ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಪೆರಣಬೈಲು ಅನಿಲ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆರೂಢದಲ್ಲಿ ನಡೆಯಲಿರುವ ಶ್ರೀ ವನದುರ್ಗಾ ದೇವಿಯ ಪ್ರತಿಷ್ಠಾ ಕಾರ್ಯಕ್ರಮಗಳಿಗೆ ಮೇ.4ರಂದು ಸಂಜೆ ಚಾಲನೆ ನೀಡಲಾಯಿತು.
ದೈವಜ್ಞರಾದ ದಿನೇಶ್ ಪಣಿಕ್ಕರ್ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆ ಚಿಂತನೆಯಲ್ಲಿ ಪೆರಣಬೈಲಿನ ಅನಿಲದಲ್ಲಿ ಶ್ರೀ ದೇವಿ ಸಾನಿಧ್ಯವಿರುವುದು ಕಂಡುಬಂದಿತ್ತು. ಅದರಂತೆ ಶ್ರೀ ವನದುರ್ಗಾ ದೇವಿಯ ಪದ್ಮಶಿಲಾ ಪ್ರತಿಷ್ಠೆಗೆ ಆರೂಢ ನಿರ್ಮಾಣಗೊಳಿಸಲಾಗಿತ್ತು. ಇದರಲ್ಲಿ ಮೇ.5ರಂದು ಶ್ರೀ ವನದುರ್ಗಾದೇವಿಯ ಪದ್ಮಶಿಲಾ ಪ್ರತಿಷ್ಠೆ ನಡೆಯಲಿದೆ. ಪ್ರತಿಷ್ಠೆಯ ಅಂಗವಾಗಿ ಮೇ.4ರಂದು ಸಂಜೆ ತೋರಣ ಮುಹೂರ್ತ, ಪ್ರಾಸಾದಾದಿ ಪರಿಗ್ರಹ ನಡೆಯಿತು. ಬಳಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪಂಚಗವ್ಯ ಪುಣ್ಯಾಹವಾಚನ, ಆಚಾರ್ಯವರಣೆ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ಬಲಿ, ವನದುರ್ಗಾ ಹೋಮ, ದಿಕ್ಪಾಲಕ ಬಲಿ ಹಾಗೂ ಬಿಂಬಾಧಿವಾಸ ನಡೆಯಿತು. ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ತಂತ್ರಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಇವರ ಮಾರ್ಗದರ್ಶನದಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಬಡೆಕಿಲ್ಲಾಯರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ನೋಣಯ್ಯ ಗೌಡ ಅನಿಲ, ಎ.ಎಸ್. ಶೇಖರ ಗೌಡ ಅನಿಲ, ಕುಶಾಲಪ್ಪ ಗೌಡ ಅನಿಲ, ವಿಶ್ವನಾಥ ಗೌಡ ಪೆರಣಗುತ್ತು, ವೆಂಕಪ್ಪ ಗೌಡ ಡೆಬ್ಬೇಲಿ, ಕಮಲಾಕ್ಷ ಪಂಡಿತ್ ಗೋಳಿತ್ತೊಟ್ಟು, ಧರ್ಣಪ್ಪ ಗೌಡ ನಾವುಳೆ, ಗೋಪಾಲ ಗೌಡ ಕುದ್ಕೋಳಿ, ನಾರಾಯಣ ಆಚಾರ್ಯ ಅನಿಲ, ಪುರಂದರ ಗೌಡ ಡೆಂಜ, ಪುರುಷೋತ್ತಮ ಗೌಡ ಕುದ್ಕೋಳಿ, ಬಾಲಕೃಷ್ಣ ಅಲೆಕ್ಕಿ ಸೇರಿದಂತೆ ಅನಿಲ ಕುಟುಂಬಸ್ಥರು, ಪೆರಣಬೈಲು ಗ್ರಾಮಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇಂದು ಪದ್ಮಶಿಲಾ ಪ್ರತಿಷ್ಠೆ:
ಮೇ.5ರಂದು ಬೆಳಿಗ್ಗೆ 7.30ರಿಂದ ಮಹಾಗಣಪತಿ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ಪಂಚವಿಂಶತಿ ಕಲಶಾರಾಧನೆ ನಡೆದು 10.27ರ ಮಿಥುನ ಲಗ್ನದಲ್ಲಿ ಶ್ರೀ ವನದುರ್ಗಾ ದೇವಿಯ ಪದ್ಮಶಿಲಾ ಪ್ರತಿಷ್ಠೆ ನಡೆಯಲಿದೆ. ಬಳಿಕ ಪ್ರತಿಷ್ಠಾ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.