ಪುತ್ತೂರು: ನಿನ್ನೆ ಸುರಿದ ಮಳೆಗೆ ಸಾಲ್ಮರ ಕೊಟೇಚಾ ಹಾಲ್ ಸಮೀಪದ ಅಂಗಡಿಯೊಂದಕ್ಕೆ ಮಳೆ ನೀರು ನುಗ್ಗಿದೆ. ಕಳೆದ ಒಂದೆರಡು ವರ್ಷಗಳಿಂದ ಇಲ್ಲಿ ಮಳೆ ನೀರು ನಿಂತು ಅಂಗಡಿಗೆ ನೀರು ನುಗ್ಗಿದ ಘಟನೆ ನಡೆದಿದ್ದು, ಈ ವರ್ಷದ ಪ್ರಥಮ ಮಳೆಗೆ ಮತ್ತೆ ಇದೇ ಪರಿಸ್ಥಿತಿ ಮುಂದುವರಿದಿದೆ.
ಮೇ.12ರಂದು ಸಂಜೆ ಮತ್ತು ಮೇ.13ರಂದು ಬೆಳಿಗ್ಗೆ ಸುರಿದ ಭಾರಿ ಮಳೆಗೆ ಸಾಲ್ಮರ ಸೋಮನಾಥ ಎಂಬವರ ಅಂಗಡಿ ಮುಂದೆ ನೀರು ನಿಂತಿದ್ದು, ಅಂಗಡಿ ದ್ವೀಪದಂತಾಗಿದೆ. ಅಂಗಡಿಯ ಒಳಗೆ ನೀರು ನುಗ್ಗಿದ್ದರಿಂದ ಮಾರಾಟದ ವಸ್ತುಗಳು ಹಾನಿಗೊಳಗಾಗಿದ್ದು ನಷ್ಟ ಸಂಭವಿಸಿದೆ.
ವರ್ಷ ಕಳೆದರು ಎಚ್ಚೆತ್ತುಕೊಳ್ಳದ ನಗರಸಭೆ:
ಅಂಗಡಿಯ ಬಳಿ ಮೋರಿ ಬ್ಲಾಕ್ ಆಗಿರುವುದರಿಂದ ಅಂಗಡಿ ಸುತ್ತು ನೀರು ನಿಂತಿದೆ. ಗ್ರಾಹಕರು ಅಂಗಡಿಗೆ ಬರುವುದು ಬಿಡಿ ಸ್ವಂತ ಅಂಗಡಿಯ ಮಾಲಕರೇ ಅಂಗಡಿಗೆ ಹೊಗದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷವು ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮೋರಿ ಬ್ಲಾಕ್ ತೆರವುಗೊಳಿಸಿದ್ದರು. ಈಗ ಮತ್ತೆ ವರ್ಷದ ಮೊದಲ ಮಳೆಗೆ ಮತ್ತದೇ ಸ್ಥಿತಿ ನಿರ್ಮಾಣವಾಗಿದ್ದು ಮೋರಿ ಬ್ಲಾಕ್ ನ್ನು ತೆರವುಗೊಳಿಸುವ ಕೆಲಸ ನಗರ ಸಭೆ ಮಾಡಬೇಕಾಗಿದೆ. ಮಳೆಗಾಲಕ್ಕೆ ಮುನ್ನ ಮೋರಿ ಕ್ಲೀನ್ ಮಾಡುವ ಕುರಿತು ತಲೆಕೆಡೆಸಿಕೊಳ್ಳದ ನಗರಸಭೆಯ ದೋರಣೆಯಿಂದಾಗಿ ಇಂತಹ ಸಮಸ್ಯೆಗಳು ತಲೆದೋರಿ ಅಂಗಡಿಗೆ ನೀರು ನುಗ್ಗುವಂತಾಗಿದೆ ಎನ್ನುವ ಸ್ಥಳೀಯರು ಇನ್ನಾದರೂ ನಗರಸಭೆ ಎಚ್ಚೆತ್ತುಕೊಳ್ಳಬೇಕಾಗಿದೆ.ಮಳೆ ನೀರು ಹರಿದು ಹೋಗುವ ಮೋರಿಗೆ ಅಡ್ಡಲಾಗಿ ಜಲಸಿರಿಯ ನೀರು ಸರಬರಾಜು ಪೈಪ್ ಅಳವಡಿಸಲಾಗಿದ್ದು, ಮಳೆ ನೀರು ಸರಾಗವಾಗಿ ಹರಿಯಲು ಪೈಪ್ ಅಡಚಣೆಯಾಗಿದೆ. ಕಲ್ಲು ಮಣ್ಣು, ಕಸಗಳಿಂದ ಮೋರಿ ಬ್ಲಾಕ್ ಆಗಿದ್ದು, ಅದನ್ನು ತೆರವು ಮಾಡದೆ ಕೃತಕ ನೆರೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.