ಪುತ್ತೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ದ.ಕ ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಖಾಸಗಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಶೇ.97.47 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಖಾಸಗಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಂತೆ ತಾಲೂಕಿಗೆ ಶೇ.94.47 ಫಲಿತಾಂಶ ಪಡೆದುಕೊಂಡಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಪುತ್ತೂರು ತಾಲೂಕು ಶೇ.91.47 ಅಂಕಗಳಿಸಿದ್ದು ಈ ಬಾರಿಯ ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಪುತ್ತೂರು ಹಾಗೂ ಕಡಬ ತಾಲೂಕು ಸೇರಿದಂತೆ ಪುತ್ತೂರಿನಿಂದ ಒಟ್ಟು 4843 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 2369 ಬಾಲಕರು ಹಾಗೂ 2206 ಬಾಲಕಿಯರು ಸೇರಿದಂತೆ ಒಟ್ಟು 4575 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.97.47 ಫಲಿತಾಂಶ ಪಡೆದುಕೊಂಡಿದೆ.
55 ಶಾಲೆಗಳಿಗೆ ಶೇ.100 ಫಲಿತಾಂಶ:
ಪುತ್ತೂರಿನಲ್ಲಿ 14 ಸರಕಾರಿ ಶಾಲೆಗಳು, 14 ಅನುದಾನಿತ ಶಾಲೆಗಳು ಹಾಗೂ 27 ಅನುದಾನ ರಹಿತ ಶಾಲೆಗಳಲ್ಲಿ ಶೇ. 100 ಫಲಿತಾಂಶ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಪುತ್ತೂರು ಶೇ.97.47, ಮೂಡಬಿದರೆ ಶೇ.94.27, ಬೆಳ್ತಂಗಡಿ ಶೇ.94.18, ಸುಳ್ಯ ಶೇ.92.43, ಮಂಗಳೂರು ದಕ್ಷಿಣ ಶೇ.91.59, ಮಂಗಳೂರು ಉತ್ತರ ಶೇ.90.81, ಬಂಟ್ವಾಳ ಶೇ.89.79 ಫಲಿತಾಂಶ ಪಡೆದುಕೊಂಡಿದೆ.
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಶ್ರೀಯಾ 621 ಹಾಗೂ ಬಾಲಾಜಿ 620 ಮತ್ತು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಕ್ಷತ ಗಂಗಾ ಯು 619 ಅಂಕಗಳನ್ನು ಪಡೆದುಕೊಂಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.