ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮ

0

ಶಂಕರ ಭಗವತ್ಪಾದರ ವಿಚಾರಗಳಿಂದ ನಮ್ಮ ಬದುಕು ಔನ್ನತ್ಯಕ್ಕೆ : ವಿದ್ವಾನ್ ಕೃಷ್ಣರಾಜ ಭಟ್


ಪುತ್ತೂರು: ಜಗದ್ಗುರು ಶಂಕರಾಚಾರ್ಯರ ವ್ಯಕ್ತಿತ್ವನ್ನು ಮಾತಿನಲ್ಲಿ ಕಟ್ಟಿಕೊಡುವ ಶಕ್ತಿ ಸಾಮಾನ್ಯ ಮನುಷ್ಯರಲ್ಲಿಲ್ಲ. ಆದರೆ ಅವರ ಬಗೆಗೆ ತಿಳಿದುಕೊಂಡ ಅಲ್ಪಾತಿಅಲ್ಪ ವಿಚಾರಗಳನ್ನಾದರೂ ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ನಮ್ಮ ವ್ಯಕ್ತಿತ್ವದಲ್ಲಿನ ದೋಷಗಳು ನಿವಾರಣೆಯಾಗುವಲ್ಲಿ ಸಹಕಾರಿಯಾಗುತ್ತದೆ. ಒಳ್ಳೆಯ ವಿಚಾರಗಳ ಅಧ್ಯಯನ, ಪ್ರಸರಣ ನಮ್ಮ ಮನಸ್ಸನ್ನು ಶುದ್ಧಗೊಳಿಸುತ್ತದೆ ಎಂದು ಶೃಂಗೇರಿಯ ಶ್ರೀ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಪಾಠಶಾಲೆಯ ವ್ಯಾಕರಣ ಶಾಸ್ತ್ರ ವಿದ್ವಾಂಸ ವಿದ್ವಾನ್ ಕೃಷ್ಣರಾಜ ಭಟ್ಟ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಕ್ಯಾಂಪಸ್‌ನ ಶ್ರೀ ಶಂಕರ ಸಭಾಭವನದಲ್ಲಿ ಭಾನುವಾರ ಶ್ರೀ ಗುರುವಂದನಾ ಸಮಿತಿ, ಮಿತ್ರ ಸಮಾಜ, ಶಂಕರ ಪ್ರತಿಷ್ಠಾನ, ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಶ್ರೀ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಶಂಕರ ಭಗವತ್ಪಾದರ ಜೀವನದ ಹಾದಿ ನಮ್ಮೆಲ್ಲರಿಗೂ ಒಂದು ಆದರ್ಶ. ತನ್ಮೂಲಕ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಬಹುದು. ಅಹಂಕಾರರಹಿತ ಜೀವನವನ್ನು ನಮ್ಮದಾಗಿಸುವುದಕ್ಕೆ ಶಂಕರರ ಸ್ಮರಣೆ ಅಗತ್ಯ. ಇಂದಿಗೆ ಸಾವಿರಾರು ವರ್ಷಗಳ ಮೊದಲೇ ಸಾರ್ವಕಾಲಿಕ ಸತ್ಯದ ಬೋಧನೆ ಮಾಡಿರುವ ಮಹಾಮಹಿಮ ಶಂಕರಾಚಾರ್ಯರು. ಅವರು ನಮ್ಮೆಲ್ಲರ ಕಲ್ಪನೆಗೂ ಮೀರಿದ ಶಕ್ತಿ ಎಂದರಲ್ಲದೆ ನಮ್ಮ ದೇಸೀಯ ವಿಚಾರಧಾರೆಗಳನ್ನು ವಿದೇಶೀಯರು ಕದ್ದೊಯ್ದು ಪುನಃ ನಮಗೇ ಅದನ್ನು ಬೋಧಿಸುತ್ತಿದ್ದಾರೆ. ನಮ್ಮ ಹಿರಿಮೆ ಗರಿಮೆಗಳನ್ನು ನಾವು ಅರಿತುಕೊಳ್ಳಬೇಕು ಎಂದು ಹೇಳಿದರು.


ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಮಿತ್ರ ಸಮಾಜ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಗುರುವಂದನಾ ಸಮಿತಿಯ ಗೌರವ ಸಲಹೆಗಾರ ಎನ್.ಕೆ.ಜಗನ್ನಿವಾಸ ರಾವ್ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಬಿ.ಐತ್ತಪ್ಪ ನಾಯ್ಕ್ ವಂದಿಸಿದರು. ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ವತಿಯಿಂದ ಕೃಷ್ಣರಾಜ ಭಟ್ಟರನ್ನು ಹಾಗೂ ಸುಬ್ರಹ್ಮಣ್ಯ ನಟ್ಟೋಜ ಅವರನ್ನು ಅಭಿನಂದಿಸಲಾಯಿತು. ಪ್ರತಿಷ್ಠಾನದ ಸಂಚಾಲಕ ತಿರುಮಲೇಶ್ವರ ಭಟ್ ಮಹಾಮಂಗಳಾರತಿ ನೆರವೇರಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕೆ ಆಗಮಿಸಿದವರಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಯಿತು.

LEAVE A REPLY

Please enter your comment!
Please enter your name here