ಉಪ್ಪಿನಂಗಡಿ: ಸ್ಲೀಪರ್ ಕೋಚ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಅದೇ ಬಸ್ಸಿನಲ್ಲಿದ್ದ ಅನ್ಯಕೋಮಿನ ಸಹ ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಲು ಮುಂದಾಗಿ, ವಿದ್ಯಾರ್ಥಿನಿಯ ಪ್ರತಿರೋಧದ ನಡುವೆ ಆರೋಪಿಯು ಬಸ್ಸಿನಿಂದ ಜಿಗಿದು ಪರಾರಿಯಾದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದ ಆರೋಪಿ ಮಹಮ್ಮದ್ ಅಝೀಮ್ (23)ನನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ಮೂಲತಃ ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ವಿದ್ಯಾರ್ಥಿನಿಯು ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನರ್ ಕಲಿಯುತ್ತಿದ್ದು, ಊರಿಗೆ ಹೋಗುವ ಸಲುವಾಗಿ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೆಳ್ತಂಗಡಿ ತಾಲೂಕು ಲಾಯಿಲದ ನಿವಾಸಿಯಾಗಿದ್ದ ಆರೋಪಿಯು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ಆರೋಪಿಯ ವಿರುದ್ದ ಸೆಟೆದು ನಿಂತ ವಿದ್ಯಾರ್ಥಿನಿಯ ಪ್ರತಿರೋಧದ ನಡುವೆ ಆರೋಪಿಯು ನೆಲ್ಯಾಡಿ ಸಮೀಪ ಬಸ್ಸಿನಿಂದ ಹೊರಗೆ ಜಿಗಿದು ಪರಾರಿಯಾಗಿದ್ದನು. ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಬಸ್ಸಿನಿಂದ ಜಿಗಿಯುವ ವೇಳೆ ಕಾಲಿಗೆ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುರುವಾರದಂದು ಅಲ್ಲಿಂದ ಬಿಡುಗಡೆಗೊಂಡಿರುವುದಾಗಿ ತಿಳಿದು ಬಂದಿದೆ.
ಪರಾರಿಯಾಗುವ ವೇಳೆ ಆರೋಪಿಯು ಜಿಗಿದ ಸ್ಥಳದಿಂದ 300 ಮೀಟರ್ನಷ್ಟು ದೂರಕ್ಕೆ ಓಡಿ ಹೋಗಿದ್ದು, ಬಳಿಕ ಹೆದ್ದಾರಿ ಅಗಲೀಕರಣದ ಕಾಮಗಾರಿ ನಿರತ ಕಾರ್ಮಿಕರ ಮೊಬೈಲ್ ಪೋನ್ ಪಡೆದು ತನ್ನ ಗೆಳೆಯರನ್ನು ಸಂಪರ್ಕಿಸಿ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದನೆಂದೂ, ಈ ಮಾಹಿತಿಯನ್ನಾಧರಿಸಿ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ವಿದ್ಯಾರ್ಥಿನಿಯನ್ನು ಕರೆಯಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಸ್ಥಳ ಮಹಜರು ನಡೆಸಿದರು.