ಆಸ್ಪತ್ರೆಯ ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ – ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ ಆಡಳಿತ ಮಂಡಳಿ
ಸಿಬ್ಬಂದಿಗಳ ಹೊಂದಾಣಿಕೆಯ ಸೇವೆಯಿಂದ ಉತ್ತಮ ಬೆಳವಣಿಗೆ – ಡಾ. ಭಾಸ್ಕರ್ ಎಸ್
ವೈದ್ಯರ ಸಿಗುವ ಸೇವೆಗಿಂತ ಸಿಬ್ಬಂದಿಗಳ ಸೇವೆ ಬಹಳ ಮುಖ್ಯ – ಡಾ. ಎ.ಪಿ.ಭಟ್
ರೋಗಿಗಳು ಗುಣಮುಖರಾಗಿ ನಗುಮುಗದಿಂದ ಹೋಗಬೇಕು – ಡಾ. ಸೂರ್ಯನಾಥ
ಪುತ್ತೂರು: ಎ.1ರಂದು 15ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪುತ್ತೂರು ಸಿಟಿ ಆಸ್ಪತ್ರೆಯ 14ನೇ ವರ್ಷದ ವಾರ್ಷಿಕೋತ್ಸವ ಎ.7ರಂದು ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಸಿಗುವ ಸೇವೆಯ ಕುರಿತು ಸಾರ್ವಜನಿಕರಿಂದ ಬಂದ ಉತ್ತಮ ಪ್ರಶಂಸೆಗಳಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಸಿಬ್ಬಂದಿಗಳಿಗೆ ಕೃತಜ್ಞತೆ ಸಮರ್ಪಿಸಿದರು. ಮುಂದೆಯು ಸಿಬ್ಬಂದಿಗಳಿಗೆ ಇನ್ನಷ್ಟು ಉತ್ತಮ ಸೇವೆ ರೋಗಿಗಳಿಗೆ ಸಿಗುವಂತಾಗಲಿ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ನಿವೃತ್ತಿಗೆ ಸನ್ಮಾನ ಮತ್ತು ಸಿಬ್ಬಂದಿಗಳಿಗೆ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.
ಸಿಬ್ಬಂದಿಗಳ ಹೊಂದಾಣಿಕೆಯ ಸೇವೆಯಿಂದ ಉತ್ತಮ ಬೆಳವಣಿಗೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್ ಅವರು ಮಾತನಾಡಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸಮಯ ಕಡಿಮೆ. ಇಂತಹ ಸಂದರ್ಭ ಆಸ್ಪತ್ರೆ ನರ್ಸಿಂಗ್ ಸಿಬ್ಬಂದಿಗಳು, ವ್ಯವಸ್ಥಾಪಕರು, ಸಿಬ್ಬಂದಿಗಳ ಹೊಂದಾಣಿಕೆಯ ಕೆಲಸದಿಂದ ಆಸ್ಪತ್ರೆ ಉತ್ತಮ ರೀತಿಯಲ್ಲಿ ನಡೆಯಲು ಸಾಧ್ಯವಿದೆ. ಅಂತಹ ವಾತಾವರಣವನ್ನು ನಾವೆಲ್ಲ ವೈದ್ಯರು ಈ ಆಸ್ಪತ್ರೆಯಲ್ಲಿ ಕಂಡಿದ್ದೇವೆ. ಇದು ವರ್ಷದಿಂದ ವರ್ಷಕ್ಕೆ ಉತ್ತಮ ಬೆಳವಣಿಗೆಯನ್ನು ಕಂಡಿದ್ದೇವೆ. ಕೇವಲ 30 ಸಿಬ್ಬಂದಿಗಳಿಂದ ಆರಂಭಿಸಿದ ಆಸ್ಪತ್ರೆ ಇವತ್ತು 120 ಸಿಬ್ಬಂದಿಗಳನ್ನು ಹೊಂದಿಕೊಂಡು ಆಸ್ಪತ್ರೆ ಎಲ್ಲಾ ರೀತಿಯಲ್ಲಿ ಬೆಳವಣಿಗೆ ಕಂಡಿದ್ದೇವೆ. ಮುಂದೆಯೂ ಸಿಬ್ಬಂದಿಗಳು ಅವರವರ ಕೆಲಸದಲ್ಲಿ ಶ್ರಮ ಮತ್ತು ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡು ಬಂದರೆ ಆಸ್ಪತ್ರೆಯನ್ನು ಇನ್ನು ಸ್ವಲ್ಪ ದೊಡ್ಡದಾಗಿ ಮಾಡಬಹುದು. ಅಂತಹ ನಿರೀಕ್ಷೆಯನ್ನು ಸಿಬ್ಬಂದಿಗಳ ಮೇಲೆ ಇಟ್ಟುಕೊಂಡಿದ್ದೇವೆ ಎಂದ ಅವರು ಸಿಬ್ಬಂದಿಗಳು ಆಸ್ಪತ್ರೆ ನಿರ್ದಿಷ್ಟ ಕೆಲಸ ಮಾತ್ರವಲ್ಲದೆ ಆಸ್ಪತ್ರೆಗೆ ಬರುವ ಎಲ್ಲರಿಗೂ ಸಹಕಾರ ನೀಡುವ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಇದು ನಮ್ಮ ಆಸ್ಪತ್ರೆ ಎಂಬ ರೀತಿಯಲ್ಲಿ ಕೆಲಸ ಮಾಡಿ ಆಸ್ಪತ್ರೆಗೆ ಬಂದ ರೋಗಿಗಳ ಖಾಯಿಲೆಗಳನ್ನು ಶಮನಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಪ್ರತಿಜ್ಞೆ ಮಾಡುವ ಎಂದರು.
ವೈದ್ಯರ ಸೇವೆಗಿಂತ ಸಿಬ್ಬಂದಿಗಳ ಸೇವೆ ಬಹಳ ಮುಖ್ಯ:
ಪುತ್ತೂರು ಸಿಟಿ ಆಸ್ಪತ್ರೆಯ ಡಾ ಎ ಪಿ ಭಟ್ ಅವರು ಮಾತನಾಡಿ ಆಸ್ಪತ್ರೆಯ ಆರಂಭದಿಂದ ನಾನು ಇಲ್ಲಿ ಸಿಬ್ಬಂದಿಗಳ ನೋವು ನಲಿವಿಗೆ ಸ್ಪಂಧಿಸಿದ್ದೇನೆ. ಅವರ ನೋವನ್ನು ಅರ್ಥ ಮಾಡಿಕೊಂಡವನು. ರೋಗಿಗಳಿಗೆ ವೈದ್ಯರ ಸೇವೆ ಸಿಗುತ್ತದೆ. ಆದರೆ ಅದಕ್ಕೂ ಹೆಚ್ಚು ಸಿಬ್ಬಂದಿಗಳ ಸೇವೆ ಸಿಗುವುದು ಬಹಳ ಮುಖ್ಯ. ಇಂತಹ ಸಂದರ್ಭ ಆಸ್ಪತ್ರೆಯ ಹಿರಿಯ ಸಿಬ್ಬಂದಿಗಳ ಸೇವೆಗಳನ್ನು ಹೊಸಬರು ಕಲಿಯಬೇಕು ಎಂದರು.
ರೋಗಿಗಳು ಗುಣಮುಖರಾಗಿ ನಗುಮುಗದಿಂದ ಹೋಗಬೇಕು:
ಆಸ್ಪತ್ರೆಯ ನಿರ್ದೇಶಕ ಡಾ ಸೂರ್ಯನಾಥ ಅವರು ಮಾತನಾಡಿ 14 ವರ್ಷದ ಹಿಂದೆ ನಮಗೂ ನಮ್ಮ ಆಸ್ಪತ್ರೆ ಇಷ್ಟೊಂದು ದೊಡ್ಡದಾಗಿ ಬೆಳೆಯಬಹುದು ಎಂಬ ಅಂದಾಜು ಕೂಡಾ ಇರಲಿಲ್ಲ. ಕೊರೋನಾ ಬಂದಾಗ ಹಿನ್ನಡೆಯಾದರೂ ಮತ್ತೆ ಬೆಳೆದಿದ್ದೇವೆ. ಇದಕ್ಕೆ ಕಾರಣ ಸಿಬ್ಬಂದಿಗಳಿಂದ ರೋಗಿಗಳಿಗೆ ಸಿಗುವ ಉತ್ತಮ ಸೇವೆ. ಆಸ್ಪತ್ರೆಗೆ ಬಂದ ರೋಗಿಗಳು ಗುಣಮುಖರಾಗಿ ನಗುಮೊಗದಿಂದ ಹೋಗಬೇಕು ಎಂದು ಹೇಳಿದರು.
