ಜನಸೇವೆಗಾಗಿ ಪಕ್ಷಗಳ ಮತ್ತು ಅಭ್ಯರ್ಥಿಗಳ ನಡುವೆ ಸ್ಪರ್ಧೆಯಾಗಬೇಕಿದ್ದ ಚುನಾವಣೆ-ಬದ್ಧ ವೈರಿಗಳ, ದೇಶದ್ರೋಹಿಗಳ, ದೇಶ ಪ್ರೇಮಿಗಳ ನಡುವಿನ ಯುದ್ಧದಂತೆ ಕಾಣುತ್ತಿದೆ ಯಾಕೆ?

0

*ಮತದಾರರು ಪರಸ್ಪರರನ್ನು ದ್ವೇಷಿಸುವಂತೆ ಮಾಡುವ ಬದಲು, ಪ್ರೀತಿಸುವಂತೆ ಮಾಡಲು ಸಾಧ್ಯವಿಲ್ಲವೇ?
*ಮಹಾತ್ಮಗಾಂಧಿಯವರ ಸ್ವಾತಂತ್ರ್ಯದ ಕಲ್ಪನೆ, ಗ್ರಾಮಸ್ವರಾಜ್ಯದ ಚಿಂತನೆ ಇದಕ್ಕೆ ಪರಿಹಾರ ನೀಡಬಲ್ಲವೇ?
*ಗ್ರಾಮಸ್ವರಾಜ್ಯದ ಹಳ್ಳಿಯಿಂದ ಡೆಲ್ಲಿಗೆ ಆಡಳಿತದ, ಮತದಾರರನ್ನು ರಾಜರನ್ನಾಗಿಸುವ ಜಾಗೃತಿ ದೇಶವ್ಯಾಪಿ ಹರಡುವಂತಾಗಲು ಈ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ಮೋದೀಜಿಯವರಿಗೆ ಮತ್ತು ರಾಹುಲ್ ಗಾಂಧಿಯವರಿಗೆ ತಲುಪಿಸಲು ಪ್ರಯತ್ನಿಸೋಣವೇ?

ಮತದಾರರು ತಮ್ಮ ಸೇವೆಗಾಗಿ ಉತ್ತಮ ಅಭ್ಯರ್ಥಿಯನ್ನು, ಪಕ್ಷವನ್ನು ಆರಿಸುವ ಪ್ರಕ್ರಿಯೆಯೇ ಮತದಾನ-ಚುನಾವಣೆ. ಬಹಳ ಸೌಹಾರ್ದತೆಯಿಂದ, ಕ್ರೀಡಾ ಮನೋಭಾವದಿಂದ ನಡೆಯಬೇಕಾಗಿದ್ದ ಸ್ಪರ್ಧೆಯನ್ನು ಇದೀಗ ದೇಶದ್ರೋಹಿಗಳ ನಡುವೆ ಮತ್ತು ದೇಶ ಪ್ರೇಮಿಗಳ ನಡುವೆಯ ಯುದ್ಧದಂತೆ ವ್ಯಕ್ತಿಗಳು, ಪಕ್ಷಗಳು ಪರಿವರ್ತನೆ ಮಾಡಿವೆ. ಚುನಾವಣೆ ಆದ ಮೇಲೆ ಸ್ಪರ್ಧಿಗಳು ಸ್ನೇಹಿತರಂತೆ ಇರುತ್ತಾರೆ. ಕೆಲವೊಮ್ಮೆ ಸೇರಿ ಆಡಳಿತ ನಡೆಸುತ್ತಾರೆ. ಇಂದು ಯಾರು ಯಾವ ಪಕ್ಷದಲ್ಲಿದ್ದಾರೆ, ನಾಳೆ ಯಾವ ಪಕ್ಷದಲ್ಲಿರುತ್ತಾರೆ ಎಂದು ಯಾರಿಗೂ ಹೇಳಲು ಬರುವುದಿಲ್ಲ. ಆದರೆ ಅದೇ ನಾಯಕರು, ತಮ್ಮ ಮತದಾರರು ಪರಸ್ಪರ ದ್ವೇಷಿಸುವಂತೆ ಮಾಡುವುದು, ಹೊಡೆದಾಡಿಕೊಳ್ಳುವ ಹಂತಕ್ಕೆ ಕೊಂಡೊಯ್ಯುವುದು ಅತ್ಯಂತ ದುಃಖದ ಸಂಗತಿಯಾಗಿದೆ.

ಮತದಾರರು ಪರಸ್ಪರ ದ್ವೇಷದ ಆಭಾವನೆಯಿಂದ ಹೊರಗೆ ಬಂದು ತಾವುರಾಜರು ತಮ್ಮ ಸೇವೆಗಾಗಿ ಅಭ್ಯರ್ಥಿಗಳನ್ನು ಪಕ್ಷಗಳನ್ನು ಆಯ್ಕೆ ಮಾಡುತ್ತಿರುವುದಾಗಿದೆ. ಅವರಲ್ಲಿ ಯಾರು ಗೆದ್ದರೂ ನಮ್ಮ ಪ್ರತಿನಿಧಿಯಾಗಿ ಕೆಲಸ ಮಾಡಲೇಬೇಕು. ಅದಕ್ಕಾಗಿ ಅವರಿಗೆ ಬೇಕಾದಷ್ಟು ಅಧಿಕಾರ, ಸವಲತ್ತು, ಲಕ್ಷಾಂತರ ರೂಪಾಯಿ ಸಂಬಳ, ಪೆನ್ನನ್ ಕೂಡ ದೊರಕುತ್ತದೆ ಎಂದು ಯೋಚಿಸಬೇಕು. ನಾವು ರಾಜರು, ಅವರು ಜನಪ್ರತಿನಿಧಿಗಳಾಗುವವರು ಎಂದು ಸೌಹಾರ್ಧತೆಯಿಂದ ಜನತೆ ಮತದಾನದಲ್ಲಿ ಭಾಗವಹಿಸಬೇಕು ಎಂದು ಮತದಾರ ಜಾಗೃತಿಯ ಸುದ್ದಿ ಜನಾಂದೋಲನದ ಪರವಾಗಿ ವಿನಂತಿಸುತ್ತಿದ್ದೇನೆ. ಈ ಮೇಲಿನ ವಿಷಯಗಳ ಜನಜಾಗೃತಿಗಾಗಿ ಮಹಾತ್ಮಗಾಂಧಿಯವರ ಸ್ವಾತಂತ್ರ್ಯದ ಕಲ್ಪನೆಯನ್ನು ಈ ಕೆಳಗೆ ನೀಡಲಿದ್ದೇನೆ.

ಮಹಾತ್ಮ ಗಾಂಧಿಯವರು, ಬ್ರಿಟೀಷರನ್ನು ದೇಶದಿಂದ ಓಡಿಸುವುದೇ ಸ್ವಾತಂತ್ರ್ಯವಲ್ಲ, ಅದು ಪ್ರಥಮ ಹೆಜ್ಜೆ. ಭಾರತದ ಕಟ್ಟಕಡೆಯ ದುರ್ಬಲ ವ್ಯಕ್ತಿ ಆರ್ಥಿಕ ಸ್ವಾವಲಂಬಿಯಾಗಿ, ತಲೆಯೆತ್ತಿ ತನಗೆ ಬೇಕಾದ ಆಡಳಿತವನ್ನು ಬಯಸುವ ಶಕ್ತಿ ಮಾತ್ರವಲ್ಲ, ಸಮಾನ ಅವಕಾಶ ಮತ್ತು ಹಕ್ಕುಗಳನ್ನು ಪಡೆದು ಸ್ವತಂತ್ರನಾಗಿ ಕಾರ್ಯನಿರ್ವಹಿಸುತ್ತಾ ಬದುಕುವ ಅವಕಾಶ ಪಡೆಯುವುದೇ ನಿಜವಾದ ಸ್ವಾತಂತ್ರ್ಯ ಎಂದಿದ್ದಾರೆ. ಅದರೊಂದಿಗೆ, ನಿಜವಾದ ಸ್ವರಾಜ್ಯವು ಅಧಿಕಾರವನ್ನು ಕೆಲವೇ ಕೆಲವು ವ್ಯಕ್ತಿಗಳು ಸ್ವಾಧೀನ ಪಡಿಸಿಕೊಳ್ಳುವುದರಿಂದ ಬರುವುದಿಲ್ಲ. ಆದರೆ ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಾಗ ಅದನ್ನು ಎಲ್ಲರೂ ವಿರೋಧಿಸುವ ಸಾಮರ್ಥ್ಯವನ್ನು ಬೆಳೆಸುವುದರಿಂದ ಉಂಟಾಗುತ್ತದೆ ಎಂದಿದ್ದಾರೆ.

