ಉಪ್ಪಿನಂಗಡಿ: ಇಲ್ಲಿನ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ಆಯೋಜನೆಗೊಳ್ಳುವ ಕಂಬಳದ ಬಗ್ಗೆ ಸುಳ್ಳು ಆರೋಪಗಳನ್ನು ಅರ್ಜಿಯೊಂದರಲ್ಲಿ ಬರೆದು, ಆ ಅರ್ಜಿಯಲ್ಲಿ ಕಜೆಕ್ಕಾರಿನ ನಾಗರಿಕರು ಎಂದು ಇಲ್ಲಿನ ಕೆಲವರ ಹೆಸರನ್ನು ಉಲ್ಲೇಖಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಯಾರೋ ದುಷ್ಕರ್ಮಿಗಳು ಸುಳ್ಳು ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಇದು ಸಮಾಜದ ಸಾಮರಸ್ಯ ಕೆಡಿಸುವ ಹಾಗೂ ತುಳುನಾಡ ಜನಪದ ಕ್ರೀಡೆ ಕಂಬಳಕ್ಕೆ ತಡೆಯೊಡ್ಡುವ ಪ್ರಯತ್ನವಾಗಿದೆ. ನಮ್ಮೂರಿನವರ ಹೆಸರಿನಲ್ಲಿ ನಮ್ಮವರ ಹೆಸರನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ದೂರು ನೀಡಿದ್ದೇವೆಯಲ್ಲದೆ, ರಾಜನ್ದೈವ ಶ್ರೀ ಕಲ್ಕುಡನ ಈ ಪುಣ್ಯ ಮಣ್ಣಿನಲ್ಲಿ ನಡೆಯುವ ಕಂಬಳದ ಬಗ್ಗೆ ಸುಳ್ಳು ಆರೋಪ ಮಾಡಿದ ಹಾಗೂ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಮ್ಮ ಹೆಸರುಗಳಿಗೆ ಮಸಿ ಬಳಿಯಲು ಪ್ರಯತ್ನಿಸಿದ ಈ ದುಷ್ಕರ್ಮಿಗಳನ್ನು ರಾಜನ್ದೈವ ಶ್ರೀ ಕಲ್ಕುಡ ಹಾಗೂ ಕಜೆಕ್ಕಾರಿನ ಸತ್ಯಸಾರಾಮಣಿ ದೈವಗಳೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಲಿದ್ದೇವೆ ಎಂದು ನೊಂದವರ ಪರವಾಗಿ ಕಜೆಕ್ಕಾರಿನ ಪ್ರಮುಖರಾದ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಜೆಕ್ಕಾರು ನಾಗರಿಕರು ಎಂಬ ಹೆಸರಿನಲ್ಲಿ ಅರ್ಜಿಯನ್ನು ತಯಾರಿಸಿ, ಅದರಲ್ಲಿ ದಿನಾಂಕ: 24-೦3-2024 ಎಂದು ನಮೂದಿಸಿ, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳದ ಹೆಸರಿನಲ್ಲಿ ನದಿ ದಂಡೆಯನ್ನು ಸಮತಟ್ಟುಗೊಳಿಸಿ ನದಿಯನ್ನು ವಿರೂಪ ಮಾಡಲಾಗಿದೆ. ಕಂಬಳದ ಸಂದರ್ಭ ನದಿ ನೀರು ಮಲೀನವಾಗುತ್ತದೆ. ಉಪ್ಪಿನಂಗಡಿ ಗ್ರಾ.