ಪುತ್ತೂರು: ಇರ್ದೆ ಭಗತ್ ಸಿಂಗ್ ಸೇವಾ ಯುವಶಕ್ತಿ ಸಂಘದ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಭಗತ್ ಸಿಂಗ್ ಭಾವಚಿತ್ರ ಮುದ್ರಿಸಿದ್ದು ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಅಧಿಕಾರಿಗಳು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಭಗತ್ ಸಿಂಗ್ ಭಾವಚಿತ್ರ ಇರುವುದು ಅಧಿಕಾರಿಗಳ ನಡುವೆ ಗೊಂದಲಕ್ಕೆ ಕಾರಣವಾಗಿತ್ತು. ಸಹಾಯಕ ಚುನಾವಣಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹೋಪಾತ್ರ ಈ ಕುರಿತು ಪರಿಶೀಲನೆ ನಡೆಸಿ ಗೊಂದಲ ನಿವಾರಿಸಿದ ಘಟನೆ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ನಡೆದಿದೆ.
ದೇಶಾದ್ಯಂತ ಚುನಾವಣಾ ನೀತಿ ಸಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಖಾಸಗಿ ಸಾರ್ವಜನಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯ ಮೇಲು ನಿಗಾ ವಹಿಸಲಾಗಿದ್ದು, ಆಮಂತ್ರಣ ಪತ್ರಿಕೆಗಳಲ್ಲಿ ಯಾವುದೇ ವ್ಯಕ್ತಿಯ ಹೆಸರು, ಚಿತ್ರ ಪ್ರಕಟಿಸದಂತೆ ಚುನಾವಣಾ ಇಲಾಖೆ ಸೂಚನೆ ನೀಡಿದೆ. ಭಗತ್ ಸಿಂಗ್ ಸೇವಾ ಯುವಶಕ್ತಿ ಸಂಘದ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಭಗತ್ ಸಿಂಗ್ ಫೋಟೋವನ್ನು ಮುದ್ರಿಸಲಾಗಿದ್ದು , ಸ್ವಾತಂತ್ರ್ಯ ಹೋರಾಟಗಾರನ ಭಾವಚಿತ್ರವಿರುವ ಕಾರಣ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಕುರಿತು ಪುತ್ತೂರು ಚುನಾವಣಾ ಕಚೇರಿಯ ಸಿಬ್ಬಂದಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಮಾಹಿತಿ ತಿಳಿದ ಪುತ್ತೂರು ಸಹಾಯ ಆಯುಕ್ತರು ಪರಿಶೀಲನೆ ನಡೆಸಿ, ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದು ಭಾವಚಿತ್ರ ಸಹಿತ ಆಮಂತ್ರಣ ಪತ್ರಿಕೆ ಮತ್ತು ಕಾರ್ಯಕ್ರಮಕ್ಕೆ ಅನುಮತಿ ನೀಡಿ ಗೊಂದಲ ನಿವಾರಿಸಿದರು.