ಪುತ್ತೂರು: ಬಿಜೆಪಿಯ ದೊಡ್ಡ ದೊಡ್ಡ ನಾಯಕರು ತಮ್ಮ ಪಕ್ಷವನ್ನು ವಿಶ್ವದಲ್ಲೇ ಅತ್ಯಂತ ದೊಡ್ಡ ಪಕ್ಷ ಅಂತ ಬಹಳ ಹೆಗ್ಗಳಿಕೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ಪಕ್ಷ ಮಾತ್ರ ಅಲ್ಲ, ಅದು ಚುನಾವಣಾ ಬಾಂಡ್ ಪಡೆಯುವ ಮೂಲಕ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಪಕ್ಷ ಆಗಿದೆ. ಸುಪ್ರೀಂ ಕೋರ್ಟಿನ ಆದೇಶದ ನಂತರ ಯಾವಾಗ ಚುನಾವಣಾ ಬಾಂಡ್‌ಗಳನ್ನು ಅಸಾವಿಂಧಾನಿಕವೆಂದು ಕರೆದು, ಚುನಾವಣಾ ಬಾಂಡ್ ಗಳನ್ನು ರದ್ದು ಮಾಡಿ, ಚುನಾವಣಾ ಬಾಂಡ್ ಗಳ ವಿವರಗಳು ಜನಸಾಮಾನ್ಯರಿಗೆ ಚುನಾವಣಾ ಆಯೋಗದ ವೆಬ್‌ಸೈಟ್‌ಲ್ಲಿ ಸಿಗುವಂತೆ ಮಾಡಿತೋ ಆಗ ಬಿಜೆಪಿ ವಿಶ್ವದಲ್ಲಿ ಅತ್ಯಂತ ಭ್ರಷ್ಟ ಪಕ್ಷವೆಂದು ಜಗಜ್ಜಾಹೀರಾಯಿತು ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಮೊದಲಿಗೆ ಬಿಜೆಪಿ ಒಂದು ಬಿಪಿಎಲ್ ಪಾರ್ಟಿ ಆಗಿತ್ತು. 70ರ ದಶಕದಲ್ಲಿ ಬಿಜೆಪಿ ಚುನಾವಣೆಗೆ ನಿಲ್ಲುತ್ತಿದ್ದಾಗ ತಮ್ಮ ಪಕ್ಷದ ಅಭಿಮಾನಿಗಳ ಮನೆ ಮನೆಗೆ ಹೋಗಿ ಹಣವನ್ನ ಬೇಡಿ ತಂದು ಚುನಾವಣೆಯಲ್ಲಿ ಖರ್ಚು ಮಾಡುತ್ತಿತ್ತು. ಆಗ ಅದು ಒಂದು ಬಿಪಿಎಲ್ ಪಾರ್ಟಿ ಆಗಿತ್ತು. ನಂತರ ಅದು ಯಾವಾಗ 2014ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತೋ, ಆ ಬಳಿಕ ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆಸಿ, ಅಂಬಾನಿ ಅದಾನಿಗಳ ಜೊತೆಗೆ ಕೈ ಮಿಲಾಯಿಸಿದ ನಂತರ ಬಿಜೆಪಿ ಒಂದು ಎಮ್ ಎಮ್ ಪಿ ಆಗಿ ಬದಲಾವಣೆ ಹೊಂದಿತು. ಈಗ ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಚುನಾವಣಾ ಬಾಂಡ್‌ಗಳ ವಿವರಗಳು ಹೊರಬಂದ ನಂತರ ಬಿಜೆಪಿ ವಿಶ್ವದಲ್ಲಿಯೇ ಅತ್ಯಂತ ಭ್ರಷ್ಟ ಜನತಾ ಪಾರ್ಟಿ ಎಂಬುದು ಅನಾವರಣವಾಗಿದೆ ಎಂದ ಅವರು ನಾ ಕಾಯೇಂಗೇ ನಾ ಕಾನಾ ದೇಂಗೇ ಎಂದು ಹೇಳುತ್ತಾ, ದೇಶದ ಜನರನ್ನು ವಂಚಿಸಿ, ಕೋಟ್ಯಾಂತರ ರೂಪಾಯಿ ಮೊತ್ತದ ಹಗರಣವನ್ನು ನಡೆಸಿದ ಮೋದಿ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ದೇಶದ ಪ್ರಜ್ಞಾವಂತ ಮತದಾರರು ತಿರಸ್ಕರಿಸಿ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತವನ್ನು ನೀಡಬೇಕಾಗಿ ವಿನಂತಿಸಿದರು.
