ಆಲಂಕಾರು: ಆಲಂಕಾರು ಮತ್ತು ಕಡಬದಲ್ಲಿ ಶಾಖೆ ಹೊಂದಿರುವ ಜ್ಞಾನಸುಧಾ ವಿದ್ಯಾಲಯಕ್ಕೆ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.
ಕಲಾ ವಿಭಾಗದಲ್ಲಿ ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 13 ವಿದ್ಯಾರ್ಥಿಗಳೂ ತೇರ್ಗಡೆಗೊಂಡಿದ್ದಾರೆ. ಈ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಕೋಚಿಂಗ್ ಪಡೆದುಕೊಂಡು ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಸಂಸ್ಥೆಯ ಸಂಚಾಲಕರಾದ ಬಿ.ಎಲ್.ಜನಾರ್ದನ ಆಲಂಕಾರು, ಪ್ರಾಂಶುಪಾಲರಾದ ರಾಘವೇಂದ್ರ ಮುಚ್ಚಿಂತಾಯರವರು ತಿಳಿಸಿದ್ದಾರೆ.
ವಿಕಲಚೇತನ ವಿದ್ಯಾರ್ಥಿ ಸಾಧನೆ:
ಜ್ಞಾನಸುಧಾ ವಿದ್ಯಾಲಯದ ಕಡಬ ಶಾಖೆಯಲ್ಲಿ ಕೋಚಿಂಗ್ ಪಡೆದುಕೊಂಡು ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಕಡಬ ದತ್ತಗುರು ಮೋಟಾರ್ ವರ್ಕ್ಸ್ ಮಾಲಕ, ನೂಜಿಬಾಳ್ತಿಲ ಗ್ರಾಮದ ಪಾಡ್ಲ ನಿವಾಸಿ ಅಶೋಕ ಹಾಗೂ ಗುಲಾಬಿ ದಂಪತಿ ಪುತ್ರ, ವಿಶೇಷಚೇತನ ಬಾಲಕ ಸಿಂಚನ್ ಅವರು 496 ಅಂಕ ಪಡೆದುಕೊಂಡು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಇವರು ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೂ ಸಂಸ್ಥೆಯಲ್ಲಿ ಕೋಚಿಂಗ್ ಪಡೆದುಕೊಂಡು ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದರು ಎಂದು ಜ್ಞಾನಸುಧಾ ಸಂಸ್ಥೆಯ ಸಂಚಾಲಕ ಜನಾರ್ದನ ಬಿ.ಎಲ್.ಅವರು ತಿಳಿಸಿದ್ದಾರೆ.