), ರಾಜಶೇಖರ ಎಂ(ಪರಿಶಿಷ್ಟ ಪಂಗಡ ಮೀಸಲು ಸ್ಥಾನ) ಆಯ್ಕೆಯಾಗಿರುತ್ತಾರೆ.
ಮಾಮಚ್ಚನ್ ಎಂ ಪರಿಚಯ:
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಾಮಚ್ಚನ್ ಎಂ.ರವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಪುತ್ತೂರು ತಾಲೂಕಿನ ಕಾರ್ಯದರ್ಶಿಯಾಗಿ/ಅಧ್ಯಕ್ಷರಾಗಿ(2 ಬಾರಿ), ಜಿಲ್ಲಾ ಕೋಶಾಧಿಕಾರಿಯಾಗಿ, ಕಡಬ ತಾಲೂಕಿನ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ, ಜಿಲ್ಲೆಯ ಉಪಾಧ್ಯಕ್ಷರಾಗಿ, ಪ್ರಸ್ತುತ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಪುತ್ತೂರು ತಾಲೂಕು ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿಯಾಗಿ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ.
ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಪರಿಚಯ:
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್‌ರವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪುತ್ತೂರು ತಾಲೂಕಿನ ಕೋಶಾಧಿಕಾರಿಯಾಗಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿಯಾಗಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.