ಪುತ್ತೂರು:ದಶಕಗಳಿಂದಲೂ ಹೆಲಿಪ್ಯಾಡ್ ಆಗಿಯೇ ಬಳಕೆಯಾಗುತ್ತಿದ್ದ ಪುತ್ತೂರಿನ ಮೊಟ್ಟೆತ್ತಡ್ಕದ ವಿಶಾಲ ಮೈದಾನದಲ್ಲಿ 2023ರ ಫೆಬ್ರವರಿ ಮೊದಲ ವಾರದಲ್ಲಿ ತುರ್ತಾಗಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.ಇದಕ್ಕಾಗಿ ಸರಕಾರದ ಬೊಕ್ಕಸದಿಂದ ಅಪಾರ ಹಣ ವ್ಯಯಿಸಲಾಗಿತ್ತು.ಆದರೆ ಒಂದೇ ವರ್ಷದಲ್ಲಿ ಹೆಲಿಪ್ಯಾಡ್ ಪೂರ್ಣ ಹಾನಿಗೊಂಡಿದೆ.
ತುರ್ತು ಕಾಮಗಾರಿ ಮೂಲಕ ಹೆಲಿಪ್ಯಾಡ್ ಪುನರುತ್ಥಾನವಾಗದಿದ್ದಲ್ಲಿ ಮಳೆಗಾಲದಲ್ಲಿ ಹೆಲಿಪ್ಯಾಡ್ ಮುಚ್ಚಿ ಹೋಗುವ ಪರಿಸ್ಥಿತಿ ಬರಬಹುದು.ಪುತ್ತೂರು ನಗರ ಮಧ್ಯದಿಂದ 3 ಕಿ.ಮೀ. ದೂರದಲ್ಲಿರುವ ಮೊಟ್ಟೆತ್ತಡ್ಕದಲ್ಲಿ ಈ ಹೆಲಿಪ್ಯಾಡ್ ಇದೆ.ಪಕ್ಕದಲ್ಲೇ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯವಿದ್ದು ಗೇರು ನೆಡುತೋಪುಗಳು,ಕೇಂದ್ರ ಕಚೇರಿ, ಸಂಶೋಧನಾ ಕೇಂದ್ರಗಳು, ಅಧಿಕಾರಿಗಳ ವಸತಿ ಸಮುಚ್ಛಯ ಸೇರಿದಂತೆ ಸುಂದರ ಪರಿಸರ ಹೊಂದಿದೆ.ಇದರ ಮಧ್ಯದಲ್ಲೇ ರಸ್ತೆಯ ಒಂದು ಪಾರ್ಶ್ವದಲ್ಲಿ ವಿಶಾಲ ಪ್ರದೇಶದಲ್ಲಿ ಹೆಲಿಪ್ಯಾಡ್ ಇದೆ.ಈ ಜಾಗವನ್ನು ಆರಂಭದಲ್ಲಿ ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ ನಿಗದಿಪಡಿಸಲಾಗಿದ್ದರೂ, ಬಳಿಕ ಹೆಲಿಪ್ಯಾಡ್ನ ಅವಶ್ಯಕತೆ ಮನಗಂಡು ಪರ್ಯಾಯ ಜಾಗ ಕೊಡುವ ಒಪ್ಪಂದದ ಅಡಿಯಲ್ಲಿ ನಿರ್ದೇಶನಾಲಯದ ಸುಪರ್ದಿಯಿಂದ ಜಾಗವನ್ನು ಹೆಲಿಪ್ಯಾಡ್ಗೆಂದು ಮರಳಿ ಪಡೆದುಕೊಳ್ಳಲಾಗಿತ್ತು.
ತುರ್ತು ನಿರ್ಮಾಣ..
