ದೀಪಕ್ ಉಬಾರ್, ಉಪ್ಪಿನಂಗಡಿ
ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಉಪ್ಪಿನಂಗಡಿಯಲ್ಲಿ ಹೆದ್ದಾರಿ ಬದಿಯಲ್ಲಿದ್ದ ದೊಡ್ಡ ತೋಡೊಂದು ಮುಚ್ಚಲ್ಪಟ್ಟಿದ್ದು, ನಿನ್ನೆ ಸುರಿದ ಮಳೆಗೆ ನಟ್ಟಿಬೈಲ್ನಲ್ಲಿ ಕೃಷಿ ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನು ಮುಂಬರಲಿರುವ ಮಹಾಮಳೆಗಳಿಗೆ ನಟ್ಟಿಬೈಲ್ ಪರಿಸರವೇ ಮುಳುಗುವ ಸಾಧ್ಯತೆ ನಿಚ್ಛಳವಾಗಿದೆ.
ಉಪ್ಪಿನಂಗಡಿ ಭಾಗದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈ ವರ್ಷ ಸ್ವಲ್ಪ ವೇಗ ಪಡೆದುಕೊಂಡಿದ್ದರು. ಮಳೆಗಾಲದಲ್ಲಿ ಮಳೆಯ ಸಮಸ್ಯೆಯಾದರೆ, ಬಿರು ಬೇಸಿಗೆಯಲ್ಲಿ ಬಿರು ಬಿಸಿಲಿನ ಸಮಸ್ಯೆಯಿಂದಾಗಿ ಕಾಮಗಾರಿಯ ವೇಗಕ್ಕೆ ತಡೆಯೊಡ್ಡಿತ್ತು. ಇದರಿಂದಾಗಿ ಕಾಮಗಾರಿ ಎಲ್ಲಿಯೂ ಪೂರ್ಣಗೊಳ್ಳದೆ ಅಪೂರ್ಣವಸ್ಥೆಯಲ್ಲಿಯೇ ಇದೆ. ಉಪ್ಪಿನಂಗಡಿಯಲ್ಲಿ ಮಳೆ ನೀರು ಹರಿದು ಹೋಗಲು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ಬೃಹತ್ ತೋಡೊಂದಿತ್ತು. ರಾಮನಗರ, ನಟ್ಟಿಬೈಲ್ ಪರಿಸರದ ನೀರೆಲ್ಲಾ ಇದೇ ತೋಡಿನ ಮೂಲಕ ಹರಿದು ಬಂದು ಕುಮಾರಧಾರ ನದಿಯನ್ನು ಸೇರುತ್ತಿತ್ತು. ಅಲ್ಲದೇ, ಗಾಂಧಿಪಾರ್ಕ್, ಉಪ್ಪಿನಂಗಡಿ ಬ್ಯಾಂಕ್ ರಸ್ತೆ ಬಳಿಯ ಪೇಟೆ, ಸೂರಪ್ಪ ಕಾಂಪೌಂಡ್ ಹೀಗೆ ಈ ಪರಿಸರದ ನೀರೆಲ್ಲಾ ಹೆದ್ದಾರಿಯ ಇನ್ನೊಂದು ಬದಿಯ ತೋಡಿನ ಮೂಲಕ ಹರಿದು ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯ ಅಡಿಯಲ್ಲಿ ಅಡ್ಡಲಾಗಿ ಹಾಕಲಾಗಿರುವ ಮೋರಿಗೆ ಕವಲೊಡೆದು ಕುಮಾರಧಾರ ನದಿಯನ್ನು ಸೇರುವ ತೋಡಿಗೆ ಸೇರುತ್ತಿತ್ತು. ನಟ್ಟಿಬೈಲ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ತೋಡಿನ ಇನ್ನೊಂದು ಮಗ್ಗುಲಲ್ಲಿ ಕೃಷಿ ಪ್ರದೇಶವಿದೆ.