ನಿವೃತ್ತರಿಗೆ ಗೌರವ:
ಆಸ್ಪತ್ರೆಯ ಆರಂಭದಿಂದ ಸಿಬ್ಬಂದಿಯಾಗಿ ನಿವೃತ್ತರಾದ ರಾಮಯ್ಯ ಗೌಡ, ಜಯಲಕ್ಷ್ಮೀ ಮತ್ತು ಗಿರಿಜಾ ಅವರನ್ನು ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.
ಹೆಚ್‌ಪಿಎಲ್ ಟ್ರೋಪಿ ವಿಜೇತರಿಗೆ ಟ್ರೋಫಿ, ನಗದು ಬಹುಮಾನ ವಿತರಣೆ:
ಇತ್ತೀಚೆಗೆ ಕಿಲ್ಲೆಮೈದಾನದಲ್ಲಿ ನಡೆದ ಹೆಚ್‌ಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯ ಸಿಬ್ಬಂದಿಗಳು ವಿಜೇತರಾಗಿದ್ದರು. ಅವರಿಗೆ ಟ್ರೋಪಿ ಮತ್ತು ನಗದು ಬಹುಮಾನ ಲಭಿಸಿತ್ತು. ರೂ. 15,500 ನಗದು ಬಹುಮಾನವನ್ನು ಪಂದ್ಯಾಟದ 9 ಮಂದಿಗೆ ವಿತರಿಸುವ ನಿಟ್ಟಿನಲ್ಲಿ ಆಸ್ಪತ್ರೆಯಿಂದಲೂ ಅದಕ್ಕೆ ಹೆಚ್ಚುವರಿಯಾಗಿ ನಗದು ಸೇರಿಸಿ ತಲಾ ರೂ. 2ಸಾವಿರದಂತೆ ಪಂದ್ಯಾಟದಲ್ಲಿ ಭಾಗವಹಿಸಿದ ಕಪ್ತಾನ ಹರೀಶ್ ಗೌಡ, ಆನಂದ, ರಕ್ಷಿತ್, ಉದಯ ಕುಮಾರ್, ವಿಘ್ನಶ್, ಶರತ್ ಪಿ, ರೋಹಿತ್ ಕುಮಾರ್, ಲಕ್ಷ್ಮೀಶ ಅವರಿಗೆ ಆಸ್ಪತ್ರೆ ವೈದ್ಯರು ವಿತರಿಸಿದರು.
ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ:
ಆಸ್ಪತ್ರೆಯ ವಾರ್ಷಿಕೋತ್ಸವದ ಅಂಗವಾಗಿ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವೈದ್ಯರುಗಳು ಬಹುಮಾನ ವಿತರಿಸಿದರು. ಮಂಜುಳಾ ಭಾಸ್ಕರ್ ಮತ್ತು ಮನೋರಮಾ ಸೂರ್ಯನಾರಾಯಣ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಡಾ.ಶಶಿಧರ್ ಪಡೀಲ್ ಉಪಸ್ಥಿತರಿದ್ದರು. ಹಿರಿಯ ನ್ಯಾಯವಾದಿ ರಾಮಮೋಹನ್ ರಾವ್ ಬಹುಮಾನ ವಿತರಿಸಿದರು.
