ಕಡಬ: ರೆಂಜಿಲಾಡಿ ಗ್ರಾಮದಲ್ಲಿ ಮದುವೆ ಔತಣಕೂಟ ಕಾರ್ಯಕ್ರಮದಲ್ಲಿ ಯುವಕನೋರ್ವ ಯುವತಿಯೊಂದಿಗಿರುವುದನ್ನು ಮೊಬೈಲ್ನಲ್ಲಿ ಫೋಟೋ ತೆಗೆದಿದ್ದಾರೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿ ತಂಡವೊಂದು ಯುವಕನ ಮನೆಗೆ ಬಂದು ಹಲ್ಲೆ ನಡೆಸಿದ ಬಗ್ಗೆ ತಡವಾಗಿ ವರದಿಯಾಗಿದೆ.
ಏ.29ರಂದು ರೆಂಜಿಲಾಡಿ ಗ್ರಾಮದ ಕುಶಾಲಪ್ಪ ಗೌಡ ಎಂಬವರ ಪುತ್ರಿಯ ಮದುವೆ ನಡೆದು ಅದೇ ದಿನ ಔತಣಕೂಟ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ನಿಶಾಂತ್ ಎಂಬ ಯುವಕ ಯುವತಿಯೊಂದಿಗಿರುವ ಫೋಟೋವನ್ನು ಬಾಂತಾಜೆ ನಿವಾಸಿ ದಿವಾಕರ ಎಂಬವರು ತೆಗೆದಿದ್ದಾರೆ ಎಂದು ಆರೋಪಿಸಿ ನಿಶಾಂತ್ ನೇತೃತ್ವದಲ್ಲಿ ಧನಂಜಯ, ಜನಾರ್ದನ, ಲೋಕೇಶ, ರಮೇಶ್, ಉದಯ, ಭುವನ, ಅಶ್ವಿತ್ ಎಂಬವರು ರಾತ್ರಿ 11.30ರ ಸುಮಾರಿಗೆ ದಿವಾಕರ ಅವರ ಮನೆಗೆ ಬಂದು ಹಲ್ಲೆ ನಡೆಸಿದ್ದಾರೆ. ಈ ವೇಳೆ ದಿವಾಕರ ಅವರ ಅತ್ತಿಗೆ ಭವ್ಯ ಶ್ರೀ ಅವರು ಜಗಳ ಬಿಡಿಸಲು ಯತ್ನಿಸಿದಾಗ ಸ್ವಾತಿ ಮತ್ತು ರೇಷ್ಮಾ, ಶೈನಿ ಎಂಬವರು ಭವ್ಯ ಶ್ರೀಯವರಿಗೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ನೆರೆಮನೆಯ ಶಿವಪ್ಪ ಎಂಬವರು ರಕ್ಷಣೆಗೆ ಬಂದಾಗ ಅವರಿಗೂ ನಿಶಾಂತ್ ಹಾಗೂ ತಂಡ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನೆರೆಮನೆಯ ಬಾಬು ಗೌಡ ಮತ್ತು ಪ್ರದೀಪ್ ಅವರುಗಳು ಗಾಯಾಳುಗಳನ್ನು ಉಪಚರಿಸಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.