ನೆಲ್ಯಾಡಿ: ಜೋರ್ಜಿಯನ್ ತೀರ್ಥಾಟನಾ ಕೇಂದ್ರವೆಂದು ಪ್ರಸಿದ್ಧಿ ಪಡೆದಿರುವ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬ ಮೇ.7ರಂದು ಸಂಪನ್ನಗೊಂಡಿತು.
ಮೇ.1ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾರವರು ದಿವ್ಯ ಬಲಿಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿದ್ದರು. ಮೇ.1 ರಿಂದ 7ರ ತನಕ ಪ್ರತಿದಿನ ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಪವಿತ್ರ ದಿವ್ಯಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ಮಧ್ಯಾಹ್ನದ ಪ್ರಾರ್ಥನೆ, ಸಂಧ್ಯಾ ಪ್ರಾರ್ಥನೆ ನಡೆಯಿತು. ಮೇ.6 ರಂದು ಸಂಜೆ ಪಾದಯಾತ್ರಿಗರಿಗೆ ಸ್ವಾಗತ, ಸಂಧ್ಯಾ ಪ್ರಾರ್ಥನೆ, ಹಬ್ಬದ ಸಂದೇಶ ಬಳಿಕ ಕಾಯರ್ತಡ್ಕ ಶಿಲುಬೆಯ ತನಕ ಮೆರವಣಿಗೆ ನಡೆಯಿತು. ರಾತ್ರಿ ಆಶೀರ್ವಾದ, ಅನ್ನಸಂತರ್ಪಣೆ ನಡೆಯಿತು. ಮೇ.7ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಮದ್ರಾಸ್ ಧರ್ಮಪ್ರಾಂತ್ಯದ ಮಲಂಕರ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ಧರ್ಮಾಧ್ಯಕ್ಷರಾದ ಅತೀ ವಂದನೀಯ ಗೀವರ್ಗೀಸ್ ಮಾರ್ ಫಿಲಕ್ಸಿನೋಸ್ ಅವರ ನೇತೃತ್ವದಲ್ಲಿ ಪವಿತ್ರ ಬಲಿ ಪೂಜೆ ನಡೆಯಿತು. ಬಳಿಕ ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆಯ ನಂತರ ಹಬ್ಬದ ಸಂದೇಶ ನೀಡಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಹೊಸಂಗಡಿ ಶಿಲುಬೆಗೋಪುರದ ತನಕ ಮೆರವಣಿಗೆ ನಡೆಯಿತು. ನಂತರ ಆಶೀರ್ವಾದ, ಪ್ರಸಾದ ವಿತರಣೆ, ಸಂಜೆ ಹಬ್ಬದ ಧ್ವಜ ಇಳಿಸುವಿಕೆಯೊಂದಿಗೆ ವಾರ್ಷಿಕ ಹಬ್ಬ ಸಂಪನ್ನಗೊಂಡಿತು. ವಿವಿಧ ಚರ್ಚ್‌ಗಳ ಧರ್ಮಗುರುಗಳು ಸಹಕರಿಸಿದರು. ಚರ್ಚ್‌ನ ಧರ್ಮಗುರು ರೆ.ಫಾ.ವರ್ಗೀಸ್ ತೋಮಸ್, ಆಡಳಿತ ಸಮಿತಿ ಕಾರ್ಯದರ್ಶಿ ವಿ.ಎನ್.ಚಾಕೋ, ಟ್ರಸ್ಟಿ ಜೋನ್ ಅಬ್ರಹಾಂ ಚೀರಮಟ್ಟಂ, ಸದಸ್ಯರಾದ ಮೇಹಿ ಜಾರ್ಜ್, ರೋಯಿ ಪಿ.ಜಿ., ಕುರಿಯಾಕೋಸ್ ಟಿ.ಕೆ., ಟಿ.ಜೆ.ವರ್ಗೀಸ್, ಜಾನ್ಸನ್ ಸಿ.ಕೆ., ಜೋಜಿ ತೋಮಸ್, ಟಿ.ವಿ.ತೋಮಸ್, ಅಬ್ರಹಾಂ ಟಿ.ಎಂ., ಬಾಜಿ ಜೋಸೆಫ್, ಲೆಕ್ಕ ಪರಿಶೋಧಕರಾದ ಪಿ.ಸಿ.ಪೌಲೋಸ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸರ್ವಧರ್ಮೀಯರಿಂದಲೂ ಪ್ರಾರ್ಥನೆ:
ಮೇ.1ರಿಂದ 7ರ ತನಕ ನಡೆದ ಪವಿತ್ರ ದಿವ್ಯ ಬಲಿಪೂಜೆಯ ನಂತರ ಭಕ್ತರು ಹರಕೆ ಕಾಣಿಕೆ ಸಲ್ಲಿಸಿದರು. ಕ್ರೈಸ್ತ ಧರ್ಮೀಯರೂ ಅಲ್ಲದೇ ಹಿಂದೂ, ಮುಸ್ಲಿಮರೂ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಹರಕೆ, ಕಾಣಿಕೆ ಸಮರ್ಪಿಸಿದ್ದರು. ಭಕ್ತಾದಿಗಳು ಉರುಳುಸೇವೆ, ಮೊಣಕಾಲ ನಡಿಗೆ, ಮೇಣದ ಬತ್ತಿ ಉರಿಸಿ ಹರಕೆ ಸಮರ್ಪಿಸಿದರು.
ಸೈಮನ್ ಸಿ.ಎ.ಅವರಿಗೆ ಜಾರ್ಜಿಯನ್ ಅವಾರ್ಡ್:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಲೋಕಾಯುಕ್ತ ಎಸ್‌ಪಿ ಆಗಿರುವ ಕಡಬ ಮೂಲದ ಸೈಮನ್ ಸಿ.ಎ.ಅವರಿಗೆ ಈ ವರ್ಷದ ಜಾರ್ಜಿಯನ್ ಅವಾರ್ಡ್ ನೀಡಲಾಯಿತು. ಸೈಮನ್ ಸಿ.ಎ.ಅವರು ಪ್ರಸ್ತುತ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗೆ ರಾಜ್ಯ ಸರಕಾರ ನೇಮಕ ಮಾಡಿರುವ ಎಸ್‌ಐಟಿ ತಂಡದಲ್ಲಿದ್ದಾರೆ.