ಅಧಿಕಾರಿಗಳ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದ ಆರೋಪಿಗಳು ದೋಷಮುಕ್ತ

0

ಪುತ್ತೂರು: ಏಳು ವರ್ಷಗಳ ಹಿಂದೆ ಮಂಗಳೂರು ಬಲ್ಮಠ ಸರ್ಕಲ್ ಬಳಿ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬಂಟಿಂಗ್ ಅಳವಡಿಸಿದ್ದನ್ನು ತೆರವುಗೊಳಿಸುವ ಕರ್ತವ್ಯಕ್ಕೆ ನೇಮಿಸಲ್ಪಟ್ಟಿದ್ದ ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ವಿಜಯ್ ಕುಮಾರ್ ಶೆಟ್ಟಿ, ಮಹಾಪೌರರಾಗಿದ್ದ ದಿವಾಕರ್ ಪಾಂಡೇಶ್ವರ, ನವೀನ್ ಚಂದ್ರ, ರಾಜೇಂದ್ರ, ಮೋನಪ್ಪ ಭಂಡಾರಿ ಮತ್ತು ರೂಪಾ.ಡಿ ಬಂಗೇರವರಗಳನ್ನು ಮಂಗಳೂರಿನ 6ನೇ ಜೆಎಂಎಫ್‌ಸಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.


08-03-2018ರಂದು ಮಂಗಳೂರು ನಗರದ ಜ್ಯೋತಿ-ಬಲ್ಮಠ ರಸ್ತೆಯ ತೆರೆದ ಸ್ಥಳದಲ್ಲಿ ಹಾಕಲಾಗಿದ್ದ ಅನಧಿಕೃತ ಫಲಕ ಮತ್ತು ಬ್ಯಾನರ್ ಗಳನ್ನು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಸೂಚನೆಯಂತೆ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತೆರವು ನಡೆಸುತ್ತಿದ್ದಾಗ ವಿಜಯ್ ಕುಮಾರ್ ಶೆಟ್ಟಿ, ದಿವಾಕರ ಪಾಂಡೇಶ್ವರ, ನವೀನ್ ಚಂದ್ರ, ರಾಜೇಂದ್ರ, ಮೋನಪ್ಪ ಭಂಡಾರಿ ಮತ್ತು ರೂಪಾ.ಡಿ ಬಂಗೇರರವರು ಸರಕಾರಿ ಕರ್ತವ್ಯ ನಿರ್ವಹಣೆಯ ಕಾರ್ಯಕ್ಕೆ ತಡೆವೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಖ್ಯೆಯ ಕಲಂ 353ರಂತೆ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.ನ್ಯಾಯಾಲಯ‌ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡು 16 ಸಾಕ್ಷಿಗಳ ಪೈಕಿ 11 ಸಾಕ್ಷಿಗಳನ್ನು ತನಿಖೆ ನಡೆಸಿತ್ತು. ಅಲ್ಲದೆ ದೂರಿನಲ್ಲಿ ನ ವಿಳಂಬ, ಸೂಕ್ತ ಸಾಕ್ಷ್ಯಾಧಾರಗಳ ಮತ್ತು ದಾಖಲೆಗಳ ಕೊರತೆ, ಸಾಕ್ಷಿದಾರರ ವ್ಯತಿರಿಕ್ತ ಹೇಳಿಕೆಗಳು, ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಪೂರಕವಾದ ಸಾಕ್ಷ್ಯಧಾರಗಳು ಮೇಲ್ನೋಟಕ್ಕೆ ಕಂಡು ಬರದಿರುವುದು ಮತ್ತು ತನಿಖೆ ಯಲ್ಲಿನ ವಿರೋಧಾಬಾಸಗಳು ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ವಿಫಲಗೊಂಡಿದೆ ಎಂದು ತೀರ್ಮಾನಿಸಿ ಮಂಗಳೂರಿನ ಆರನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಪೂಜಾಶ್ರೀ ಎಸ್.ರವರು ಆರೋಪಿಗಳನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿದ್ದಾರೆ.‌ ಆರೋಪಿಗಳ ಪರ ವಕೀಲರಾದ ಪುತ್ತೂರಿನ ಕಜೆಲಾ ಚೇಂಬರ್ಸ್ ನ ಮಹೇಶ್ ಕಜೆ ಮತ್ತು ಮಂಗಳೂರಿನ ಮಹೇಶ್ ಜೋಗಿ ಮತ್ತು ಶೀತಲ್ ಕುಮಾರ್ ವಾದಿಸಿದ್ದರು.

LEAVE A REPLY

Please enter your comment!
Please enter your name here