ಪೆರಾಬೆ: ಗುಜುರಿ ಸಾಮಾಗ್ರಿಗಳನ್ನು ಕೇಳುತ್ತಾ ಸುಳ್ಯ ತಾಲೂಕಿನ ಪಲ್ಲೋಡಿಯ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದವರು ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಕಡಬ ತಾಲೂಕಿನ ಪೆರಾಬೆ ಗ್ರಾಮದ ಸಾಲ್ತಡ್ಕ ನಿವಾಸಿ ಶಾಕಿರ್(22ವ.)ಎಂಬವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಾ.21ರಂದು ಬೆಳಿಗ್ಗೆ ತಂದೆಯೊಂದಿಗೆ ಗುಜುರಿ ಸೊತ್ತುಗಳನ್ನು ಸಂಗ್ರಹಿಸಲು ಐವತೊಕ್ಲು ಗ್ರಾಮದ ಪಂಜ ಕಡೆಗೆ ಬಂದು ಅಲ್ಲಿಂದ ಪಲ್ಲೋಡಿ ಎಂಬಲ್ಲಿ ಗುಜುರಿ ಸಾಮಾಗ್ರಿಗಳನ್ನು ಕೇಳುತ್ತಾ ಪಲ್ಲೋಡಿಯ ರಸ್ತೆಯಲ್ಲಿ ಹೋಗುತ್ತಿರುವಾಗ ಕೆಎ೦4, ಎಂಜಿ-9911ನೇ ಕೆಂಪು ಬಣ್ಣದ ಅಲ್ಟೋ ಕಾರಿನಲ್ಲಿ ಬಂದವರು ನಮ್ಮ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿ ಅದರ ಚಾಲಕನು ಕಾರಿನಿಂದ ಕೆಳಗೆ ಇಳಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಇಬ್ಬರಿಗೂ ಹಲ್ಲೆ ನಡೆಸಿದ್ದಾರೆ. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿಯೂ ಇಬ್ಬರಿಗೂ ಹಲ್ಲೆ ನಡೆಸಿದ್ದಾರೆ. ಯಾಕೆ ಹಲ್ಲೆ ನಡೆಸುತ್ತೀರಾ ಎಂದು ಕೇಳಿದಾಗ ನೀವು ಗುಜುರಿ ಹೆಕ್ಕುವವರು ಮನೆಯಲ್ಲಿ ಯಾರೂ ಇಲ್ಲದಿದ್ದರೆ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗುತ್ತೀರಿ ಎಂದು ಹೇಳಿ, ಮುಂದಕ್ಕೆ ನಮ್ಮ ಮನೆಯ ಬಳಿ ಗುಜುರಿ ವ್ಯಾಪಾರಕ್ಕೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿರುತ್ತಾರೆ ಎಂದು ಶಾಕಿರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣಾ ಅ.ಕ್ರ ನಂಬ್ರ: 17/2024 ಕಲಂ: 341, 504, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.