ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಸ್ಕೌಟ್ಸ್ ಗೈಡ್ಸ್, ಕಬ್ – ಬುಲ್ ಬುಲ್ ವಿದ್ಯಾರ್ಥಿಗಳ ವಾರ್ಷಿಕ ಶಿಬಿರವು ಮಾ.29 ಮತ್ತು 3೦ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಳಿ ಇಲ್ಲಿ ನಡೆಯಿತು.
ಗೋಮಾತೆಯನ್ನು ಪೂಜಿಸುವ ಮೂಲಕ ವಿನೂತನವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಂಚಾಲಕ ಯೋಗೀಂದ್ರ ಭಟ್ ಉಳಿ ಇವರು ಮಾತನಾಡಿ “ನಮ್ಮ ನಾಡಿನಲ್ಲಿರುವ ವೈವಿಧ್ಯತೆಗಳನ್ನು ಇತರ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ವಿದ್ಯಾರ್ಥಿಗಳಾದ ನೀವು ತಂದೆ- ತಾಯಿ ಹಾಗೂ ದೇಶದ ಬಗ್ಗೆ ಅಭಿಮಾನವನ್ನು ಹೊಂದಿರಬೇಕು ಎಂದರು”. ನಂತರ ಮಾತನಾಡಿದ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ನ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ. ಇವರು ಸಂಸ್ಥೆಯ ಕಾರ್ಯ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಜಯಪ್ರಸಾದ್ ಕಡಮಜೆ ಮಾತನಾಡಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಹೊಂದಿರಬೇಕು, ಅಲ್ಲದೇ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದರು. ನಂತರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಂಚಾಲಕ ಯೋಗೀಂದ್ರ ಭಟ್ ದಂಪತಿಗಳನ್ನು ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಗೈಡ್ಸ್ ಶಿಕ್ಷಕಿ ಶಶಿಕಲಾ ಹಾಗೂ ಕಬ್ ಶಿಕ್ಷಕಿ ಭವ್ಯ ವೈ ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರದ ನಾಯಕಿ ಸ್ಕೌಟ್ಸ್ ಶಿಕ್ಷಕಿ ಶ್ವೇತ ವಂದಿಸಿದರು. ನಂತರ ನಡೆದ ಹಲವಾರು ಚಟುವಟಿಕೆಗಳಲ್ಲಿ ಸುಮಾರು 126 ಶಿಬಿರಾರ್ಥಿಗಳು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು. ಸ್ಕೌಟ್ಸ್- ಗೈಡ್ಸ್, ಕಬ್ – ಬುಲ್ ಬುಲ್ ಶಿಕ್ಷಕಿಯರು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಶಿಬಿರವು ವಿದ್ಯಾರ್ಥಿಗಳಿಗೆ ದೈಹಿಕವಾಗಿ, ಮಾನಸಿಕವಾಗಿ ಕ್ರಿಯಾಶೀಲರಾಗಲು ಸಹಾಯ ಮಾಡಿತು. ಇದು ಅವರಿಗೆ ಆತ್ಮವಿಶ್ವಾಸವನ್ನು, ನಾಯಕತ್ವದ ಗುಣಗಳನ್ನು, ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಯಿತು.