ಉಪ್ಪಿನಂಗಡಿ: ಪದ್ಮುಂಜದಿಂದ ಕುಪ್ಪೆಟ್ಟಿ ಕಡೆಗೆ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ಮೇ .11ರಂದು ಮಧ್ಯಾಹ್ನ ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಪದ್ಮುಂಜ ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಹೋಗುತ್ತಿದ್ದ ಪಿಕಪ್( ಕೆಎ 21, ಪಿ 8892) ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಮೂರು ಜಾನುವಾರುಗಳ ಕೈ ಕಾಲುಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪಿಕಪ್ ಚಾಲಕ ರಕ್ಷಿತ್(25ವ.)ನನ್ನು ವಿಚಾರಣೆ ನಡೆಸಿದ ವೇಳೆ ಜಾನುವಾರುಗಳನ್ನು ಪದ್ಮುಂಜ ದೊಂಬ ಗೌಡ ಎಂಬವರಿಂದ ಖರೀದಿ ಮಾಡಿ ಉರುವಾಲುಪದವಿನ ಶಾಕೀರ್ ಎಂಬವರಿಗೆ ಕಡಿದು ಮಾಂಸಮಾಡಲು ಸಾಗಾಟ ಮಾಡುವುದಾಗಿ ತಿಳಿಸಿರುವುದಾಗಿ ವರದಿಯಾಗಿದೆ.
ಪಿಕಪ್ ವಾಹನದಲ್ಲಿದ್ದ ದರ್ಸಿ ಮಾದರಿ ಹಸು-1, ಹೋರಿ-1, ಹೋರಿ ಕರು-1, ಕಟ್ಟಲು ಉಪಯೋಗಿಸಿದ ಹಗ್ಗ ಹಾಗೂ ಸಾಗಾಟ ಮಾಡುತ್ತಿದ್ದ ಮಹೇಂದ್ರ ಪಿಕಫ್ ವಾಹನವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 3.21 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ: 11(ಡಿ) ಪ್ರಾಣಿ ಹಿಂಸಾ ತಡೆ ಕಾಯ್ದೆ. ಮತ್ತು 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.