ಪುತ್ತೂರು: ಏ.23ರಂದು ಕಾಂಗ್ರೆಸ್ ನ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಚುನಾವಣಾ ರ್ಯಾಲಿಯನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ರದ್ದುಗೊಳಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರೋಡ್ ಶೋ ನಡೆಸುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ವಾಹನಗಳಲ್ಲಿ ವಿವಿಧ ಕಡೆ ತೆರಳುವ ಜನರಿಗೆ ತೊಂದರೆಯಾಗಲಿದೆ.ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ತೊಂದರೆಯಾಗಲಿದ್ದು, ದೈನಂದಿನ ವ್ಯವಹಾರಕ್ಕಾಗಿ ನಗರಕ್ಕೆ ಬರುವ ಜನಸಾಮಾನ್ಯರಿಗೂ ತೊಂದರೆಯಾಗಲಿದೆ ಎಂದು ಏ.23ರಂದು ನಡೆಸಲು ಉದ್ದೇಶಿಸಿದ್ದ ರೋಡ್ ಶೋ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ.ಇದರ ಬದಲಾಗಿ ಅದೇ ದಿನ ಸಂಜೆ 3.30ಕ್ಕೆ ಕಿಲ್ಲೆ ಮೈದಾನದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೃಹತ್ ಸಮಾವೇಶ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಮ್ ಎಸ್ ಮೊಹಮ್ಮದ್, ಡಾ ಕೆ.ಬಿ ರಾಜಾರಾಮ್, ಎಮ್ ಬಿ ವಿಶ್ವನಾಥ್ ಉಪಸ್ಥಿತರಿದ್ದರು.
ರೋಡ್ ಶೋ ರದ್ದು ಮಾಡಿರುವುದು ಒಳ್ಳೆಯ ನಿರ್ಧಾರ. ರೋಡ್ ಶೋ ಹೆಸರಿನಲ್ಲಿ ಜನಸಾಮಾನ್ಯರ ದೈನಂದಿನ ಸಂಚಾರಕ್ಕೆ ತೊಂದರೆ ಕೊಡುವುದು ಸಲ್ಲದು. ಸಮಾವೇಶ ಯಾವುದಾದರೂ ವಿಶಾಲ ಮೈದಾನದಲ್ಲಿ ಮಾಡಿದರೆ ಜನಸಾಮಾನ್ಯರಿಗೆ ತೊಂದರೆ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಿತವೇ ಪ್ರಧಾನವಾಗಬೇಕು. ಇಂಥ ನಿರ್ಧಾರ ತೆಗೆದುಕೊಳ್ಳುವ ಸಂವೇದನಾಶೀಲತೆ ತೋರಿಸಿರುವ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ.