ನೆಲ್ಯಾಡಿ: ಲೋಕಸಭೆ ಚುನಾವಣೆ-ಮತದಾನ ಜಾಗೃತಿ

0

ನೆಲ್ಯಾಡಿ: ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತಿ, ತಾಲೂಕು ಆಡಳಿತ, ತಾಲೂಕು ಪಂಚಾಯತಿ ಕಡಬ, ತಾಲೂಕು ಸ್ವೀಪ್ ಸಮಿತಿ ಕಡಬ ಇದರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಎ.3ರಂದು ನೆಲ್ಯಾಡಿಯಲ್ಲಿ ನಡೆಯಿತು.
ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನ ಉಪನ್ಯಾಸಕ ಡಾ.ನೂರಂದಪ್ಪ ಅವರು ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಉತ್ತಮವಾಗಿ ನಡೆಯಬೇಕಾದರೆ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ಅದಕ್ಕಾಗಿ ಪ್ರತಿಯೊಂದು ಮತವು ಬಹಳ ಮುಖ್ಯವಾಗುತ್ತದೆ. ಚುನಾವಣೆಯಲ್ಲಿ ನಮ್ಮ ಕರ್ತವ್ಯವನ್ನು ಪಾಲನೆ ಮಾಡುವುದು ತುಂಬಾ ಮುಖ್ಯ ಎಂದು ಹೇಳಿದರು. ಎ.26ರಂದು ನಡೆಯುವ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಹೇಳಿದರು.
ಕಡಬ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ನೆಲ್ಯಾಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆನಂದ.ಎ., ಗ್ರಾಮ ಆಡಳಿತಾಧಿಕಾರಿ ಲಾವಣ್ಯ, ನೆಲ್ಯಾಡಿ ಮಂಗಳೂರು ವಿವಿ ಘಟಕ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಮೊದಲಾದವರು ಭಾಗವಹಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ.ಎ., ಅವರು ಮತದಾನ ಪ್ರತಿಜ್ಞೆ ಬೋಧಿಸಿದರು. ನೆಲ್ಯಾಡಿ ಪೇಟೆಯಲ್ಲಿ ಮತದಾನ ಜಾಗೃತಿ ಜಾಥಾ ನಡೆಯಿತು.

LEAVE A REPLY

Please enter your comment!
Please enter your name here