ಪುತ್ತೂರು: ನಗರದ ಮುಖ್ಯ ರಸ್ತೆಯ ಕಲ್ಲಾರೆಯಲ್ಲಿ ರಸ್ತೆ ಬದಿಯಲ್ಲಿರುವ ಚರಂಡಿಯಲ್ಲಿ ಕೊಳಚೆ ನೀರು, ತ್ಯಾಜ್ಯಗಳು ತುಂಬಿಕೊಂಡಿದ್ದು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನಿಸುವಂತಿದೆ.
ಕಲ್ಲಾರೆಯಲ್ಲಿರುವ ಬಾಳಿಯೂರು ದರ್ಬಾರ್ ಹಾಗೂ ಶ್ರೀನಿವಾಸ ಪ್ಲಾಜ್ಹಾದ ಮಧ್ಯೆ ಹಾದು ಹೋಗುವ ಚರಂಡಿಯಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್ ತಾಜ್ಯ, ಪ್ಲಾಸ್ಟಿಕ್ ಬಾಟಲಿ, ತ್ಯಾಜ್ಯ, ಪ್ಲಾಸ್ಟಿಕ್ ಚೀಲಗಳು ತುಂಬಿಕೊಂಡಿದ್ದು ನೀರು ಹರಿದು ಹೋಗದೆ ಶೇಖರಣೆಯಾಗಿದೆ.ದರ್ಬೆ ಕಡೆಯಿಂದ ಚರಂಡಿಯ ಮೂಲಕ ಹರಿಯುವ ತ್ಯಾಜ್ಯ ಮಿಶ್ರಿತ ಕೊಳಚೆ ನೀರು ಬಂದು ಇಲ್ಲಿ ಶೇಖರಣೆಯಾಗುತ್ತಿದೆ.ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಕಸದ ರಾಶಿಗಳು, ಪೊದೆಗಳು ತುಂಬಿಕೊಂಡಿದ್ದು ನೀರು ಸರಾಗವಾಗಿ ಹರಿಯುತ್ತಿಲ್ಲ.ನೀರು ಅಲ್ಲಿಯೇ ನಿಂತು ದುರ್ನಾತ ಬೀರುತ್ತಿದೆ. ಅಲ್ಲದೆ ಇದು ಸೊಳ್ಳಗಳ ಉತ್ಪತ್ತಿಯ ತಾಣವಾಗುತ್ತಿದೆ.ಸುಡು ಬಿಸಿಲಿಗೆ ಎಲ್ಲೆಡೆ ಚರಂಡಿ, ತೋಡುಗಳು ಬತ್ತಿ ಒಣಗಿ ಹೋಗಿದ್ದರೆ ಈ ಚರಂಡಿಯಲ್ಲಿ ಮಾತ್ರ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುವಂತಿದೆ.
ಈ ಚರಂಡಿಯ ಸುತ್ತ ಮುತ್ತ ವಾಣಿಜ್ಯ ಕಟ್ಟಡಗಳು, ಅಪಾರ್ಟ್ಮೆಂಟ್ಗಳು ಹಾಗೂ ಮನೆಗಳಿರುವುದರಿಂದ ಇಲ್ಲಿನ ನಿವಾಸಿಗಳ ಮೇಲೆ ಇದು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಮಾತ್ರವಲ್ಲದೆ ಇನ್ನು ಮಳೆಗಾಲ ಪ್ರಾರಂಭಗೊಳ್ಳಲಿದ್ದು ಕೊಳಚೆ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬ ಆತಂಕದಲ್ಲಿದ್ದಾರೆ ಅಲ್ಲಿನ ನಿವಾಸಿಗಳು.ನಿತ್ಯ ಜನ ನಿಭಿಡ ಪ್ರದೇಶವಾಗಿರುವ ಇಲ್ಲಿ ತಕ್ಷಣ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಗಂಭೀರ ಸಮಸ್ಯೆಯ ಬಗ್ಗೆ ಈಗಾಗಲೇ ನಗರ ಸಭಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ.ಸ್ವಚ್ಛತೆಯ ಪಾಠ ಹೇಳಬೇಕಾದ ನಗರ ಸಭೆಯೇ ಈ ರೀತಿಯ ನಿರ್ಲಕ್ಷ್ಯ ವಹಿಸುವುದು ಸರಿಯೇ ಎಂಬುದು ಸ್ಥಳೀಯ ಆಸುಪಾಸಿನ ನಿವಾಸಿಗಳ ಪ್ರಶ್ನೆಯಾಗಿದೆ.