ಸದಾ ಸುದ್ದಿಯಲ್ಲಿರುತ್ತಿದ್ದ ಬೆಳ್ತಂಗಡಿಯ ಹುಲಿ ವಸಂತ ಬಂಗೇರರು ಇನ್ನು ನೆನಪು ಮಾತ್ರ

0

ನಾವು ಬೆಳ್ತಂಗಡಿಯಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಪ್ರಾರಂಭಿಸುವಾಗ ವಸಂತ ಬಂಗೇರರು ಶಾಸಕರಾಗಿದ್ದರು. ನಮ್ಮ ಪತ್ರಿಕೆಯ ಉದ್ಘಾಟಕರೂ ಆಗಿದ್ದರು. ವಸಂತ ಬಂಗೇರರೆಂದರೆ ಅಂದು ಯುವಕರ ಅಚ್ಚುಮೆಚ್ಚಿನ ವ್ಯಕ್ತಿ. ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನವಾಗಿದ್ದ ಅವರು ಭ್ರಷ್ಟಾಚಾರಿಗಳು ಯಾರೇ ಆದರೂ ಸಹಿಸದೆ ನೇರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಬಂಗೇರರು ಅಂದಿನಿಂದ ಜೀವಮಾನದ ಕೊನೆಯವರೆಗೂ ರಾಜಕೀಯದಲ್ಲಿ ಭ್ರಷ್ಟಾಚಾರದ ವಿಷಯದಲ್ಲಿ ರಾಜಿ ಮಾಡಿಕೊಂಡವರೂ ಅಲ್ಲ. 5 ಬಾರಿ ಶಾಸಕರಾಗಿದ್ದು, ಬಿಜೆಪಿಯಿಂದ, ಕಾಂಗ್ರೆಸ್‌ನಿಂದ ಹಾಗೂ ದಳದಿಂದ ಗೆಲುವನ್ನು ಕಂಡಿರುವ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಅಂದಿನಿಂದ ಹಿಂದಿನ ಚುನಾವಣೆಯವರೆಗೂ ಬೆಳ್ತಂಗಡಿಯ ರಾಜಕೀಯದಲ್ಲಿ ಬಂಗೇರರ ಪರ, ಬಂಗೇರರ ವಿರುದ್ಧ ಎಂದೇ ರಾಜಕೀಯ ಮತ್ತು ಚುನಾವಣೆ ನಡೆಯುತ್ತಿತ್ತು. ಕಳೆದ ಚುನಾವಣೆಯಲ್ಲಿ ತಾನು ಅಭ್ಯರ್ಥಿಯಾಗಿರದಿದ್ದರೂ ಹಣದ ವಿತರಣೆಯಾಗುತ್ತಿದೆ ಎಂದು ನಡುರಾತ್ರಿಯಲ್ಲಿ, ಆ 80ರ ಇಳಿ ವಯಸ್ಸಿನಲ್ಲಿಯೂ ವಾಹನಕ್ಕೆ ಅಡ್ಡ ನಿಂತು ತಪಾಸಣೆ ನಡೆಸಿದ ಅವರ ಧೈರ್ಯವಂತಿಕೆ ಅದಕ್ಕೆ ಉತ್ತಮ ಸಾಕ್ಷಿ.


ಬೆಳ್ತಂಗಡಿಯಲ್ಲಿ ಮಂಗನ ಖಾಯಿಲೆ ಬಂದಾಗ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಪರಿಹಾರಕ್ಕೆ ಕಿವಿ ಕೊಡದಿದ್ದಾಗ ವಿಧಾನ ಸಭಾ ಕಲಾಪದಲ್ಲಿಯೇ ಆ ವಿಷಯವನ್ನು ಎತ್ತಿಕೊಂಡು ಬಂಗೇರರು ಮಂಗನ ಖಾಯಿಲೆಯ ಹುಳ ವಿರುವ ಬಾಟಲಿಯನ್ನು ಅಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇಲ್ಲಿರುವ ಎಲ್ಲರಿಗೂ ಖಾಯಿಲೆ ಬರುವಂತಾಗಿ ಎಲ್ಲರಿಗೂ ಪರಹಾರ ದೊರಕುವಂತಾಗಲಿ ಎಂದು ಹೇಳಿ ಹೆದರಿಸಿ ಬೆಳ್ತಂಗಡಿಗೆ ಬೇಕಾದ ಪರಿಹಾರವನ್ನು ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಯಾರೇ ಇರಲಿ ತನಗೆ ಬೇಕಾದ ಕೆಲಸವನ್ನು ಅವರ ಮೇಜಿಗೆ ಗುದ್ದಿಯಾದರೂ ಪಡೆಯುತ್ತಾರೆ ಎಂಬ ಅಭಿಪ್ರಾಯ ಚಾಲ್ತಿಯಲ್ಲಿತ್ತು. ಅವರ ಆ ಗುಣವೇ ಅವರಿಗೆ ಸರಕಾರಗಳಲ್ಲಿ ಉತ್ತಮ ಸ್ಥಾನ ಸಿಗದಿರಲು ಕಾರಣ ಎಂದು ಹೇಳಲಾಗುತ್ತಿತ್ತು. ಅದರೊಂದಿಗೆ ಮುಂಗೋಪ ಇಲ್ಲದಿರುತ್ತಿದ್ದರೆ ಅವರನ್ನು ಸೋಲಿಸಲು ಯಾರಿಗೂ ಸಾಧ್ಯವಿರುತ್ತಿರಲಿಲ್ಲ ಎಂಬ ಮಾತನ್ನು ಅವರ ವಿರೋಧಿಗಳು ಹೇಳುತ್ತಿದ್ದಾರೆ ಎಂಬುವುದು ಅವರ ಗುಣಕ್ಕೆ ಹಿಡಿದ ಕನ್ನಡಿಯಾಗಿದೆ. ಇಂದು ಚುನಾವಣೆಯಲ್ಲಿ ಹಣದ ಹೊಳೆ ಹರಿಸದಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಲೇ ಸಾಧ್ಯವಿಲ್ಲ ಎಂಬ ಮಾತು ಸಾರ್ವತ್ರಿಕವಾಗಿದೆ. ಆದರೆ ಬಂಗೇರರು ಒಂದು ಚುನಾವಣೆಯಲ್ಲಿ ತನಗೆ ಓಟು ಕೊಡಿ- ಖರ್ಚಿಗೆ ನೋಟೂ ಕೊಡಿ ಎಂದು ಹೇಳುತ್ತಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅದು ಈಗಿನ ಕಾಲದಲ್ಲಿ ಊಹಿಸಲಾರದ ಸಂಗತಿಯಾಗಿದ್ದರೂ ಅಂದು ಅದು ಸತ್ಯವೇ ಆಗಿತ್ತು ಎಂದು ಹೇಳಿದರೆ ಆಶ್ಚರ್ಯವಾಗುವುದಿಲ್ಲವೇ?.


ಹರೀಶ್ ಪೂಂಜರ ವಿರುದ್ಧ ಚುನಾವಣೆಯಲ್ಲಿ ಸೋತ ಮೇಲೂ ಬಂಗೇರರು ಎಂದೂ ಸುಮ್ಮನೆ ಕುಳಿತುಕೊಂಡಿರಲಿಲ್ಲ. 5 ವರ್ಷ ನಿರಂತರವಾಗಿ ಪೂಂಜರನ್ನು ಕಾಡಿದ್ದರು. ಸರಕಾರವನ್ನು ಟೀಕಿಸಿದ್ದರು. ಕಳೆದ ಸಲದ ಚುನಾವಣೆಯಲ್ಲಿ ಸ್ಪರ್ಧಿಯಾಗಿರದಿದ್ದರೂ ಸ್ಪರ್ಧಿಯಾಗಿದ್ದ ರಕ್ಷಿತ್ ಶಿವರಾಮರಿಗಿಂತ ಹೆಚ್ಚು ಪ್ರಭಾವಿಯಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ನಂತರವೂ ಅದನ್ನು ಮುಂದುವರಿಸಿದ್ದರು. ಈ ಸಲದ ಪಾರ್ಲಿಮೆಂಟ್ ಚುನಾವಣೆಯ ಕೆಲಸಕ್ಕೆ ಬೆಳ್ತಂಗಡಿಗೆ ಅವರು ಬಾರದೇ ಇರುವಾಗಲೇ ಅವರ ಅನಾರೋಗ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇತ್ತು. ಬಂಗೇರರು ಏಳಲು, ಓಡಾಡಲು ಸಾಧ್ಯವಿದ್ದರೆ ಖಂಡಿತವಾಗಿಯೂ ಬೆಳ್ತಂಗಡಿಗೆ ಬಂದೇ ಬರುತ್ತಿದ್ದರು ಎಂದು ನಾವೂ ಕಛೇರಿಯಲ್ಲಿ ಮಾತನಾಡುತ್ತಿದ್ದೆವು.


ಬಂಗೇರರು ಬೆಳ್ತಂಗಡಿಯ ಚರಿತ್ರೆಯ ಭಾಗವಾಗಿ ಖಂಡಿತವಾಗಿ ಉಳಿಯುವವರಾಗಿದ್ದರೂ ಅವರ ನಿಧನ ತುಂಬಲಾರದ ನಷ್ಟ ಎಂದು ಹೇಳುತ್ತಾ ವಸಂತ ಬಂಗೇರರು ಸುದ್ದಿ ಬಿಡುಗಡೆಯ ಬೆಳವಣಿಗೆಗೆ ಪ್ರಾರಂಭದಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದರು ಎಂದು ತಿಳಿಸಲು ಇಚ್ಚಿಸುತ್ತೇವೆ. ಬಂಗೇರರು ಅವರ ಸ್ವಂತ ಕಟ್ಟಡದಲ್ಲಿ ಸುದ್ದಿಬಿಡುಗಡೆಗೆ ಕಛೇರಿ ಒದಗಿಸಿದ್ದರು. ಈಗಿನ ಗುರುನಾರಾಯಣ ಸಂಘದ ಕಟ್ಟಡದಲ್ಲಿ ಸುದ್ದಿಗೆ ಕಛೇರಿ ದೊರಕಲು ಅವರು ಮುಖ್ಯ ಕಾರಣರಾಗಿದ್ದರು. ಅಷ್ಟೆಲ್ಲಾ ಮಾಡಿದ್ದರೂ ಅವರೆಂದೂ ಪತ್ರಿಕೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿರುವುದಿಲ್ಲ. ಪತ್ರಿಕೆಯನ್ನು ಪತ್ರಿಕೆಯಾಗಿಯೇ ಕಂಡವರು ಎಂದು ಹೇಳುತ್ತಾ ಸುದ್ದಿ ಬಿಡುಗಡೆ ಬಳಗದ ವತಿಯಿಂದ ಅವರಿಗೆ ಹೃದಯ ತುಂಬಿದ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ.

LEAVE A REPLY

Please enter your comment!
Please enter your name here