ನೆಲ್ಯಾಡಿ: ನವೀಕರಣಗೊಂಡಿರುವ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಉದನೆ ಸಂತ ತೋಮಸರ ಫೊರೇನಾ ದೇವಾಲಯದ ಪವಿತ್ರೀಕರಣ ವಿಧಿ ಮತ್ತು ದೇವಾಲಯ ಪ್ರತಿಷ್ಠಾವಿಧಿಗಳು ಮೇ.4ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಮಾರ್ ಲಾರೆನ್ಸ್ ಮುಕ್ಕುಯಿ ಅವರ ಮುಖ್ಯ ಯಾಜಕತ್ವದಲ್ಲಿ ನಡೆಯಿತು.
ಸಂಜೆ ನವೀಕರಣಗೊಂಡ ಚರ್ಚ್‌ಗೆ ಆಗಮಿಸಿದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಮಾರ್ ಲಾರೆನ್ಸ್ ಮುಕ್ಕುಯಿ, ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ಹಾಗೂ ಇತರೇ ಧರ್ಮಗುರುಗಳಿಗೆ ಸ್ವಾಗತ ಕೋರಲಾಯಿತು. ಬಳಿಕ ನವ ನಿರ್ಮಿತ ದೇವಾಲಯದ ಉದ್ಘಾಟನೆ, ದೇವಾಲಯದ ಪವಿತ್ರೀಕರಣ, ದೇವಾಲಯ ಪ್ರತಿಷ್ಠಾಪನೆ, ವಿಜೃಂಭಣೆಯ ದಿವ್ಯ ಬಲಿಪೂಜೆಯು ಬಿಷಫ್ ಮಾರ್ ಲಾರೆನ್ಸ್ ಮುಕ್ಕುಯಿ, ಬಿಷಫ್ ಗೀವರ್ಗೀಸ್ ಮಾರ್ ಮಕ್ಕಾರಿಯೋಸ್, ಬೆಳ್ತಂಗಡಿಯ ಧರ್ಮಗುರು ಫಾ.ತೋಮಸ್ ಕಣ್ಣಾಂಗಲ್ ಹಾಗೂ ಕುಟ್ರುಪ್ಪಾಡಿ ಚರ್ಚ್‌ನ ಧರ್ಮಗುರು ವೆ|ರೆ|ಫಾ| ವರ್ಗೀಸ್ ಪುದಿಯಿಡತ್ತ್ ಅವರ ಮುಖ್ಯ ಯಾಜಕತ್ವದಲ್ಲಿ ನಡೆಯಿತು. ಸಂಜೆ ಸಭಾ ಕಾರ್ಯಕ್ರಮ, ಬಳಿಕ ಸಹ ಭೋಜನ ನಡೆಯಿತು. ರಾತ್ರಿ ಅಭಿಜಿತ್ ಕೊಲ್ಲಂ ಮತ್ತು ತಂಡದವರಿಂದ ಗಾನಮೇಳ ನಡೆಯಿತು. ಸಿರಿಯನ್ ಆರ್ಥೋಡೊಕ್ಸ್ ಚರ್ಚ್‌ನ ಇಎಇ ಆರ್ಚ್ ಡಯೋಸಿಸ್‌ನ ಮೆಟ್ರೋಪಾಲಿಟನ್ ಮೋರ್ ಕ್ರಿಸೋಸ್ತೊಮಸ್ ಮಾರ್ಕೋಸ್ ಹಾಗೂ ವಿವಿಧ ಚರ್ಚ್‌ನ ಧರ್ಮಗುರುಗಳು, ಚರ್ಚ್‌ನ ಸದಸ್ಯರು, ಗ್ರಾಮಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಚರ್ಚ್‌ನ ಧರ್ಮಗುರು ರೆ.ಫಾ.ಸಿಬಿ ತೋಮಸ್ ಪನಚ್ಚಿಕ್ಕಲ್, ಸಹಾಯಕ ಧರ್ಮಗುರು ರೆ.ಫಾ.ಅಖಿಲ್ ಒಂಡುಕಾಟ್ಟಿಲ್, ಉಪಾಧ್ಯಕ್ಷರಾದ ಸಣ್ಣಿ ಕಳತುಕುಳಂಙರ, ಟೈಟಸ್ ಇಲ್ಲಿಕ್ಕಲ್, ಬೇಬಿ ಚೆರಿಯಾನ್ ತಯ್ಯಿಲ್, ಜೋಣಿ ಮ್ಯಾಲಿಲ್ ಹಾಗೂ ಪಾಲನ ಮತ್ತು ನಿರ್ವಹಣಾ ಸಮಿತಿ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮೇ 5ರಂದು ಸಂಜೆ 4ರಿಂದ ದಿವ್ಯ ಬಲಿಪೂಜೆ, ಭವ್ಯ ಮೆರವಣಿಗೆ, ಸಹಭೋಜನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.