ಕಾಮಗಾರಿಗೆ ಬಲಿಯಾದ ತೋಡು:
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಹೆದ್ದಾರಿಯನ್ನು ಅಗಲಗೊಳಿಸುವಾಗ ಮಣ್ಣು ಬಿದ್ದು ಈ ತೋಡು ಮುಚ್ಚಿ ಹೋಗಿತ್ತು. ಹೆದ್ದಾರಿ ಪ್ರಾಧಿಕಾರದ ವತಿಯಿಂದ ಈ ತೋಡಿನ ಕಾಮಗಾರಿ ನಡೆಯಬಹುದೆಂಬ ನಿರೀಕ್ಷೆ ಸ್ಥಳೀಯರದ್ದಾಗಿತ್ತಾದರೂ, ಅದು ಹುಸಿಯಾಯಿತು. ನಮ್ಮ ಎಸ್ಟಿಮೇಟ್ ಪ್ರಕಾರ ಇಲ್ಲಿ ಯಾವುದೇ ತೋಡಿನ ಪ್ರಸ್ತಾಪ ಇಲ್ಲ. ಹೆದ್ದಾರಿಯ ನೀರು ಹರಿದು ಹೋಗಲು ಒಳಚರಂಡಿ ಯೋಜನೆಯಷ್ಟೇ ನಮ್ಮದು ಎಂಬ ಉತ್ತರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಸಿಕ್ಕಿತು. ನಟ್ಟಿಬೈಲ್ ಪರಿಸರದಲ್ಲಿ ಹೆದ್ದಾರಿಯವರು ಮಣ್ಣು ಹಾಕಿದ ಬಳಿಕ ಅಲ್ಲಿ ತಡೆಗೋಡೆಯನ್ನು ನಿರ್ಮಿಸಿದರು. ತಡೆಗೋಡೆಯ ಬದಿಯಲ್ಲೇ ತೋಡಿನ ಪಥವೂ ಸಾಗಿತು. ಇದಕ್ಕೆ ತಾಗಿಕೊಂಡೇ ಕೃಷಿ ಭೂಮಿ ಇದೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ನಟ್ಟಿಬೈಲ್ನ ಕೃಷಿ ಭೂಮಿ ನೀರಿನಿಂದ ಮುಳುಗಿರುತ್ತದೆ. ಕಳೆದ ಬಾರಿಯೂ ಇಲ್ಲಿ ಕೃಷಿ ಭೂಮಿ ಮುಳುಗಿದ್ದರೂ, ಬಳಿಕ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು ಶಾಸಕರ ಒತ್ತಡಕ್ಕೆ ಮಣಿದು ಜೆಸಿಬಿ ಮೂಲಕ ತೋಡಿನ ಮಣ್ಣನ್ನು ತೆರವುಗೊಳಿಸಿ, ಅಲ್ಲಿಂದಲ್ಲಿಗೆ ನೀರು ಹರಿದು ಹೋಗುವಾಗೆ ಮಾಡಿದ್ದರು. ಇನ್ನೊಂದೆಡೆ ಕಳೆದ ಮಳೆಗಾಲದಲ್ಲಿ ಕೆಲ ಮೀಟರ್ನಷ್ಟು ತಡೆಗೋಡೆಯೂ ತೋಡಿನ ಬದಿಗೆ ವಾಲಿ ನಿಂತಿತ್ತು. ಆದರೆ ಈ ತೋಡು ಈಗ ಮತ್ತೆ ಬ್ಲಾಕ್ ಆಗಿದೆ. ನಿನ್ನೆಯ ಒಂದು ದಿನದ ಮಳೆಗೆ ತೋಡಿನಲ್ಲಿ ನೀರು ಹರಿಯಲು ಸಾಧ್ಯವಾಗದೇ ಕೃಷಿ ಪ್ರದೇಶಕ್ಕೆ ಮಳೆ ನೀರು ನುಗ್ಗಿದೆ. ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯವರು ಹೆದ್ದಾರಿಯಲ್ಲಿ ನಿರ್ಮಿಸುತ್ತಿರುವ ಒಳಚರಂಡಿಯ ಕಾಮಗಾರಿ ಅಪೂರ್ಣಾವಸ್ಥೆಯಲ್ಲಿ ಇರುವುದರಿಂದ ಅದರಲ್ಲಿ ಬಂದ ನೀರು ಕೂಡಾ ಹೆದ್ದಾರಿಯ ವಿಸ್ತರಣೆಗಾಗಿ ಹಾಕಿದ ಮಣ್ಣನ್ನು ಕೊಚ್ಚಿಕೊಂಡು ಹೋಗಿದ್ದು, ತಡೆಗೋಡೆಯ ಬದಿಯಿಂದ ನಟ್ಟಿಬೈಲ್ನ ಕೃಷಿ ಜಮೀನಿನತ್ತ ಹರಡಿದೆ. ಇಲ್ಲಿ ತಡೆಗೋಡೆಯ ಮಣ್ಣು ಕೂಡಾ ಕೊಚ್ಚಿಕೊಂಡು ಹೋಗಿದ್ದು, ಇದು ಮುಂದುವರಿದ್ದಲ್ಲಿ ಈ ತಡೆಗೋಡೆಯೂ ಕುಸಿದು ಬೀಳುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಉಪ್ಪಿನಂಗಡಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಮಳೆಗಾಲದಲ್ಲಿ ನಟ್ಟಿಬೈಲ್ನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕೃಷಿಕರಿಗೆ ಸಮಸ್ಯೆಯೆನ್ನುವುದು ತಪ್ಪುತ್ತಿಲ್ಲ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಮೂರು ವರ್ಷದಿಂದ ನಮಗೆ ಮಳೆಗಾಲದಲ್ಲಿ ಈ ಸಮಸ್ಯೆಯಿದೆ. ಕೃಷಿ ತೋಟಗಳಲ್ಲಿ ನೀರು ನಿಂತಿದ್ದರಿಂದ ಇಲ್ಲಿನ ಕೆಲವರ ಸುಮಾರು 100ರಷ್ಟು ಅಡಿಕೆ ಮರಗಳು ಸತ್ತೇ ಹೋಗಿವೆ. ಇನ್ನು ನೀರು ನಿಲ್ಲುವ ಈ ಭಾಗದವರ ತೋಟದಲ್ಲಿ ಪ್ರತಿ ವರ್ಷ ಅಡಿಕೆ ಮರಗಳು ಕೊಳೆ ರೋಗಕ್ಕೆ ತುತ್ತಾಗುತ್ತಿವೆ. ಇಲ್ಲಿ ಸಮರ್ಪಕ ತೋಡಿನ ಕಾಮಗಾರಿ ಆಗದ ಹೊರತು ಈ ಸಮಸ್ಯೆ ಸರಿ ಹೋಗಲು ಸಾಧ್ಯವೇ ಇಲ್ಲ. ತೋಡಿನ ಕಾಮಗಾರಿ ನಮಗೆ ಸಂಬಂಧಿಸಿದ್ದಲ್ಲವೆಂದು ಹೇಳುವ ಮೂಲಕ ಹೆದ್ದಾರಿ ಪ್ರಾಧಿಕಾರದವರು ಕೈಚೆಲ್ಲಿ ಬಿಟ್ಟಿದ್ದಾರೆ. ಈ ಬಾರಿ ಒಂದೇ ಮಳೆಗೆ ಈ ರೀತಿ ಕೃಷಿ ತೋಟಗಳಿಗೆ ನೀರು ನುಗ್ಗಿದೆ. ಈ ತೋಡನ್ನು ಸರಿಪಡಿಸದೇ ಇದ್ದಲ್ಲಿ ಇನ್ನು ಮಳೆಗಾಲದಲ್ಲಿ ಇಲ್ಲಿನ ಸ್ಥಿತಿ ಹೇಗಿರಬಹುದು ? ಆದ್ದರಿಂದ ಸಂಬಂಧಪಟ್ಟವರು ಶೀಘ್ರವೇ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಕೃಷಿಕರನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ.
ಉಮೇಶ್ ನಟ್ಟಿಬೈಲ್
ಸಂತೃಸ್ತ ಕೃಷಿಕರು