ಪಂ.ನ ಕುಡಿಯುವ ನೀರಿನ ಸ್ಥಾವರ ಕೂಟೇಲು ಬಳಿಯಿದ್ದು, ಆ ನೀರು ಕಲುಷಿತವಾಗುತ್ತಿದೆ. ಇನ್ನು ಕಂಬಳದ ಹೆಸರಿನಲ್ಲಿ ಆಹಾರ ಮೇಳ, ಸಾಂಸ್ಕೃತಿಕ ವೈಭವ, ಬೋಟಿಂಗ್ ಮುಂತಾದ ಕಾರ್ಯಕ್ರಮ ನಡೆಯಲಿದೆ. ಇದೆಲ್ಲಾ ಆಡಂಬರದ ಕಾರ್ಯಕ್ರಮಗಳಾಗಲಿವೆ. ಆದ್ದರಿಂದ ನೀವುಗಳು ಸ್ಥಳ ಪರಿಶೀಲನೆ ನಡೆಸಿ, ಇದರ ಸಾಧಕ- ಬಾಧಕಗಳನ್ನು ಪರಿಶೀಲಿಸಬೇಕು. ಈ ಕಾರ್ಯಕ್ರಮಗಳನ್ನು ನಿಷೇಧಿಸಬೇಕೆಂದು ಕಜೆಕ್ಕಾರಿನ ಕೆಲವರ ಹೆಸರನ್ನು ನಮೂದಿಸಿ ಅರ್ಜಿಯನ್ನು ನೀಡಲಾಗಿದೆ. ಈ ಬಗ್ಗೆ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆದಾಗಲೇ ನಮಗೆ ಈ ಅರ್ಜಿಯ ಬಗ್ಗೆ ತಿಳಿದದ್ದು. ನಾವು ಇಂತಹ ಯಾವುದೇ ಅರ್ಜಿಯನ್ನು ನೀಡಿಲ್ಲ. ಕಿಡಿಗೇಡಿಗಳ ಈ ಕೃತ್ಯವು ನಮಗೆ ಬೇಸರ ತರಿಸಿದೆ. ಕಂಬಳವೆನ್ನುವುದು ತುಳುನಾಡಿನ ಜನಪದ ಕ್ರೀಡೆ. ಇಲ್ಲಿನ ಕಂಬಳ ಕರೆಯೆನ್ನುವುದು ನಮ್ಮ ಸಂಸ್ಕೃತಿಯನ್ನು ಹತ್ತೂರಿಗೆ ಪಸರಿಸದ ಜಾಗ. ಸರ್ವ ಧರ್ಮೀಯರು ಸಾಮರಸ್ಯ ಮೆರೆಯುವ ಕೇಂದ್ರ ಇದಾಗಿದ್ದು, ಇಲ್ಲಿನ ಹಳೆಗೇಟುವಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದ ನೇತ್ರಾವತಿ ನದಿ ಕಿನಾರೆಯಲ್ಲಿ, ರಾಜನ್ದೈವ ಶ್ರೀ ಕಲ್ಕುಡನ ಸಾನಿಧ್ಯವಿರುವ ಪುಣ್ಯ ಮಣ್ಣಿನಲ್ಲಿ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯವರಿಂದ ವರ್ಷಂಪ್ರತಿ ಕಂಬಳ ನಡೆಯುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಶಾಸಕರಾಗುವ ಮೊದಲೇ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾಗಿದ್ದವರು. ಅವರ ಸಾರಥ್ಯದಲ್ಲಿ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಇಲ್ಲಿ ಕಂಬಳ ನಡೆದುಕೊಂಡು ಬರುತ್ತಿದೆ. ಲಕ್ಷಾಂತರ ಜನ ಕಂಬಳ ವೀಕ್ಷಣೆ ನಡೆಸುತ್ತಾರೆ. ದೇಶ- ವಿದೇಶದಿಂದಲೂ ಕಂಬಳ ವೀಕ್ಷಣೆಗೆ ಇಲ್ಲಿಗೆ ಬರುತ್ತಾರೆ. ಇದರಿಂದ ನಮ್ಮ ಊರಿನ ಹೆಸರು ಹತ್ತೂರಿನಲ್ಲಿ ಬೆಳಗುವಂತಾಗಿದೆ. ಅಲ್ಲಿನ ವ್ಯಾಪಾರಿಗಳಿಗೂ ಆ ದಿನಗಳಲ್ಲಿ ಉತ್ತಮ ವ್ಯಾಪಾರವಾಗುತ್ತಿದೆ. ಪರಿಸರದ ವ್ಯಾಪಾರಿಗಳಿಗೂ ಆ ದಿನ ಉತ್ತಮ ವ್ಯಾಪಾರವಾಗುತ್ತಿದೆ. ಈ ಬಾರಿಯಂತು ಕಂಬಳದಲ್ಲಿ ಆಹಾರ ಮೇಳ, ಸಸ್ಯ ಮೇಳ, ನೇತ್ರಾವತಿ ನದಿ ನೀರಿನಲ್ಲಿ ಬೋಟಿಂಗ್ ರೈಡ್, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜೋಡಣೆ ಮಾಡಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಕಂಬಳವನ್ನು ‘ಉಬಾರ್ ಕಂಬಳ ಉತ್ಸವವನ್ನಾಗಿ’ ಆಚರಿಸಲಾಗಿದೆ. ಸಸ್ಯ ಮೇಳದಲ್ಲಿ ಸುಮಾರು ೭೦ ಸಾವಿರದಷ್ಟು ಸಸ್ಯಗಳು ಮಾರಾಟವಾಗಿದ್ದು, ಕಂಬಳ ಸಮಿತಿಯವರ ಉತ್ತಮ ಕಲ್ಪನೆಯು ಹಸೀರೀಕರಣಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದರೆ ಇದನ್ನು ಸಹಿಸದ ದುಷ್ಕರ್ಮಿಗಳು ಕಳ್ಳ ದಾರಿಯ ಮೂಲಕ ನಮ್ಮ ಹೆಸರುಗಳನ್ನು ದುರುಪಯೋಗಪಡಿಸಿಕೊಂಡು ಕಂಬಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದಾರಲ್ಲದೆ, ಎಲ್ಲರೊಂದಿಗೆ ಸೌಹಾರ್ದತೆಯಿಂದಿರುವ ನಮ್ಮ ಹೆಸರಿಗೂ ಮಸಿ ಬಳಿಯಲು ನೋಡಿದರೆ. ಈ ದೂರು ಕೊಟ್ಟವರು ತಾಕತ್ತಿದ್ದರೆ ಎದುರು ನಿಂತು ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಲಿ. ದೂರು ಕೊಡುವುದಿದ್ದರೂ ಅವರ ಹೆಸರಿನಲ್ಲೇ ಕೊಡಲಿ. ಅದು ಬಿಟ್ಟು ರಣ ಹೇಡಿಗಳಂತೆ ಅಲ್ಲ ಎಂದರು.
