ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸುವುದೇ ಪ್ರಜಾಸತ್ತಾತ್ಮಕ ಆಡಳಿತ: ಲಕ್ಷ್ಮೀಕಾಂತ ರೈ ಅನಿಕೂಟೇಲ್
ಬೆಟ್ಟಂಪಾಡಿ: ವಿಶ್ವದಲ್ಲಿಯೇ ಭಾರತ ದೇಶ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಡೆದು ಬಂದಿದೆ. ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶವು ತನ್ನ 70ಕ್ಕಿಂತ ಹೆಚ್ಚು ವರ್ಷದ ಪಯಣದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಧನೆಯ ಮೈಲಿಗಲ್ಲುಗಳನ್ನು ತಲುಪುತ್ತಿದೆ. ಭಾರತದ ಪ್ರಜಾಪ್ರಭುತ್ವವು ಮೊದಲ 30 ವರ್ಷಗಳು ದೇಶದ ಜನರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡುವ ಸರಕಾರವಾಗಿ, ನಂತರ ಕಲ್ಯಾಣ ರಾಜ್ಯದ ಅನುಷ್ಠಾನಕ್ಕಾಗಿ ಇಂದು ಪ್ರಜಾಸತ್ತಾತ್ಮಕ ಆಡಳಿತವನ್ನು ಭಾರತದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿರುವುದನ್ನು ನಾವು ಗಮನಿಸಬಹುದು. ಪ್ರಜಾಪ್ರಭುತ್ವದಲ್ಲಿ ಜನರ ಭಾಗವಹಿಸುವಿಕೆ ಸರಿಯಾಗಿ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದ ನಿಜವಾದ ಉಳಿವು ಹಾಗೂ ಅಸ್ತಿತ್ವಕ್ಕಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸುವುದೇ ಪ್ರಜಾಸತ್ತಾತ್ಮಕ ಆಡಳಿತದ ಗುರಿಯಾಗಿದೆ. ಭಾರತದಲ್ಲಿ ಅಂತಹ ವ್ಯವಸ್ಥೆಯನ್ನು ತರಲು ಕೇಂದ್ರ ಸರಕಾರ ನಿರಂತರವಾಗಿ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದೆ ಎಂದು ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಹೇಳಿದರು.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ. ಕ್ಯೂ.ಎ.ಸಿ. ನೇತೃತ್ವದಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಪ್ರಜಾಸತ್ತಾತ್ಮಕ ಆಡಳಿತ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ ಉತೃಷ್ಟವಾದ ಹಕ್ಕುಗಳು ಭಾರತದಲ್ಲಿದೆ. ಅವುಗಳನ್ನು ಸಮಂಜಸವಾದ ಸ್ಥಳಗಳಲ್ಲಿ ಬಳಸುವ ಅಧಿಕಾರವೂ ನಮಗಿದೆ. ಭಾರತದಲ್ಲಿ ಅತ್ಯುತ್ತಮವಾದ ಕಾನೂನುಗಳಿದ್ದು, ಆದರೆ ಅವುಗಳ ಅನುಷ್ಠಾನ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಬಹುದೊಡ್ಡ ಜನಸಂಖ್ಯೆ, ಭ್ರಷ್ಟ ಅಧಿಕಾರಿಶಾಯಿ ವರ್ಗ ಮತ್ತು ಸರಕಾರದ ಜೊತೆಗೆ ಜನರ ನಿರಂತರ ಭಾಗವಹಿಸುವಿಕೆ ಇಲ್ಲದೇ ಇರುವುದರಿಂದ ಭಾರತದಲ್ಲಿ ಇನ್ನೂ ಸಹಾ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವಲ್ಲಿ ಸ್ವಲ್ಪ ಹಿನ್ನಡೆಯಾಗಿದೆ ಎಂದರು. ಪ್ರಮುಖವಾಗಿ ಅಧಿಕಾರಿ ವರ್ಗದವರು ನಿಷ್ಠೆಯಿಂದ ಕಾರ್ಯ ನಿರ್ವಹಿಸುವುದರಿಂದ ಹಾಗೂ ಪ್ರಜ್ಞಾವಂತ ನಾಗರಿಕರು ಸಹಾ ಇದರಲ್ಲಿ ನಿರಂತರವಾಗಿ ಭಾಗವಹಿಸಿದಾಗ ದೇಶವು ಅಭಿವೃದ್ಧಿಯನ್ನು ಸಾಧಿಸಿ, ಭಾರತವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಸಂದೇಹವೇ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಸಿ. ಎಚ್. ಮಾತನಾಡಿ, ಭಾರತದ ಪ್ರಜಾಪ್ರಭುತ್ವದ ಮೌಲ್ಯ ಜಗತ್ತಿಗೆ ಮಾದರಿಯಾಗಿದೆ. ಬರೇ ಚುನಾವಣೆಯಲ್ಲಿ ಮತದಾನ ಮಾಡುವುದು ಮಾತ್ರವಲ್ಲದೇ ಪ್ರತಿ ಹಂತದಲ್ಲಿ ಸರಕಾರದ ಕಾರ್ಯಗಳಲ್ಲಿ ನಾಗರಿಕರ ನಿರಂತರ ಸಂಪರ್ಕ ಇದ್ದಾಗ ಪ್ರಜಾಸತ್ತಾತ್ಮಕ ಆಡಳಿತ ಸಾಧ್ಯವಾಗುತ್ತದೆ. ಆದ್ದರಿಂದ ಭಾರತದ ರಾಜಕೀಯ ವ್ಯವಸ್ಥೆಗಳ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಅರಿವಿರಬೇಕು. ಈ ಹಿನ್ನಲೆಯಲ್ಲಿ ಇಂತಹ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಮಾರಣ್ಣ ರವರು ಪ್ರಾಸ್ತವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಕಾಂತೇಶ್ ಎಸ್., ರಾಜ್ಯಶಾಸ್ತ್ರ ಅತಿಥಿ ಉಪನ್ಯಾಸಕ ಕಿರಣ್ಚಂದ್ರ ರೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ಮಂಜುಷಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಕು. ಪ್ರಜ್ಞಾ ವಂದಿಸಿದರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.