ಸಿಬ್ಬಂದಿ ವಿಘ್ನೇಶ್ ಪ್ರಾರ್ಥಿಸಿದರು. ಡಾ. ಅನಿಲ್ ಎಸ್ ಬೈಪಾಡಿತ್ತಾಯ ಸ್ವಾಗತಿಸಿ, ಡಾ. ಸೂರ್ಯನಾರಾಯಣ ಕೆ ವಂದಿಸಿದರು. ಡಾ. ಎಂ.ಎಸ್ ಶೆಣೈ, ಡಾ.ಎಸ್.ಎಮ್.ಪ್ರಸಾದ್, ಡಾ. ಎಸ್.ಎಸ್.ಜ್ಯೋಶಿ, ಡಾ. ರವೀಂದ್ರ, ಡಾ. ಎ.ಕೆ.ರೈ, ಡಾ. ವರುಣ್ ಭಾಸ್ಕರ್, ಡಾ. ಶೃತಿ ಅಲೆವೂರ್, ಡಾ.ಸ್ವಾತಿ ಆರ್ ಭಟ್, ಡಾ. ರಾಮ್‌ಕಿಶೋರ್, ಡಾ. ಪದ್ಮರಾಜ್, ಡಾ. ಮಧುರಾ ಭಟ್, ಡಾ.ಪ್ರತಿಭಾ ಭಟ್, ಡಾ. ಶ್ರೀಹರಿ, ಸ್ವಾಮಿ ಕಲಾಮಂದಿರದ ಮಾಧವ ಸ್ವಾಮಿ ಸಹಿತ ಹಲವಾರು ಮಂದಿ ವೈದ್ಯರು, ಆಸ್ಪತ್ರೆಯ ಹಿತೈಷಿಗಳು ಉಪಸ್ಥಿತರಿದ್ದರು. ಸಿಬ್ಬಂದಿ ವಿಘ್ನೇಶ್ ಪ್ರಾರ್ಥಿಸಿದರು. ಅಸ್ಪತ್ರೆಯ ವಿಷ್ಣುಕಿರಣ್ ಸ್ವಾಗತಿಸಿದರು. ಡಾ ಅನಿಲ್ ಎಸ್ ಬೈಪಾಡಿತ್ತಾಯ ವಂದಿಸಿದರು. ವಿಶ್ಚಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ಎಂ ಎಸ್ ಶೆಣೈ, ಮಧುರಾ ಭಟ್, ಆದರ್ಶ ಆಸ್ಪತ್ರೆಯ ಡಾ ಎಸ್ ಎಸ್ ಜ್ಯೋಶಿ, ಡಾ. ರಮಾದೇವಿ, ಸ್ವಾಮಿ ಕಲಾ ಮಂದಿರದ ಮಾಧವ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಲ್ಲಾ ಸಿಬ್ಬಂದಿಗಳಿಗೆ ವಾರ್ಷಿಕೋತ್ಸವದ ಅಂಗವಾಗಿ ಉಡುಗೊರೆ ನೀಡುವಾಗ ಅವರ ಆಯ್ಕೆಗೆ ತಕ್ಕಂತೆ ಇರುವುದಿಲ್ಲ ಎಂಬ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿಗಳಿಗೆ ತಲಾ ರೂ. 3ಸಾವಿರ ನಗದು ಕೊಡುಗೆಯನ್ನು ನೀಡಲಾಗುವುದು ಎಂದು ಡಾ. ಭಾಸ್ಕರ್ ಎಸ್ ಘೋಷಣೆ ಮಾಡಿದರು. ಇದೇ ಸಂದರ್ಭ ವಂದನಾರ್ಪಣೆ ಕಾರ್ಯಕ್ರಮ ನಿರ್ವಹಿಸಿದ ಡಾ. ಅನಿಲ್ ಎಸ್ ಬೈಪಾಡಿತ್ತಾಯ ಅವರು ಗುಜರಾತ್ ಭಾಗದಲ್ಲಿ ಸಂಸ್ಥೆಯ ಸಿಬ್ಬಂದಗಳಿಗೆ ವಾರ್ಷಿಕೋತ್ಸವ ಸಂದರ್ಭ ಕಾರು ಕೊಟ್ಟ ಉದಾಹರಣೆ ಇದೆ. ಅದೇ ರೀತಿಯಲ್ಲಿ ನಮ್ಮ ಸಂಸ್ಥೆ ಬೆಳೆಯಬೇಕು. ಆದರೂ ಮುಂದಿನ ವರ್ಷ ನಮ್ಮ ಆಸ್ಪತ್ರೆಯಿಂದ ಒಂದು ದ್ವಿಚಕ್ರವನ್ನಾದರೂ ಕೊಡುವ ಚಿಂತನೆ ಇದೆ ಎಂದರು.