ಇಂತಹ ಹೀನ ಮನಸ್ಸಿನವರು ಉಬಾರ್ ಕಂಬಳೋತ್ಸವ ನಿಲ್ಲಿಸಲು ಎಷ್ಟೇ ಪ್ರಯತ್ನಪಟ್ಟರೂ, ಈ ಬಾರಿ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಕಂಬಳ ನಡೆದಿದೆ. ಸರ್ವ ಧರ್ಮೀಯರೂ ಕುಟುಂಬ ಸಮೇತರಾಗಿ ಇದರಲ್ಲಿ ಭಾಗವಹಿಸಿ, ಆನಂದಿಸಿದ್ದಾರೆ. ಇದಕ್ಕೆ ಕಂಬಳದ ಮೇಲೆ ಹಾಗೂ ಉಪ್ಪಿನಂಗಡಿ ಕಂಬಳ ಸಮಿತಿಯ ಮೇಲೆ ಜನರಿಟ್ಟಿರುವ ಅಭಿಮಾನವೇ ಸಾಕ್ಷಿ. ನಮಗೂ ಕಂಬಳ ಸಮಿತಿಯವರಿಗೂ ಉತ್ತಮ ಬಾಂಧವ್ಯವಿದ್ದು, ವರ್ಷಂಪ್ರತಿ ಇದರಲ್ಲಿ ನಾವು ಖಷಿಯಿಂದ ಪಾಲ್ಗೊಳ್ಳುತ್ತೇವೆ. ನಮ್ಮೂರ ಹಬ್ಬವೆಂಬಂತೆ ಖುಷಿ ಪಡುತ್ತೇವೆ. ಇನ್ನಷ್ಟು ಕಂಬಳ ಸಮಿತಿಯೊಂದಿಗೆ ನಾವು ಗಟ್ಟಿಯಾಗಿ ನಿಲ್ಲುತ್ತೇವೆ ಎಂದ ಕೆ. ಬಾಲಕೃಷ್ಣ ಶೆಟ್ಟಿಯವರು, ನದಿ ಪಾವಿತ್ರ್ಯತೆಯ ಬಗ್ಗೆ ಅಷ್ಟು ಕಾಳಜಿಯುಳ್ಳವರು ಎಷ್ಟೋ ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಹೆಚ್ಚಿನ ಕಡೆ ತ್ಯಾಜ್ಯ ನೀರು, ಶೌಚ ನೀರು ನೇರವಾಗಿ ನೇತ್ರಾವತಿ ನದಿಯನ್ನು ಸೇರುತ್ತದೆ. ಅವರಿಗೆ ಅದು ಕಣ್ಣಿಗೆ ಕಾಣುತ್ತಿಲ್ಲವೆ. ಅದನ್ನು ಮೊದಲು ನಿಲ್ಲಿಸುವ ಪ್ರಯತ್ನ ಮಾಡಲಿ. ಕೂಟೇಲುವಿನಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಕುಡಿಯುವ ನೀರಿಗೆ ಆಶ್ರಯಿಸಿರುವುದು ನದಿಯ ಮೇಲ್ದಂಡೆಯಲ್ಲಿರುವ ಬಾವಿಯನ್ನು. ನದಿಯನ್ನಲ್ಲ. ಆ ನೀರು ಕೂಡಾ ಶುದ್ದೀಕರಣ ಘಟಕದಲ್ಲಿ ಶುದ್ಧೀಕರಿಸಿ ಮತ್ತೆ ಗ್ರಾ.ಪಂ. ಪೂರೈಕೆ ಮಾಡುತ್ತದೆ. ಇಲ್ಲಿನ ನದಿಯಲ್ಲಿ ಮೊದಲು ದಿಣ್ಣೆಗಳಿದ್ದು, ಅದರ ಮೇಲೆ ಕುರುಚಲು ಗಿಡಗಳು ಬೆಳೆದುಕೊಂಡಿತ್ತು. ಆದ್ದರಿಂದ ಸರಾಗವಾಗಿ ನೀರು ಹರಿಯಲು ಸಾಧ್ಯವಾಗದೇ ನೆರೆಗೂ ಕಾರಣವಾಗುತ್ತಿತ್ತು. ಆದರೆ ಇದನ್ನು ಸಮತಟ್ಟು ಮಾಡಿದ್ದರಿಂದ ಮುಂದಿನ ಮಳೆಗಾಲದಲ್ಲಿ ನದಿಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಿದೆ. ನದಿಯನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸುವವರು ಮೊದಲು ಇದನ್ನು ಅರ್ಥೈಸಿಕೊಳ್ಳಲಿ ಎಂದರು.
