ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದಲ್ಲಿ ಎ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವ ನಡೆದ ಬಳಿಕ ಎ.18ರಂದು ಸಂಜೆ ದೇವರ ಅವಭೃತ ಸವಾರಿಯು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಅವಭೃತ ಸವಾರಿ ಆರಂಭದ ಮೊದಲು ದೈವ ಭೇಟಿ, ಓಕುಳಿ ಕಟ್ಟೆಯಲ್ಲಿ ಪೂಜೆ ನಡೆಯಿತು.
ಶ್ರೀ ದೇವರು ದೇವಳದ ಹೊರಾಂಗಣದಲ್ಲಿ ರಕ್ತೇಶ್ವರಿ ಗುಡಿಯ ಬಳಿ ರಕ್ತೇಶ್ವರಿ ದೈವವನ್ನು ಭೇಟಿಯಾಗಿ ಅಲ್ಲಿ ದೈವದ ನುಡಿಕಟ್ಟು ಬಳಿಕ ದೇವಾಲಯದ ನೈರುತ್ಯ ಭಾಗದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದ ಬಳಿಯಿರುವ ಕಟ್ಟೆಯಲ್ಲಿ ಪೂಜೆ ನಡೆಯಿತು. ಈ ಕಟ್ಟೆಯಲ್ಲಿ ಕುರ್ದಿನೀರು ಪ್ರೋಕ್ಷಣೆ ಮಾಡುವ ಸಂಪ್ರದಾಯ ನಡೆಯಿತು. ಬಳಿಕ ದೇವಳದ ದೈವಗಳಾದ ಹುಲಿ ಭೂತ, ಕಾಜುಕುಜುಂಬ ಅಂಗಣತ್ತಾಯ ದೈವಗಳ ಪ್ರತಿನಿಧಿ ದೈವವಾಗಿ ದೇವರೊಂದಿಗೆ ಹೋಗುವ ರಕ್ತೇಶ್ವರಿ ದೈವವು ದೇವರನ್ನು ರಥದ ಗದ್ದೆಯಲ್ಲಿ ಭೂತದ ಕಲ್ಲು ಎಂದು ಕರೆಯುವ ಜಾಗದಲ್ಲಿ ಬೀಳ್ಕೊಡುವ ಪದ್ಧತಿ ನಡೆಯಿತು. ದೈವದ ನುಡಿಗಟ್ಟಿನ ಸಮಯ ಶಶಾಂಕ ನೆಲ್ಲಿತ್ತಾಯ ಅವರು ಮಧ್ಯಸ್ಥರಾಗಿ ಸಹಕರಿಸಿದರು.