ಕೇವಲ ಮೈದಾನವಾಗಿ ಮಣ್ಣಿನ ನೆಲವಾಗಿದ್ದ ಈ ಸ್ಥಳದಲ್ಲಿ 2023ರಲ್ಲಿ ತುರ್ತು ಕಾಮಗಾರಿ ನಡೆಸಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಲಾಯಿತು.ಕೇಂದ್ರ ಗೃಹ ಸಚಿವ ಅಮಿತ್ ಶಾ 2023ರ ಫೆ.11ರಂದು ಪುತ್ತೂರಿನಲ್ಲಿ 2 ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರಲಿದ್ದ ಕಾರಣ ಭದ್ರತಾ ಕಾರಣದಿಂದಾಗಿ ತಾಲೂಕಿನಲ್ಲಿ 3 ಹೆಲಿಪ್ಯಾಡ್ ಸಿದ್ಧಪಡಿಸಲಾಗಿತ್ತು.ಈ ಪೈಕಿ ಮೊಟ್ಟೆತ್ತಡ್ಕದ ಹೆಲಿಪ್ಯಾಡ್ ಜಾಗದಲ್ಲಿ ವೃತ್ತಾಕಾರದ ಡಾಮರೀಕರಣ ಮಾಡಿ ಹೆಲಿಕಾಪ್ಟರ್ಗಳು ಬಂದಿಳಿಯಲು ಶಾಶ್ವತ ವ್ಯವಸ್ಥೆ ಮಾಡಲಾಗಿತ್ತು.ಅಮಿತ್ ಶಾ ಬಂದು ಹೋದ ಬಳಿಕ ಅದೇ ಏಪ್ರಿಲ್ನಲ್ಲಿ ಹೆಲಿಪ್ಯಾಡ್ನ ಸುತ್ತಲ ಮೈದಾನದ ಅಂಚಿನಲ್ಲಿ ಲೋಡುಗಟ್ಟಲೆ ಮಣ್ಣು ಸುರಿದು ಸಮತಟ್ಟು ಮಾಡಲಾಗಿತ್ತು.
ಮತ್ತೆ ಹಿಂದಿನ ಸ್ಥಿತಿಯತ್ತ…!?
ವರ್ಷದ ಹಿಂದೆ ಡಾಮರ್ ಹಾಕಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ನಲ್ಲಿ ಅಲ್ಲಲ್ಲಿ ಡಾಮರು ಕಿತ್ತು ಹೋಗಿ ಗುಳಿಗಳು ಬೀಳಲಾರಂಭಿಸಿವೆ.ಹೊಸದಾಗಿ ಸಮತಟ್ಟುಗೊಳಿಸಲಾದ ಮಣ್ಣು ಗಟ್ಟಿಯಾಗದೆ ಧೂಳೆಬ್ಬಿಸುತ್ತಿರುವ ಕಾರಣ ಮಧ್ಯದ ಹೆಲಿಕಾಪ್ಟರ್ ಟ್ರ್ಯಾಕ್ ಹಾನಿಗೊಳಗಾಗುತ್ತಿದೆ.ಕಾರು, ಬೈಕ್, ಸ್ಕೂಟಿ ಕಲಿಯುವ ಹೆಚ್ಚಿನವರು ಹಿಂದಿನಿಂದಲೂ ಈ ಮೈದಾನವನ್ನು ಡ್ರೈವಿಂಗ್ ಕಲಿಕೆಗೆ ಬಳಸುತ್ತಿದ್ದು,ಈಗಲೂ ಅದು ಮುಂದುವರಿದಿರುವುದೂ ಹೆಲಿಪ್ಯಾಡ್ ಪ್ರದೇಶ ಹಾನಿಗೊಳಗಾಗಲು ಕಾರಣ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ.
ಅನುದಾನಕ್ಕೆ ಪ್ರಸ್ತಾವನೆ..
ಎಲ್ಲಾ ತಾಲೂಕುಗಳಲ್ಲಿ ಹೆಲಿಪ್ಯಾಡ್ಗಾಗಿ ಜಾಗ ಮಂಜೂರು ಮಾಡಿ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ.ಅದೇ ರೀತಿ ಈ ಹಿಂದೆ ಸರಕಾರ ಕೇಳಿದಂತೆ ಪುತ್ತೂರು ತಾಲೂಕಿನಲ್ಲಿ ಜಾಗ ಮಂಜೂರಾಗಿದ್ದರಿಂದ ಅದಕ್ಕೆ ರೂ.50 ಲಕ್ಷಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.ಅದೇ ರೀತಿ ಕಡಬಕ್ಕೂ ಹೆಲಿಪ್ಯಾಡ್ಗೆ ಅವಕಾಶವಿದೆ.ಆದರೆ ಅಲ್ಲಿ ಜಾಗ ಮಂಜೂರಾಗಿಲ್ಲ ಹಾಗಾಗಿ ಬಾಕಿ ಆಗಿದೆ. ಹೆಲಿಪ್ಯಾಡ್ನ ನಿರ್ವಹಣೆಯ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.