ಕೆಮ್ಮಿಂಜೆ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆ, ಕಲಶಾಭಿಷೇಕ, ಧಾರ್ಮಿಕ ಸಭೆ

0

ಸನಾತನ ಹಿಂದೂಧರ್ಮ ಸಮೃದ್ಧಿಯಿಂದ ಮೆರೆಯುವ ಕಾಲ ಸನ್ನಿಹಿತವಾಗಲಿ – ವಿದ್ಯಾಪ್ರಸನ್ನ ಶ್ರೀಗಳು

ಪುತ್ತೂರು: ದೇವೋತ್ತಮನಾಗಿ ತನ್ನ ಬದುಕನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಅತಿಶ್ರೇಷ್ಠವಾದ ಅವತಾರ ಶ್ರೀರಾಮಾವತಾರ. ರಾಮನ ವ್ಯಕ್ತಿತ್ವ ವಿಶಿಷ್ಟವಾದ ವ್ಯಕ್ತಿತ್ವವಾಗಿತ್ತು. ಅಂತಹ ಶ್ರೀರಾಮನ ಹೆಸರಲ್ಲಿ ಸುಂದರವಾದ ಭಜನಾ ಮಂದಿರವನ್ನು ನಿರ್ಮಿಸಿದ್ದೀರಿ ಎಂದು ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥಪಾದರು ಹೇಳಿದರು.

ಕೆಮ್ಮಿಂಜೆ ಶ್ರೀಷಣ್ಮುಖ ಸುಬ್ರಹ್ಮಣ್ಯ ಶ್ರೀಮಹಾವಿಷ್ಣು ದೇವಸ್ಥಾನದ ವಠಾರದಲ್ಲಿರುವ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ನೀಡಿದ ಆಶೀರ್ವಚನದಲ್ಲಿ ಹೇಳಿದರು. ಮಂಥರೆಯ ಕಾರಣದಿಂದ ಶ್ರೀರಾಮನಿಗೆ ರೇಷ್ಮೇಮಡಿ ಕಳಚಿ ನಾರುಮಡಿಯುಟ್ಟು ಕಾಡಿಗೆ ಹೋಗಬೇಕಾದ ಪರಿಸ್ಥಿತಿ ಬಂತು. ಮರ್ಯಾದಾ ಪುರುಷೋತ್ತಮನಾಗಿ ರಾಜಧರ್ಮವನ್ನು ಮೀರಿಹೋಗದೆ ಬದುಕಿದವ ಶ್ರೀರಾಮ. ಆತನು ಸ್ಥಿತ ಪೂರ್ವ ಭಾಷಿಯಾಗಿದ್ದ. ರಾಮನ ರಾಜ್ಯದಲ್ಲಿ ನಿರ್ಭೀತದಿಂದ ಎಲ್ಲರೂ ಬದುಕುತ್ತಿದ್ದರು ಎಂದು ಶ್ರೀರಾಮನ ಬದುಕಿನ ಚಿತ್ರಣವನ್ನು ತಿಳಿಸಿದರು. ಇಂದು ಹೊಸ ಭಜನಾ ಮಂದಿರದ ಮೂಲಕ ರಾಮನ ನೆನಪನ್ನು ಮಾಡಿದ್ದೇವೆ. ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮಹಾಭಾರತ, ಮಧ್ಯಾಹ್ನ ರಾಮಾಯಣ ಹಾಗೂ ಸಂಜೆ ಭಾಗವತ ಪುರಾಣದ ಬಗ್ಗೆ ಕಥೆ ಹೇಳುತ್ತಿದ್ದರು ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಸನಾತನ ಹಿಂದೂ ಧರ್ಮ ಸಮೃದ್ಧಿಯಿಂದ ಮೆರೆಯುವ ಕಾಲ ಸನ್ನಿಹಿತವಾಗಲಿ. ಶ್ರೀರಾಮ ಹಾಗೂ ಹನುಮಂತನ ವಿಶೇಷ ಅನುಗ್ರಹ ನಿಮ್ಮ ಮೇಲಿರಲಿ ಎಂದು ಹೇಳಿದರು.

