ಪುತ್ತೂರು: ಯೋಗವು ಮನುಷ್ಯ ಹಾಗೂ ಪ್ರಕೃತಿಯನ್ನು ಸೇರಿಸುವ, ಒಂದಾಗಿಸುವ ಒಂದು ಸಾಧನ. ಭೌತಿಕದಿಂದ ಅಭೌತಿಕದೆಡೆಗೆ ನಡೆಸುವ ಪಯಣಕ್ಕೆ ಈ ಯೋಗವೇ ಮಾರ್ಗದರ್ಶಕ. ಯೋಗವನ್ನು ಅಭ್ಯಾಸ ಮಾಡಿದರೆ ದೇಹದ ಜಡತ್ವವು ನಿವಾರಣೆಯಾಗಿ ಸೂಕ್ಷ್ಮ ಹಾಗೂ ಕ್ರಿಯಾಶೀಲವಾದ ಮನಸ್ಸಿನೊಡನೆ ಸ್ಪಂದಿಸಲು ಸಿದ್ಧಗೊಳ್ಳುತ್ತದೆ. ಆನಂತರ ಈ ದೇಹ ಮನಸ್ಸುಗಳೆರಡೂ ಸ್ವಯಂಪ್ರಕಾಶನಾದ ಆತ್ಮನೊಡನೆ ವಿಹರಿಸಲು ಅನುವಾಗುತ್ತವೆ.ಧ್ಯಾನದ ಮೂಲಕ ಮನಸ್ಸನ್ನು ಸಕಾರಾತ್ಮಕವಾಗಿ ಅಣಿಗೊಳಿಸುತ್ತಾ ಗಟ್ಟಿಯಾದರೆ ಈ ರೋಗದ ವೈರಾಣು ದೇಹ ಸೇರಿದರೂ ಸೋತು ಹೋಗುವುದು ಖಂಡಿತ. ಸಕಾರಾತ್ಮಕ ಚಿಂತನೆಗಳಿಗೆ ಯೋಗ ಅನಿವಾರ್ಯ. ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸಂಚಾಲಕ ವಸಂತ ಸುವರ್ಣ ರವರು ಹೇಳಿದರು.
ನರೇಂದ್ರ ಪ.ಪೂ. ಕಾಲೇಜಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಡೆಯಲಿರುವ ಮೂರು ದಿನಗಳ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನರೇಂದ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ರವರು ಮಾತನಾಡಿ ಸಾಮಾನ್ಯವಾಗಿ ರೋಗರುಜಿನಗಳಿಂದ ಮುಕ್ತವಾಗಿರುವುದನ್ನು ಆರೋಗ್ಯವೆಂದು ಭಾವಿಸುತ್ತೇವೆ. ಆದರೆ, ಮಾನಸಿಕ ಆರೋಗ್ಯವೂ ಅಷ್ಟು ಪ್ರಮುಖವಾದುದು. ಯೋಗವು ದೇಹದೊಡನೆ ಕಾರ್ಯ ನಿರ್ವಹಿಸುವುದಲ್ಲದೆ, ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ಬೌದ್ಧಿಕತೆಯನ್ನು ಅಭಿವೃದ್ಧಿಗೊಳಿಸುತ್ತದೆ. ಈ ದೇಹವನ್ನು ಮನಸ್ಸು ಮತ್ತು ಆತ್ಮಗಳೊಡನೆ ಬೆಸೆಯುತ್ತದೆ. ಜೀವನದ ಅಂತಿಮ ಗುರಿಯಾದ ಆತ್ಮ ಸಾಕ್ಷಾತ್ಕಾರವನ್ನು ಸಿದ್ಧಿಸಿಕೊಳ್ಳಲು ನೆರವಾಗುತ್ತದೆ. ಎಂದು ಹೇಳಿದರು.
ಆಟಗಳ ಮೂಲಕ ಕಲಿಕೆ,ಚಟುವಟಿಕೆಗಳು,ಯೋಗಾಸನ,ಉಸಿರಾಟದ ಅಭ್ಯಾಸಗಳು,ಕಥೆಗಳು,ಮೌಲ್ಯಗಳ ಕಲಿಕೆ ಇನ್ನಿತರ ವಿಚಾರದ ತಿಳುವಳಿಕೆಯನ್ನು ನೀಡುವುದರ ಜೊತೆಗೆ ದೈಹಿಕ ಸದೃಢತೆ,ಏಕಾಗ್ರತೆ,ಸ್ಮರಣ ಶಕ್ತಿ,ಉತ್ತಮ ನಡೆನುಡಿ,ಸೌಹಾರ್ದತೆ ಮುಂತಾದ ಪ್ರಯೋಜನಗಳನ್ನು ಈ ಶಿಬಿರದಿಂದ ಪಡೆಯಬಹುದು. ವೇದಿಕೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ಶರಾವತಿ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಮಮತಾ ಸ್ವಾಗತಿಸಿ ,ವಂದಿಸಿದರು.