ಬಾಂಡ್ ಬಟವಾಡೆ ವಿವರ :
2017ರಲ್ಲಿ ಮೋದಿ ಸರ್ಕಾರ ಚುನಾವಣಾ ಬಾಂಡ್ ಗಳನ್ನು ಜಾರಿಗೆ ತಂದ ನಂತರ ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಗಳನ್ನು ಅಸ್ಸಾಂವಿಧಾನಿಕ ವೆಂದು ಘೋಷಿಸುವವರೆಗೆ ಚುನಾವಣಾ ಆಯೋಗ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದ ಮಾಹಿತಿಯಲ್ಲಿ 16,492 ಕೋಟಿ ರೂಪಾಯಿಗಳ ಮೌಲ್ಯದ ಚುನಾವಣಾ ಬಾಂಡುಗಳನ್ನು ಖರೀದಿಸಲಾಗಿದೆ. ಇವುಗಳ ಪೈಕಿ ಶೇಕಡ 53.03 ಬಾಂಡ್‌ಗಳು ಅಂದರೆ 8252 ಕೋಟಿ ರೂಪಾಯಿಗಳ ಬಾಂಡುಗಳು ಬಿಜೆಪಿಗೆ ಸಂದಿವೆ. 1952 ಕೋಟಿ ರೂಪಾಯಿ ಮೌಲ್ಯದ ಬಾಂಡುಗಳು ಕಾಂಗ್ರೆಸ್ ಪಕ್ಷಕ್ಕೆ, 1592 ಕೋಟಿ ರೂಪಾಯಿ ಮೌಲ್ಯದ ಬಾಂಡುಗಳು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ, 1408 ಕೋಟಿ ರೂಪಾಯಿ ಮೌಲ್ಯದ ಬಾಂಡುಗಳು ಬಿ ಆರ್ ಎಸ್ ಪಕ್ಷಕ್ಕೆ, 945.5 ಕೋಟಿ ರೂಪಾಯಿ ಮೌಲ್ಯದ ಬಾಂಡುಗಳು ಒರಿಸ್ಸಾದ ಬಿಜು ಪಟ್ನಾಯಕ್ ಅವರ ಬಿಜೆಡಿ ಪಕ್ಷಕ್ಕೆ, 509 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಡಿಎಂಕೆ ಪಕ್ಷಕ್ಕೆ ಮತ್ತು ಇತರ ಕೆಲವು ಪಕ್ಷಗಳಿಗೆ ಒಂದಷ್ಟು ಬಾಂಡ್‌ಗಳು ಸಂದಿದೆ ಎಂದು ಅಮಳ ರಾಮಚಂದ್ರ ಹೇಳಿದರು.
ಪರಿಸರ ಇಲಾಖೆಯ ಮೂಲಕ ಹಫ್ತಾ:
ವೇದಾಂತ ಕಂಪನಿಯ ಮೇಲೆ ಪರಿಸರದ ನಿಯಮ ಉಲ್ಲಂಘನೆಯ ಪ್ರಕರಣವನ್ನು ದಾಖಲಿಸಲಾಗುತ್ತದೆ, ಕೇಸು ದಾಖಲಾದ ನಂತರ ವೇದಾಂತ ಕಂಪನಿ ಬಿಜೆಪಿಗೆ 226 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್ ನೀಡುತ್ತದೆ, ಹಣ ಪಡೆದುಕೊಂಡ ಬಿಜೆಪಿ ನಿಯಮ ಉಲ್ಲಂಘನೆ ಆರೋಪದಿಂದ ಈ ಕಂಪನಿಯನ್ನು ಮುಕ್ತಗೊಳಿಸುತ್ತದೆ. ಗಣಿಗಾರಿಕೆ ಮತ್ತು ಮುಖ್ಯ ಉದ್ಯಮದಲ್ಲಿ ತೊಡಗಿಕೊಂಡ ರುಂಗಟಾ ಕಂಪನಿಯ ಮೇಲೆ ಪರಿಸರ ನಾಶದ ಆರೋಪ ಮಾಡಲಾಗುತ್ತದೆ ಮತ್ತು 50 ಕೋಟಿ ರೂಪಾಯಿಗಳ ಚುನಾವಣಾ ಬೋರ್ಡ್ ಅನ್ನು