ಶಾಸಕ ಅಶೋಕ್ ರೈಗೆ ಕರೆ ಮಾಡಿದ ಉಡುಪಿಯ ಬಾಲಕ-ಶಿಕ್ಷಣದ ಪೂರ್ತಿ ವೆಚ್ಚ ಭರಿಸುವೆ : ಅಶೋಕ್ ರೈ ಭರವಸೆ

0

ಪುತ್ತೂರು: ಉಡುಪಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನೋರ್ವನ ಜೊತೆ ಮಾತುಕತೆ ನಡೆಸಿದ ವಿಚಾರ ಮತ್ತು ಆ ಬಾಲಕನೊಂದಿಗೆ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದು ಇದೀಗ ಬಾಲಕ ಶಾಸಕರಿಗೆ ಕರೆ ಮಾಡಿ ನಾನು ಕಲಿಯುತ್ತೇನೆ , ಓದು ಮುಂದುವರೆಸುತ್ತೇನೆ ಎಂದು ತಿಳಿಸಿದ್ದು ಶಿಕ್ಷಣದ ಪೂರ್ತಿವೆಚ್ಚವನ್ನು ತಾನು ಭರಿಸುವುದಾಗಿ ಶಾಸಕರು ತಿಳಿಸಿದ್ದಾರೆ.


ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಶಾಸಕರು ಅಲ್ಲಿ ಊಟ ಮಾಡಿ ಪ್ಲೇಟ್ ಇಡಲು ತೆರಳಿದಾಗ ಅಲ್ಲೋರ್ವ ಬಾಲಕ ಪ್ಲೇಟ್ ಸ್ವಚ್ಚ ಮಾಡುತ್ತಿದ್ದ. ಆತನನ್ನು ನೋಡಿದ ಶಾಸಕರು ಆತನ ಪರಿಚಯ ಮಾಡಿಕೊಂಡರು. ನೀನು ಕಲಿಯುವುದಕ್ಕೆ ಹೋಗುವುದಿಲ್ವ? ಕೆಲಸಕ್ಕೆ ಯಾಕೆ ಹೋಗುತ್ತಿದ್ದಿಯ? ಮನೆಯಲ್ಲಿ ಅಪ್ಪ ಅಮ್ಮ ಏನು ಮಾಡುತ್ತಾರೆ? ಮನೆಯ ಪರಿಸ್ಥಿತಿ ಹೇಗಿದೆ? ಎಂದೆಲ್ಲಾ ಆತನಲ್ಲಿ ಮಾಹಿತಿ ಪಡೆದುಕೊಂಡರು. ತನ್ನ ಮನೆಯ ವಿಚಾರವನ್ನು ಎಳೆ ಎಳೆಯಾಗಿ ಬಾಲಕ ಶಾಸಕರಲ್ಲಿ ತಿಳಿಸಿದ್ದಾನೆ. ಬಾಲಕನ ಸಂಕಷ್ಟದ ಮಾತುಗಳನ್ನು ಕೇಳಿದ ಶಾಸಕರು ನೀನು ಕಲಿಯಬೇಕು, ಕಲಿತು ಒಂದು ಒಳ್ಳೆಯ ಉದ್ಯೋಗವನ್ನು ಪಡೆದು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿ ಆತನ ಭುಜಕ್ಕೆ ಕೈ ಇಟ್ಟು ಫೋಟೋ ಕ್ಲಿಕ್ಕಿಸಿಕೊಂಡರು. ಬಾಲಕನೂ ಶಾಸಕರ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ.

ಫೋಟೋ ವೈರಲ್
ಶಾಸಕರು ಬಾಲಕನ ಜೊತೆ ಪ್ಲೇಟ್ ತೊಳೆಯುವ ಜಾಗದಲ್ಲೇ ನಿಂತು ತೆಗೆದ ಫೋಟೋ ಮತ್ತು ಶಾಸಕರು ಬಾಲಕನ ಜೊತೆ ಮಾತನಾಡಿದ ವಿಚಾರ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದ್ದು ಮಾತ್ರವಲ್ಲದೆ ಶಾಸಕರ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಕರೆ ಮಾಡಿದ ಬಾಲಕ
ಮೇ. 3 ಶುಕ್ರವಾರ ಬಾಲಕ ಶಾಸಕರಿಗೆ ಕರೆ ಮಾಡಿದ್ದಾನೆ. ನಾನು ಕಲಿಯುವುದಕ್ಕೆ ಹೋಗುತ್ತೇನೆ ಎಂದು ತಿಳಿಸಿದ್ದಾನೆ. ನೀನು ಇಂಜಿನಿಯರಿಂಗ್ ಕಲಿಯಬೇಕು ಎಂದು ಹೇಳಿದ ಶಾಸಕರು ಅದಕ್ಕೆ ಬೇಕಾಗುವ ಎಲ್ಲಾ ಖರ್ಚು ವೆಚ್ಚಗಳನ್ನು ನಾನೇ ಭರಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಬಾಲಕ ತಾನು ಬಿಕಾಂ ಪದವಿ ವ್ಯಾಸಂಗ ಮಾಡುವುದಾಗಿ ಹೇಳಿದ್ದಾನೆ. ಇಂಜಿನಿಯರಿಂಗ್ ಕಲಿಯಬೇಕು ಎಂದು ಶಾಸಕರು ಆಗ್ರಹಿಸಿದ್ದರೂ ಬಾಲಕನಿಗೆ ಬಿಕಾಂ ಪದವಿ ಮಾಡಲು ಇಷ್ಟವಾದ ಕಾರಣ ಅದನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಬಾಲಕ ಶಾಸಕರಲ್ಲಿ ತಿಳಿಸಿದ್ದಾನೆ.