ರಾಮದೇವರು ದೃಢವಾಗಿ ನಿಲ್ಲುವ ಯೋಗ್ಯವಾದ ಮಂದಿರ – ಸುಬ್ರಹ್ಮಣ್ಯ ಬಳ್ಳಕ್ಕುರಾಯ
ಮುಖ್ಯ ಅತಿಥಿಯಾಗಿದ್ದ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಮಾತನಾಡಿ, ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಈ ವಠಾರದಲ್ಲಿ ಹಿರಿಯರು ಸೇರಿ ಭಜನೆ ಆರಂಭ ಮಾಡಿದ್ದರು. ರಾಮ ಕ್ಷತ್ರಿಯ ಸಮಾಜ ಭಾಂಧವರು ಇದನ್ನು ಮುಂದುವರಿಸಿಕೊಂಡು ಹೋದರು. ರಾಮದೇವರು ದೃಢವಾಗಿ ನಿಲ್ಲುವಂತಹ ಯೋಗ್ಯವಾದ ಮಂದಿರ ನಿರ್ಮಾಣವಾಗಿದೆ. ಅದಕ್ಕೆ ಬೇಕಾದ ಎಲ್ಲರನ್ನು ಸೇರಿಸಿ ಭಗವಂತನಿಗೆ ಅರ್ಪಣೆ ಮಾಡಲಾಗಿದೆ. ಶ್ರೀರಾಮ ದೇವರು ಎಲ್ಲರಿಗೂ ಅನುಗ್ರಹ ಮಾಡಲಿ. ಎಲ್ಲರೂ ಇದನ್ನು ಮುಂದುವರಿಸಿ. ಎಲ್ಲರ ಜೀವನ ಮಂಗಳಕರವಾಗಲಿ ಎಂದರು.

ನೂತನ ಭಜನಾ ಮಂದಿರ ಕನಸಿನ ಕೂಸು – ಸುರೇಶ್ ಕುಮಾರ್ ಕೆಮ್ಮಿಂಜೆ
ಶ್ರೀರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ ಮಾತನಾಡಿ,1964ರಲ್ಲಿ ಶ್ರೀರಾಮ ಭಜನಾ ಮಂದಿರ ಆರಂಭವಾಯಿತು. ಇದು ನಿರಂತರವಾಗಿ ಮುಂದುವರಿದು ಇಂದಿಗೆ 60 ವರ್ಷಗಳು ಸಂದಿದೆ. ಶ್ರೀರಾಮ ಭಜನಾ ಮಂದಿರ ಜೀರ್ಣೋದ್ಧಾರ ಆಗಬೇಕೆಂದು ಎಲ್ಲರ ಕನಸಾಗಿತ್ತು. ಇದಕ್ಕೆ ಶುಭ ಸಂದರ್ಭ ಈ ವರ್ಷ ಒದಗಿ ಬಂದಿದೆ. ಇಂದು ಉನ್ನತ ಮಟ್ಟದ ಮಂದಿರ ನಿರ್ಮಾಣವಾಗಲು ರಾಮಕ್ಷತ್ರಿಯರು ಹಾಗೂ ಊರಿನ ಭಕ್ತಾದಿಗಳು ಸಹಕಾರ ಮಾಡಿದ್ದಾರೆ. ಹೊಸ ಭಜನಾ ಮಂದಿರ ನಮ್ಮೆಲ್ಲರ ಕನಸಿನ ಕೂಸಾಗಿತ್ತು ಎಂದು ಹೇಳಿ ಎಲ್ಲರಿಗೂ ಕೃತಜ್ಷತೆ ಸಲ್ಲಿಸಿದರು.

ವಿಷ್ಣುದೇವರ ಅನುಗ್ರಹದಿಂದ ಭಜನೆ ಆರಂಭವಾಗಿದೆ – ಶಿವಪ್ರಸಾದ ಶೆಟ್ಟಿ
ಉದ್ಯಮಿ ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಸುಮಾರು 60 ವರ್ಷಗಳ ಹಿಂದೆ ಮಂದಿರ ಪ್ರಾರಂಭವಾದದ್ದು ಅದ್ಭುತವಾಗಿದೆ. ವಿಷ್ಣುದೇವರ ಅನುಗ್ರಹದಿಂದ ಭಜನೆ ಆರಂಭವಾಗಿದೆ. ಹಲವು ವರ್ಷಗಳ ಹಿಂದೆಯೇ ವಿಷ್ಣುದೇವರು ಇಲ್ಲಿ ಕಾಲಿಟ್ಟಿದ್ದಾರೆ. ಭಜನೆಗೆ ತುಂಬಾ ಮಹತ್ವ ಇದೆ. ಭಜನೆಯಿದ್ದಲ್ಲಿ ವಿಭಜನೆಯಿಲ್ಲ. ಕೆಮ್ಮಿಂಜೆಯಲ್ಲಿ ಭಜನೆ ಬೆಳಗುತ್ತಿದ್ದರೆ ಅದಕ್ಕೆ ಹಿರಿಯರ ಆಶೀರ್ವಾದವೇ ಕಾರಣ ಎನ್ನಬಹುದು. ಈ ಮಹತ್ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಷತೆ ಸಲ್ಲಿಸಿದರು.