ಪಡೆದುಕೊಂಡು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಅವರಿಗೆ ಕ್ಲೀನ್ ಚಿಟ್ ನೀಡುತ್ತದೆ. ಈ ರೀತಿಯಾಗಿ ಔಷಧ ಗಣಿಗಾರಿಕೆ ಮತ್ತು ಕಾಡುಗಳನ್ನು ಕಡಿಯುವ ಕಂಪನಿಗಳ ಜೊತೆಗೆ ಹಣದ ವ್ಯವಹಾರವನ್ನು ಕೂಡಿಸಿ ಅಪಾರ ಪ್ರಮಾಣದ ಚುನಾವಣಾ ಬಾಂಡ್ ಗಳನ್ನು ಪಡೆದುಕೊಂಡು ಇವರುಗಳಿಗೆ ಅಕ್ರಮವಾಗಿ ಕಂಪೆನಿ ನಡೆಸುವುದಕ್ಕೆ ಬಿಜೆಪಿ ಸರ್ಕಾರ ಲೈಸನ್ಸ್ ನೀಡುತ್ತದೆ. ಇದಲ್ಲದೆ ಆದಿತ್ಯ ಬಿರ್ಲಾ ಗ್ರೂಪ್ 285 ಕೋಟಿ , ಭಾರತೀಯ ಏರ್ಟೆಲ್ 236.4 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಬಿಜೆಪಿಗೆ ನೀಡಿದ್ದು ಕೇಂದ್ರದ ಮೋದಿ ನೇತೃತ್ವದ ಸರಕಾರ ಯಾವ ಪರಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎನ್ನುವುದು ತಿಳಿದು ಬರುತ್ತದೆ. ಈ ರೀತಿಯಲ್ಲಿ ಸಾಲು ಸಾಲು ಹಗರಣಗಳ ಮೂಲಕ ಬಿಜೆಪಿ ಕೋಟ್ಯಾಂತರ ರೂಪಾಯಿಗಳ ಅಕ್ರಮ ಬಹಳ ವನ್ನು ವಿವಿಧ ಕಂಪೆನಿಗಳಿಂದ ಪಡೆದುಕೊಂಡ ಬಿಜೆಪಿ ಇಂದು ವಿಶ್ವದ ಅತ್ಯಂತ ಭ್ರಷ್ಟ ರಾಜಕೀಯ ಪಕ್ಷವಾಗಿದೆ ಎಂದು ಅವಳ ರಾಮಚಂದ್ರ ಹೇಳಿದರು.
ಮೋದಿ ಸರಕಾರ ಕಂಪೆನಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದೆ:
ಹೀರೋ ಗ್ರೂಪ್ ಆಫ್ ಕಂಪನೀಸ್ ಮೇಲೆ 2022ರ ಮಾರ್ಚ್ ಮತ್ತು ತಿಂಗಳಿನಲ್ಲಿ ಐಟಿ ದಾಳಿ ನಡೆಯುತ್ತದೆ- 2022ರ ಅಕ್ಟೋಬರ್ ನಲ್ಲಿ ದಾಳಿಯ ನಂತರ ಈ ಕಂಪನಿ 20 ಕೋಟಿ ರೂಪಾಯಿ ಮೊತ್ತದ ಬಾಂಡನ್ನ ಬಿಜೆಪಿಗೆ ನೀಡುತ್ತದೆ. ರಶ್ಮಿ ಗ್ರೂಪ್ ಆಫ್ ಕಂಪನೀಸ್ ಮೇಲೆ 2022ರ ಜುಲೈಯಲ್ಲಿ ಐಟಿ ದಾಳಿ ನಡೆಯುತ್ತದೆ ಅದೇ ತಿಂಗಳಿನಲ್ಲಿ ದಾಳಿಯ ನಂತರ ಈ ಕಂಪನಿ 5 ಕೋಟಿ ರೂಪಾಯಿಗಳ ಬಾಂಡನ್ನು ಬಿಜೆಪಿಗೆ ನೀಡುತ್ತದೆ. 