ಪುತ್ತೂರು: ಬೈಕ್ ಮತ್ತು ಜೀಪೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಸಮೀಪದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ.
ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಜೀಪು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದೆ ಪರಿಣಾಮ ಬೈಕ್ ಸವಾರ ಮುಂಡೂರು ಗ್ರಾಮದ ಕಡ್ಯ ನಿವಾಸಿ, ದಿ.ಬಾಳಪ್ಪ ಗೌಡರ ಪುತ್ರ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ ಗೌಡ(46.ವ) ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಲೋಕೇಶ್ ಅವರ ಜೊತೆ ಬೈಕ್‌ನಲ್ಲಿದ್ದ ಅವರ ಮಕ್ಕಳಾದ ದೀಪ್ತಿ(8.ವ) ಹಾಗೂ ಗಗನ್(4.ವ) ಗಂಭೀರ ಗಾಯಗೊಂಡಿದ್ದು ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಔಷಧಿಗೆ ಬಂದಿದ್ದರು: ಲೋಕೇಶ್ ಅವರು ತಮ್ಮ ಮಕ್ಕಳಿಗೆ ಔಷಧಿಗೆಂದು ಪುರುಷರಕಟ್ಟೆಗೆ ಹೋಗಿ ಬರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಲೋಕೇಶ್ ಗೌಡ ಅವರು ಪತ್ನಿ ಮಾಲತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ರಸ್ತೆಯುದ್ದಕ್ಕೂ ವಾಹನಗಳ ಸಾಲು: ಅಪಘಾತ ನಡೆದ ವೇಳೆ ಘಟನಾ ಸ್ಥಳದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇದ್ದುದರಿಂದ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತ್ತು.
ಜೀಪು ತೆಗೆಯಲು ವಿರೋಧ: ಲಾಠಿ ಪ್ರಹಾರ: ಅಪಘಾತದ ಬಳಿಕ ರಸ್ತೆ ಬದಿಯ ಕಣಿಯಲ್ಲಿದ್ದ ಜೀಪನ್ನು ಅಲ್ಪ ಸಮಯದ ಬಳಿಕ ಚಾಲಕನ ಕಡೆಯವರು ಸ್ಥಳದಿಂದ ತೆರವು ಮಾಡಲು ಪ್ರಯತ್ನಿಸಿದಾಗ ಸ್ಥಳದಲ್ಲಿದ್ದ ಯುವಕರು ಜೀಪು ತೆಗೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡೂ ತಂಡಗಳ ಮಧ್ಯೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಸ್ಥಳದಿಂದ ಚದುರಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ: ಜೀಪು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ್ದು ಜೀಪು ಚಾಲಕನ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿ ಸೇರಿದ್ದವರು ಆಕ್ರೊಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು