ರಾಮಕುಂಜ: ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ತಯಾರಾಗುವ ನಿಟ್ಟಿನಲ್ಲಿ ವಿಶೇಷ ಕ್ರ್ಯಾಶ್ ಕೋರ್ಸ್ ತರಗತಿಗಳ ಉದ್ಘಾಟನೆಯು ನಡೆಯಿತು. ಕಡಿಮೆ ಅಥವಾ ತ್ವರಿತ ಸಮಯದಲ್ಲಿ ಮುಂಬರುವ ಸಿಇಟಿ ನೀಟ್ ಜೆಇಇ ಪರೀಕ್ಷೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ನಡೆಯುವ ಈ ವಿಶೇಷ ತರಗತಿಗಳ ಉದ್ಘಾಟನೆಯನ್ನು ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಸೀಮಿತವಾದ ಗುರಿಯನ್ನು ಇರಿಸದೆ, ಅತ್ಯುನ್ನತ ಮಟ್ಟದ ಗುರಿಯನ್ನು ಹೊಂದಬೇಕು. ಒಮ್ಮೆ ಒಂದು ಗುರಿಯನ್ನು ಹೊಂದಿದ ನಂತರ ಅದರಿಂದ ದೂರ ಸರಿಯುವ ಅಥವಾ ಅದನ್ನು ನಿರ್ಲಕ್ಷ್ಯ ಮಾಡುವಂತಹ ಕೆಲಸವನ್ನು ಮಾಡಬಾರದು. ಸದಾ ಅದರ ಕಡೆಗೆ ಗಮನವನ್ನು ಕೊಟ್ಟು, ಕೊನೆಯ ಕ್ಷಣದವರೆಗೂ ಅದರ ಕುರಿತಾಗಿಯೇ ಕೆಲಸ ಮಾಡಬೇಕು. ಸಿಇಟಿ ನೀಟ್ ಪರೀಕ್ಷೆಗೆ ಅಂತಿಮ ತಯಾರಿಯನ್ನು ಮಾಡುವ ನಿಟ್ಟಿನಲ್ಲಿ ನೀವೆಲ್ಲರೂ ಇಲ್ಲಿ ಸೇರಿದ್ದೀರಿ, ನಿಮ್ಮ ಪ್ರಯತ್ನ ಫಲಿಸಲಿ. ಉತ್ತಮ ಭವಿಷ್ಯ ನಿಮ್ಮದಾಗಲಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ. ಮಾತನಾಡಿ, ಸಿಇಟಿ, ನೀಟ್, ಜೆಇಇನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ವಿಶೇಷ ಪರಿಣತರಿಂದ ನಡೆಸಲ್ಪಡುವ ಈ ತರಗತಿಗಳ ಬಗ್ಗೆ ಹಾಗೂ ಇನ್ನಿತರ ವ್ಯವಸ್ಥೆಗಳ ಬಗ್ಗೆ ತಿಳಿಸಿದರು. ಹಿರಿಯ ಉಪನ್ಯಾಸಕರಾದ ಬಿ.ಎಸ್.ಕಾರಂತ್ರವರು ಬೆಳಿಗ್ಗೆ 9 ರಿಂದ ಸಂಜೆ 8 ಗಂಟೆವರೆಗೆ ನಡೆಯುವ ಈ ವಿಶೇಷ ತರಗತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಪೋಷಕರಾದ ಮಹಾಬಲ ಶೆಟ್ಟಿಯವರು ಅನಿಸಿಕೆ ವ್ಯಕ್ತಪಡಿಸಿದರು. ಹಿರಿಯ ಉಪನ್ಯಾಸಕರಾದ ವಿಶ್ವೇಶ್ವರ ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಸ್ವಾತಿ ಸ್ವಾಗತಿಸಿ, ವಂದಿಸಿದರು.