2014, 2022 ಮತ್ತು 2023ರಲ್ಲಿ ಡಿಎಲ್‌ಎಫ್‌ಎ ಕಂಪನಿಯ ಮೇಲೆ ಮೂರು ಬಾರಿ ಐಟಿ ದಾಳಿ ನಡೆಯುತ್ತದೆ. ಕಂಪನಿ 2019ರಲ್ಲಿ ಮತ್ತು 20222 ರಲ್ಲಿ ದಾಳಿಯ ನಂತರ ಒಟ್ಟು 50 ಕೋಟಿ ಚುನಾವಣಾ ಬಾಂಡುಗಳನ್ನು ಬಿಜೆಪಿಗೆ ನೀಡುತ್ತದೆ. ಡಾ. ರೆಡ್ಡಿ ಅನ್ನುವ ಔಷಧ ಕಂಪನಿಯ ಮೇಲೆ 2023ರಲ್ಲಿ ಐಟಿ ದಾಳಿ ನಡೆಯುತ್ತದೆ, ಅದೇ ವರ್ಷ ಐಟಿ ದಾಳಿಯ ನಂತರ ಅವರು ಬಿಜೆಪಿಗೆ 21 ಕೋಟಿಗಳ ಚುನಾವಣಾ ಬಾಂಡ್ ನೀಡುತ್ತಾರೆ. ಫ್ಯೂಚರ್ ಗೇಮಿಂಗ್ ಕಂಪನಿ ಮೇಲೆ 2022 ರಲ್ಲಿ 2023 ರಲ್ಲಿ ಮತ್ತು 2019 ರಲ್ಲಿ ಐಟಿ ದಾಳಿ ನಡೆಯುತ್ತದೆ, ದಾಳಿಯ ನಂತರ 2022 ರಲ್ಲಿ ಮತ್ತು 2023ರಲ್ಲಿ ಈ ಕಂಪನಿ ಬಿಜೆಪಿಗೆ ಬರೋಬ್ಬರಿ 493 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್ ನೀಡುತ್ತದೆ. ಮೈಲ್ ಕಂಪೆನಿಯ ಮೇಲೆ 2019ರ ಅಕ್ಟೋಬರ್ ನಲ್ಲಿ ಐಟಿ ದಾಳಿ ನಡೆಯುತ್ತದೆ ಅದೇ ವರ್ಷ ದಾಳಿಯ ನಂತರ 5 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್ ನೀಡುತ್ತಾರೆ. ವೇದಾಂತ ಕಂಪನಿಯ ಮೇಲೆ 2020ರ ಮಾರ್ಚ್ ಮತ್ತು ಅಗಸ್ಟ್ ನಲ್ಲಿ ಎರಡು ಐಟಿ ದಾಳಿಗಳು ನಡೆಯುತ್ತದೆ, 2021ರ ಏಪ್ರಿಲ್ ಮತ್ತು 2022ರ ಜುಲೈ ಮತ್ತು ನವೆಂಬರ್ ತಿಂಗಳುಗಳಲ್ಲಿ 161.75 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಈ ಕಂಪನಿ ಬಿಜೆಪಿಗೆ ನೀಡುತ್ತದೆ. ಈ ರೀತಿಯಲ್ಲಿ ಸುಮಾರು 30 ಕಂಪನಿಗಳಿಗೆ ಐಟಿ ಇಡಿ ಮೊದಲಾದ ತನಿಕಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು, ಅವರನ್ನು ಬೆದರಿಸಿ ಸುಮಾರು 753 ಕೋಟಿಗೂ ಮಿಕ್ಕಿದ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಬಿಜೆಪಿ ತನ್ನದಾಗಿಸಿಕೊಳ್ಳುತ್ತದೆ.ಇದೆಲ್ಲವೂ ಆಡಳಿತರೂಢ ಬಿಜೆಪಿ ನೇತೃತ್ವದ ಮೋದಿ ಸರಕಾರ ಯಾವ ರೀತಿಯಲ್ಲಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಂಪೆನಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂಬುದನ್ನು ತಿಳಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ನಗರಸಭಾ ಸದಸ್ಯ ರಿಯಾಜ್ ಪರ್ಲಡ್ಕ, ಮಹೇಶ್ ರೈ ಅಂಕೋತಿಮಾರ್ ಉಪಸ್ಥಿತರಿದ್ದರು.