ಯಾರೆಂಬುದೇ ಗೊತ್ತಿಲ್ಲ…!
ಶಾಸಕರು ಬಾಲಕನ ಜೊತೆ ಆಡಿದ ಮಾತು, ತೆಗೆದ ಫೋಟೋ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡಿದೆ, ಶಾಸಕರಿಗೆ ಬಾಲಕ ಕರೆ ಮಾಡಿದ್ದಾನೆ, ಶಾಸಕರು ನೆರವಿನ ಹಸ್ತವನ್ನು ಚಾಚಿದ್ದಾರೆ. ಆದರೆ ಈ ಬಾಲಕನ ಹೆಸರು, ಅವನ ಊರು ಯಾವುದೂ ಶಾಸಕರಿಗೆ ಗೊತ್ತಿಲ್ಲ. ಈ ಬಗ್ಗೆ ಶಾಸಕರಲ್ಲಿ ಕೇಳಿದಾಗ ಯಾರಾದರೇನು? ಎಲ್ಲಿಯವನಾದರೇನು? ಆತ ಒಬ್ಬ ತಾಯಿಗೆ ಹುಟ್ಟಿದ ಮಗು, ಅವನ ಕಷ್ಟ ಕೇಳಿ ನನ್ನ ಮನಸ್ಸಿಗೆ ನೋವಾಯಿತು. ನೋಡುವಾಗ ಸ್ಮಾರ್ಟ್ ಇದ್ದಾನೆ, ಬುದ್ದಿವಂತ ಹುಡುಗನಂತೆ ಕಾಣುತ್ತಾನೆ. ಅವನು ಕಲಿತು ಒಬ್ಬ ಉತ್ತಮ ಪ್ರಜೆಯಾಗಲಿ, ಅವನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಒಬ್ಬ ಸಂಸ್ಕಾರಯುತ ವ್ಯಕ್ತಿಯಾಗಿ ಬೆಳೆಯಲಿ. ಯಾರಾದರೆ ನನಗೇನು ? ಅವನು ಒಳ್ಳೆಯ ವ್ಯಕ್ತಿಯಾಗಿ ಈ ಸಮಾಜದ ಸೊತ್ತಾದರೆ ಅದುವೇ ನನಗೆ ಸಂತೃಪ್ತಿ ಎಂದು ಹೇಳುತ್ತಾರೆ.

ಉಡುಪಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಬಾಲಕ ಅಕಸ್ಮಿಕವಾಗಿ ಸಿಕ್ಕಿದ. ಆತ ಮಾಡುತ್ತಿದ್ದ ಕೆಲಸದ ಬಗ್ಗೆ ಕೀಳರಿಮೆ ಇಲ್ಲ ಆದರೆ ಸಣ್ಣ ಪ್ರಾಯದಲ್ಲೇ ಈ ಕೆಲಸಕ್ಕೆ ಯಾಕೆ ಬಂದಿದ್ದಿ ಎಂದು ಆತನ ಜೊತೆ ಕೇಳಿದೆ. ಆತ ಕಷ್ಟವನ್ನು ಹಂಚಿಕೊಂಡ, ಮನಸ್ಸಿಗೆ ಬಹಳ ನೋವಾಯಿತು. ಓದು ಮುಂದುವರೆಸುವಂತೆ ಹೇಳಿದೆ, ಕಲಿಕೆಗೆ ತೊಂದರೆಯಾದರೆ ಕರೆ ಮಾಡು ಎಂದು ನಂಬರ್ ಕೊಟ್ಟೆ, ಬಾಲಕ ಕರೆ ಮಾಡಿ ಓದು ಮುಂದುವರೆಸುವುದಾಗಿ ತಿಳಿಸಿದ. ಇಂಜಿನಿಯರಿಂಗ್ ಮಾಡು ಎಂದು ಸೂಚಿಸಿದೆ ಆದರೆ ಅವನು ಬಿಕಾಂ ಪದವಿ ಮಾಡುವುದಾಗಿ ಹೇಳಿದ. ಆತನ ಶಿಕ್ಷಣದ ಪೂರ್ತಿ ಖರ್ಚು ವೆಚ್ಚವನ್ನು ನಾನೇ ಭರಿಸುವುದಾಗಿ ತಿಳಿಸಿದೆ.
ಅಶೋಕ್ ರೈ , ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here