ಬೆಂಗಳೂರು: ಸಹಕಾರ ಸಂಘಗಳು ಸಂಗ್ರಹಿಸುತ್ತಿರುವ ಠೇವಣಿ ಮತ್ತು ವಿತರಿಸುವ ಸಾಲಗಳಿಗೆ ಬಡ್ಡಿ ದರ ನಿಗದಿ ಪಡಿಸುವ ಸಹಕಾರ ಸಂಘಗಳ ಅಧಿಕಾರಕ್ಕೆ ತಡೆ ನೀಡಿ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆಗೆ ಎ.4ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಹಕಾರ ಸಂಘಗಳ ಹಣವನ್ನು ಡಿಸಿಸಿ ಬ್ಯಾಂಕ್ ಅಥವಾ ಅಪೆಕ್ಸ್ ಬ್ಯಾಂಕ್ನಲ್ಲಿ ಇಡುವಂತೆಯೂ ಸರಕಾರ ಹೊರಸಿರುವ ಸುತ್ತೋಲೆ ಕಾನೂನು ಬಾಹಿರ ಎಂದು ಹೈಕೋರ್ಟ್ ತಿಳಿಸಿದೆ.
ಸಹಕಾರ ಸಂಘಗಳು ಸಂಗ್ರಹಿಸುತ್ತಿರುವ ಠೇವಣಿ ಮತ್ತು ವಿತರಿಸುವ ಸಾಲಗಳಿಗೆ ಬಡ್ಡಿ ದರ ನಿಗದಿ ಪಡಿಸುವ ಅಧಿಕಾರಕ್ಕೆ ರಾಜ್ಯ ಸರಕಾರ ತಡೆ ನೀಡಿ ಮತ್ತು ಸಹಕಾರ ಸಂಘಗಳು ತನ್ನ ಹಣವನ್ನು ಡಿಸಿಸಿ ಬ್ಯಾಂಕ್ ಅಥವಾ ಅಪೆಕ್ಸ್ ಬ್ಯಾಂಕ್ನಲ್ಲಿ ಇಡಬೇಕು ಎಂದು ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಬೆಳ್ತಂಗಡಿ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘ ಸಹಿತ 20ಕ್ಕೂ ಅಧಿಕ ಸಹಕಾರ ಸಂಘಗಳು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿದಾರರ ಪರ ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರು ವಾದ ಮಂಡಿಸಿದ್ದರು. ಸಹಕಾರ ಸಂಘಗಳು ಸಾಲಗಳ ಮೇಲೆ ನಿಗದಿ ಪಡಿಸುವ ಬಡ್ಡಿ ಇನ್ನಿತರ ವೆಚ್ಚಗಳು, ದರಗಳು ಹಾಗೂ ಠೇವಣಿಗಳ ಮೇಲೆ ನೀಡುವ ಬಡ್ಡಿ ಇತ್ಯಾದಿ ಅಂಶಗಳನ್ನು ನಿಗದಿಪಡಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಈ ಅಧಿಕಾರ ರಿಸರ್ವ್ ಬ್ಯಾಂಕ್ಗೆ ಮಾತ್ರ ಇದೆ. ಆದರೆ ರಿಸರ್ವ್ ಬ್ಯಾಂಕ್ ಈ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ. ಸಹಕಾರ ಸಂಘಗಳ ಹಣವನ್ನು ಡಿಸಿಸಿ ಬ್ಯಾಂಕ್ ಅಥವಾ ಅಪೆಕ್ಸ್ ಬ್ಯಾಂಕ್ನಲ್ಲಿ ಇಡಬೇಕು ಎಂದು ಸರಕಾರ ಹೊರಡಿಸಿರುವ ಸುತ್ತೋಲೆ ಕೂಡ ಕಾನೂನು ಬಾಹಿರವಾಗಿದೆ. ತಮ್ಮ ವ್ಯವಹಾರಗಳನ್ನು ನಡೆಸುವ ಸಂಪೂರ್ಣ ಅಧಿಕಾರ ಆಯಾಯ ಸೊಸೈಟಿಗಳಿಗೆ ಮಾತ್ರ ಇದೆ. ಅದು ಸಹಕಾರ ಸಂಘಗಳ ಸಂವಿಧಾನ ಬದ್ಧ ಹಕ್ಕಾಗಿದೆ ಎಂದು ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರು ಸಹಕಾರ ಸಂಘಗಳ ಹಣವನ್ನು ಡಿಸಿಸಿ ಬ್ಯಾಂಕ್ ಅಥವಾ ಅಪೆಕ್ಸ್ ಬ್ಯಾಂಕ್ನಲ್ಲಿ ಇಡಬೇಕು ಎಂಬ ಆದೇಶ ಸರಿಯಾದುದಲ್ಲ. 20 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಮುಳುಗಿದೆ ಎಂದು ನ್ಯಾಯಪೀಠದ ಗಮನ ಸೆಳೆದರು. ಇವರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ಸರಕಾರದ ಸುತ್ತೋಲೆಗೆ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಮುಂದೂಡಿದ್ದಾರೆ. ಸರಕಾರದ ಸುತ್ತೋಲೆಗೆ ತಡೆಯಾಜ್ಞೆ ನೀಡಿರುವ ಈ ಆದೇಶ ಕ್ರೆಡಿಟ್, ವಿವಿದೋದ್ದೇಶ, ಸೌಹಾರ್ದ ಸಹಿತ ರಾಜ್ಯದ ಎಲ್ಲಾ ಸಹಕಾರ ಸಂಘಗಳಿಗೆ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.