ಬಿಗಿ ಪೊಲೀಸ್ ಬಂದೋಬಸ್ತ್ | ಸಿಸಿ ಕ್ಯಾಮರಾ ಕಣ್ಗಾವಲು | ಹೆಚ್ಚುವರಿ ವಾಹನಗಳ ಓಡಾಟ
ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವ ಮತ್ತು ಪುತ್ತೂರು ಬೆಡಿ ಎಂದೇ ಪ್ರಸಿದ್ಧಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಲಿದೆ.
ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ.ಬಂದೋಬಸ್ತ್‌ಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಪೊಲೀಸರನ್ನು ಕರೆಸಲಾಗಿದೆ.ಜೊತೆಗೆ ಸಶಸ ಮೀಸಲು ಪಡೆ, ಗೃಹ ರಕ್ಷಕ ದಳದವರೂ ಬಂದೋಬಸ್ತ್ ನಿರತರಾಗಿದ್ದಾರೆ.ಮಫ್ತಿಯಲ್ಲಿಯೂ ನೂರಾರು ಪೊಲೀಸರು ಕಾರ್ಯನಿರತರಾಗಿದ್ದಾರೆ.ಡಿವೈಎಸ್ಪಿ ಅರುಣ್‌ನಾಗೇಗೌಡರ ನೇತೃತ್ವದಲ್ಲಿ ಬಂದೋಬಸ್ತ್ ನಡೆಯಲಿದೆ.
ಏ.17ರಂದು ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.ರಾತ್ರಿ ಬ್ರಹ್ಮರಥೋತ್ಸವ, ಪುತ್ತೂರು ಬೆಡಿ ಪ್ರದರ್ಶನ ನಡೆಯಲಿದೆ.ಈ ವರ್ಷ ಸುಮಾರು ರೂ.8.5 ಲಕ್ಷ ವೆಚ್ಚದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.ಕಾರ್ಕಳದ ರಮಾನಂದ ಮತ್ತು ಪುತ್ತೂರಿನ ನಾಗೇಶ್ ರಾವ್ ಅವರು ಸಿಡಿಮದ್ದು ಪ್ರದರ್ಶನದ ಗುತ್ತಿಗೆ ವಹಿಸಿಕೊಂಡಿದ್ದಾರೆ.
ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್:
ಜಾತ್ರಾ ಗದ್ದೆಯಲ್ಲಿ ಹಲವು ಕಡೆ ಸಿಸಿ ಕ್ಯಾಮರ ಅಳವಡಿಸಲಾಗಿದೆ.ದೇವಳದ ರಥ ಮಂದಿರದ ಬಳಿ ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್ ವ್ಯವಸ್ಥೆ ಮಾಡಲಾಗಿದೆ.ಶೇಟ್ ಇಲೆಕ್ಟ್ರೋನಿಕ್ಸ್ ಸಂಸ್ಥೆ ಸಿಸಿ ಕ್ಯಾಮರಾಗಳ ನಿಯಂತ್ರಣ ಮಾಡಲಿದ್ದಾರೆ.ಪೊಲೀಸರ ಜೊತೆ ಸಿಸಿ ಕ್ಯಾಮರಾ ಕಣ್ಗಾವಲು ಕಾರ್ಯ ಮಾಡುತ್ತಿದೆ.
ಹೆಚ್ಚುವರಿ ಬಸ್
ಬ್ರಹ್ಮರಥೋತ್ಸವ, ಪುತ್ತೂರು ಬೆಡಿ ವೀಕ್ಷಣೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಓಡಾಟ ನಡೆಯಲಿದೆ.ತಾಲೂಕಿನ ವಿವಿಧ ಗ್ರಾಮಾಂತರ ಪ್ರದೇಶದಿಂದ ಹೆಚ್ಚುವರಿ ಬಸ್ಸುಗಳಲ್ಲದೆ,ಇತರ ವಾಹನಗಳೂ ಹೆಚ್ಚುವರಿ ಓಡಾಟ ನಡೆಸಲಿವೆ.
ಸುದ್ದಿಯಿಂದ ನೇರಪ್ರಸಾರ
ಏ.17ರಂದು ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ ಉತ್ಸವ ಮತ್ತು ರಾತ್ರಿ ಬ್ರಹ್ಮರಥೋತ್ಸವ, ಪುತ್ತೂರು ಬೆಡಿ ಪ್ರದರ್ಶನ ಸುದ್ದಿ ನ್ಯೂಸ್ ಪುತ್ತೂರು ಯು ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ.ಜಾತ್ರಾ ಗದ್ದೆಯಲ್ಲಿ ಸುದ್ದಿಯಿಂದ ಎಲ್‌ಇಡಿ ಮೂಲಕವೂ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.