ಗ್ರಾಮ ಸ್ವರಾಜ್ಯ ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಅಂದರೆ – ಪ್ರತಿ ಗ್ರಾಮವನ್ನು ಸ್ವ-ಸಮರ್ಥ ಸ್ವಾಯತ್ತ ಘಟಕವಾಗಿ ಪರಿವರ್ತಿಸುವುದು, ಅಲ್ಲಿ ಗೌರವಯುತ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳು ಮತ್ತು ಸೌಲಭ್ಯಗಳು ಲಭ್ಯವಿರುವಂತೆ ನೋಡಿಕೊಳ್ಳುವುದು. ಗ್ರಾಮವನ್ನು ಅಭಿವೃದ್ಧಿಪಡಿಸುವ ಆಡಳಿತಾತ್ಮಕ ಅಧಿಕಾರ ಮತ್ತು ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ನೀಡುವುದು. ಗ್ರಾಮಗಳನ್ನು ಸ್ವಾವಲಂಬಿ ಮತ್ತು ಸಮೃದ್ಧಿಯಾಗಿಸಲು ಬೇಕಾದ ವ್ಯವಸ್ಥೆ ಮಾಡುವುದು ಆಗಿರುತ್ತದೆ. ಅಲ್ಲಿ ಸ್ಥಳೀಯರದ್ದೇ ಆಡಳಿತ ವ್ಯವಸ್ಥೆ ಇರುತ್ತದೆ. ಅದರಿಂದಾಗಿ ಲಂಚ, ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಲು ಅವಕಾಶ ಸಿಗುತ್ತದೆ.

ಮಹಾತ್ಮಗಾಂಧಿಯವರ ಈ ಮೇಲಿನ ಆಶಯದ ಸ್ವಾತಂತ್ರ್ಯ ಮತ್ತು ಗ್ರಾಮಸ್ವರಾಜ್ಯ ಬಂದರೆ ಕೇಂದ್ರ ಮತ್ತು ರಾಜ್ಯದಿಂದ ಬರುವ ಲಂಚ, ಭ್ರಷ್ಟಾಚಾರಗಳಿಗೆ ತಡೆ ಉಂಟಾಗುತ್ತದೆ. ಜನರ ಸ್ವಯಂ ಆಡಳಿತದಿಂದ ಗ್ರಾಮಸಮೃದ್ಧವಾಗಿ ದೇಶವೂ ಅಭಿವೃದ್ಧಿಯಾಗುತ್ತದೆ. ಅದು ಆಚರಣೆಗೆ ಬರಲು ಮತದಾರರ ಜಾಗೃತಿ ಅವಶ್ಯಕತೆ ಇದೆ. ಅದಕ್ಕಾಗಿ ಪ್ರತೀ ಗ್ರಾಮಗಳಿಂದ ತಾಲೂಕಿನಿಂದ ಪಕ್ಷ, ಜಾತಿ, ಧರ್ಮ ಭೇದವಿಲ್ಲದ ಆಸಕ್ತರ ತಂಡಗಳ ರಚನೆಯಾಗಬೇಕಿದೆ. ಅದು ರಚನೆಯಾದರೆ ಮತದಾರರ ಜಾಗೃತಿಯ ಆಂದೋಲನದ ಉದ್ದೇಶವನ್ನು ಈ ಚುನಾವಣೆಯ ಸಂದರ್ಭದಲ್ಲಿಯೇ ಪ್ರಧಾನಿ ಮೋದೀಜಿ ಹಾಗೂ ರಾಹುಲ್ ಗಾಂಧಿಯವರ ಗಮನಕ್ಕೆ ತಂದು ಅದನ್ನು ರಾಷ್ಟ್ರ ವ್ಯಾಪಿ ಆಂದೋಲನವನ್ನಾಗಿ ಮಾಡಲು, ಅನುಷ್ಠಾನಕ್ಕೆ ಬರುವಂತೆ ಮಾಡಲು ಸಾಧ್ಯವಿದೆ ಎಂದು ಹೇಳಲು ಬಯಸುತ್ತೇನೆ.

LEAVE A REPLY

Please enter your comment!
Please enter your name here