ಕಜೆಕ್ಕಾರ್ ಅಂಬೇಡ್ಕರ್ ಕಾಲನಿಯವರಿಗೆ ಈಗಿನ ಶಾಸಕರಾದ ಅಶೋಕ್ ರೈಯವರ ಮೇಲೆ ತುಂಬಾ ಅಭಿಮಾನವಿದೆ. ಯಾಕೆಂದರೆ ಇಂದು ಅವರ ಮನೆಯ ಅಡಿ ಸ್ಥಳ ಅವರ ಹೆಸರಿಗೆ ಆಗಿದೆಯೆಂದರೆ ಅದಕ್ಕೆ ಅಶೋಕ್ ಕುಮಾರ್ ರೈಯವರ ಪ್ರಯತ್ನ ಕಾರಣ. ಎಷ್ಟೋ ವರ್ಷಗಳಿಂದ ಮನೆಯ ಅಡಿ ಸ್ಥಳ ಅವರ ಹೆಸರಿಗೆ ಆಗದೇ ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದ ಇಲ್ಲಿನ 18 ಕುಟುಂಬಗಳಿಗೆ ಅಶೋಕ್ ರೈಯವರು ಶಾಸಕರಾಗುವ ಮೊದಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರಲ್ಲಿ ಮಾತನಾಡಿ ಕಜೆಕ್ಕಾರು ಅಂಬೇಡ್ಕರ್ ಕಾಲನಿಯ ನಿವಾಸಿಗಳ ಮನೆಯ ಅಡಿ ಸ್ಥಳವನ್ನು ಅವರವರ ಹೆಸರಿಗೆ ಆಗುವಂತೆ ಮಾಡಿದ್ದಾರೆ. ಈ ಉಪಕಾರವನ್ನು ಮರೆಯದ ಅವರು ಈಗಲೂ ಕಂಬಳ ಆಯೋಜನೆಗೆ ಮೊದಲು ಗಂಡು- ಹೆಣ್ಣೆಂಬ ಬೇಧವಿಲ್ಲದೆ ಕಂಬಳ ಕರೆಯ ಸುತ್ತಮುತ್ತಲು ಒಂದು ದಿನ ಸ್ವಚ್ಛತಾ ಶ್ರಮದಾನ ನಡೆಸುತ್ತಾರೆ. ಈ ರೀತಿ ಇನ್ನೊಬ್ಬರ ಹೆಸರನ್ನು ಉಲ್ಲೇಖಿಸಿ, ಸುಳ್ಳು ದೂರು ನೀಡುವ ಮೂಲಕ ನೀವಿಲ್ಲಿ ಕಜೆಕ್ಕಾರು ನಾಗರಿಕರನ್ನು ಮತ್ತು ತುಳುನಾಡ ಜನಪದ ಕ್ರೀಡೆ ಕಂಬಳವನ್ನು ಮಾತ್ರ ಅವಮಾನಿಸಿದ್ದು ಅಲ್ಲ. ಈ ಪುಣ್ಯ ಮಣ್ಣಿನಲ್ಲಿ ಸಾನಿಧ್ಯವನ್ನು ಹೊಂದಿರುವ ರಾಜನ್ದೈವ ಶ್ರೀ ಕಲ್ಕುಡ ಹಾಗೂ ಕಜೆಕ್ಕಾರಿನಲ್ಲಿರುವ ಶ್ರೀ ಸತ್ಯಸಾರಾಮಣಿ ದೈವಗಳನ್ನು. ಆದ್ದರಿಂದ ಈ ದೈವಗಳೇ ನಿಮಗೆ ಮುಂದಿನ ದಿನಗಳಲ್ಲಿ ನೀಡುತ್ತಾರೆ ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಕದಿಕ್ಕಾರು ಬೀಡು ಪ್ರವೀಣ್ ಕುಮಾರ್ ಜೈನ್, ಮೋಹನ್ದಾಸ್ ಶೆಟ್ಟಿ ಕಜೆಕ್ಕಾರು, ನರಸಿಂಹ ಶೆಟ್ಟಿ ಕಜೆಕ್ಕಾರು, ನವೀನ್ ಕುಮಾರ್ ಕಲ್ಯಾಟೆ ಉಪಸ್ಥಿತರಿದ್ದರು.