ಹಿಂದುಗಳು ಸಂಘಟಿತರಾದಾಗ ಧರ್ಮ ಉಳಿಯುತ್ತದೆ – ಯು.ಪೂವಪ್ಪ
ಅಧ್ಯಕ್ಷತೆ ವಹಿಸಿದ್ದ ಕಲ್ಲಾರೆ ರಾಘವೇಂದ್ರ ಮಠದ ಆಡಳಿತ ಮುಖ್ಯಸ್ಥ ಯು.ಪೂವಪ್ಪ ಮಾತನಾಡಿ, ಕೆಮ್ಮಿಂಜೆ ದೇವಾಲಯಕ್ಕೆ ಹಲವು ರೀತಿಯಲ್ಲಿ ಸಹಕಾರ ಕೊಟ್ಟವರು ರಾಮಕ್ಷತ್ರಿಯ ಭಾಂಧವರು. ಪೇಜಾವರ ಸ್ವಾಮಿಗಳ ಪ್ರಯತ್ನದಿಂದ ಹಿಂದೂ ಧರ್ಮ ಸಂಘಟಿತವಾಗಲು ಸಾಧ್ಯವಾಗಿದೆ. ಶ್ರೀವಿದ್ಯಾಪ್ರಸನ್ನ ಸ್ವಾಮೀಜಿಯವರು ಕೂಡ ಪೇಜಾವರ ಶ್ರೀಗಳೊಂದಿಗೆ ಇದ್ದವರು. ಹಿಂದೂ ಧರ್ಮ ಇಂದು ಬೆಳಗುತ್ತಿದೆ. ಹಿಂದುಗಳು ಸಂಘಟಿತರಾದಾಗ ಧರ್ಮ ಉಳಿಯುತ್ತದೆ. ನೀವೆಲ್ಲರೂ ಸಂಘಟಿತರಾಗಬೇಕು. ಧರ್ಮರಕ್ಷಣೆಗೆ ಕೆಲಸ ಮಾಡಬೇಕು. ಶ್ರೀರಾಮ ಭಜನೆ ಮಂದಿರ ಒಳ್ಳೆಯ ರೀತಿಯಲ್ಲಿ ನಡೆದು ಅಭಿವೃದ್ಧಿ ಹೊಂದಲಿ ಎಂದರು.

ಸನ್ಮಾನ:
ಶ್ರೀರಾಮ ಭಜನಾ ಮಂದಿರದ ವಾಸ್ತುಶಿಲ್ಪಿಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ನಗರಸಭಾ ಸದಸ್ಯ, ಇಂಜಿನಿಯರ್ ಜಗನ್ನೀವಾಸ ರಾವ್ ಮತ್ತು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಕೆಮ್ಮಿಂಜೆ ಶ್ರೀಷಣ್ಮುಖ ಸುಬ್ರಹ್ಮಣ್ಯ ಶ್ರೀಮಹಾವಿಷ್ಣು ದೇವಸ್ಥಾನದ ಮ್ಯಾನೇಜರ್ ಪ್ರಶಾಂತ್‌ರವರನ್ನು ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಶಲ್ಯ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿದರು.

ವಾಸ್ತುಶಿಲ್ಪಿ ಜಗನ್ನೀವಾಸ ರಾವ್, ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕೆಮ್ಮಿಂಜೆ, ನವೀಕರಣ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಪುನರ್ವಸು, ಕಾರ್ಯಾಧ್ಯಕ್ಷ ನಿತಿನ್ ಕುಮಾರ್ ಮಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಮೀಜಿಯವರು ಅತಿಥಿಗಳನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ನವೀಕರಣ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಪುನರ್ವಸು ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಪ್ರಶಸ್ತಿ ಕೆಮ್ಮಾಯಿ ಪ್ರಾರ್ಥಿಸಿದರು. ನವೀಕರಣ ಸಮಿತಿ ಕಾರ್ಯದರ್ಶಿ ಬಾಲಚಂದ್ರ ಮೊಟ್ಟೆತ್ತಡ್ಕ ಸ್ವಾಗತಿಸಿ ರಾಮಕ್ಷತ್ರಿಯ ಸೇವಾ ಸಂಘದ ಉಪಾಧ್ಯಕ್ಷ ಜಿತೇಂದ್ರ ಮರೀಲು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಮ ಭಜನಾ ಮಂದಿರ ಟ್ರಸ್ಟ್, ನವೀಕರಣ ಸಮಿತಿ, ರಾಮಕ್ಷತ್ರಿಯ ಸೇವಾ ಸಂಘ, ರಾಮಕ್ಷತ್ರಿಯ ಮಹಿಳಾ ವೃಂದ, ರಾಮಕ್ಷತ್ರಿಯ ಯುವ ವೃಂದದ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಭಾಗವಹಿಸಿದ್ದರು.

ಶ್ರೀರಾಮ ದೇವರ ಪ್ರತಿಷ್ಠೆ ಕಲಶಾಭಿಷೇಕ:
ಶ್ರೀರಾಮ ಭಜನಾ ಮಂದಿರದಲ್ಲಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀರಾಮ ದೇವರ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ ನಡೆಯಿತು. ಬೆಳಿಗ್ಗೆ 5ರಿಂದ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ವಿಶೇಷ ಭಜನಾ ಸೇವೆ ನಡೆಯಿತು.

LEAVE A REPLY

Please enter your comment!
Please enter your name here