ಶಿಕ್ಷಕರಲ್ಲಿರುವ ಅನುಭವ ಅಪಾರವಾದದ್ದು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ರಾಮಕುಂಜ: ಉಡುಪಿ ಪೇಜಾವರ ಶ್ರೀಗಳ ಅಧ್ಯಕ್ಷತೆಯಲ್ಲಿ ರಾಜ್ಯದ ವಿವಿಧೆಡೆ ಇರುವ ವಿದ್ಯಾಸಂಸ್ಥೆಗಳ ಶಿಕ್ಷಕರ ಹಾಗೂ ಆಡಳಿತ ಮಂಡಳಿ ಸದಸ್ಯರ ಶೈಕ್ಷಣಿಕ ಸಮಾವೇಶದ ಉದ್ಘಾಟನೆ ಮೇ 13ರಂದು ಬೆಳಿಗ್ಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಸಮಾವೇಶ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, ಶಿಕ್ಷಕರಲ್ಲಿರುವ ಅನುಭವ ಅಪಾರವಾದದ್ದು. ಶಿಕ್ಷಕರು ತಮ್ಮಲ್ಲಿರುವ ಅನುಭವಗಳನ್ನು ಪರಿಸ್ಪರ ಹಂಚಿಕೊಂಡು ಸಮಸ್ಯೆಗಳಿಗೆ ಯೋಗ್ಯ ಪರಿಹಾರ ಕಂಡುಕೊಂಡು ಮುಂದುವರಿದಲ್ಲಿ ಸಂಸ್ಥೆ ಇನ್ನಷ್ಟೂ ಎತ್ತರಕ್ಕೆ ಬೆಳೆಯಲಿದೆ. ಈ ನಿಟ್ಟಿನಲ್ಲಿ ರಾಮಕುಂಜ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಶೈಕ್ಷಣಿಕ ಸಮಾವೇಶ ಯಶಸ್ವಿಯಾಗಿ ನಡೆಯಲಿ ಎಂದು ನುಡಿದರು.
ಮೈಸೂರು ಶ್ರೀ ವಿಜಯವಿಠಲ ವಿದ್ಯಾಪ್ರತಿಷ್ಠಾನದ ಕಾರ್ಯದರ್ಶಿ ವಾಸುದೇವ ಭಟ್ ಅವರು ಮಾತನಾಡಿ, ಶಿಕ್ಷಕರಲ್ಲಿ ಸೇವಾ ಮನೋಭಾವ, ರಾಷ್ಟ್ರ ಪ್ರೇಮ ಇರಬೇಕು. ಕೇವಲ ಪಠ್ಯದಲ್ಲಿನ ವಿಷಯವನ್ನು ವರ್ಣನೆ ಮಾಡಿ ಹೇಳುವುದೇ ಶಿಕ್ಷಕರ ಜವಾಬ್ದಾರಿ ಅಲ್ಲ. ಮಕ್ಕಳನ್ನು ಯೋಗ್ಯವಂತರನ್ನಾಗಿ, ಜ್ಞಾನವಂತರನ್ನಾಗಿ, ಗುಣವಂತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಮಾವೇಶ ಆಯೋಜಿಸಲಾಗುತ್ತಿದೆ. ಈ ಮೂಲಕ ಶಿಕ್ಷಕರಲ್ಲಿರುವ ಸಾಮರ್ಥ್ಯವನ್ನು ವೃದ್ಧಿಸುವ ಕೆಲಸ ಆಗುತ್ತಿದೆ ಎಂದರು. ಶಿಕ್ಷಕ ಕೇವಲ ಪಾಠ ಮಾಡುವವ ಆಗಬಾರದು. ಗುರುಕುಲ ಪದ್ಧತಿಯ ಶಿಕ್ಷಣವೂ ಮಕ್ಕಳಿಗೆ ಸಿಗಬೇಕು. ಭಾರತೀಯ ಸಂಸ್ಕಾರ, ಸಂಸ್ಕೃತಿಗೆ ಹೆಚ್ಚಿನ ಒತ್ತುಕೊಡುವ ಕೆಲಸ ಆಗಬೇಕು. ಇದನ್ನು ಮುಂದಿನ ಪೀಳಿಗೆಗೂ ಪಸರಿಸುವ ಕೆಲಸ ಆಗಬೇಕು. ಒಟ್ಟಿನಲ್ಲಿ ಮಗುವಿನ ಸರ್ವಾಂಗೀಣ ಬೆಳವಣಿಗೆಯ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದ ಅವರು, ಮುಂದಿನ ವರ್ಷ ಮೈಸೂರಿನಲ್ಲಿ ಶೈಕ್ಷಣಿಕ ಸಮಾವೇಶ ಆಯೋಜಿಸಲಾಗುವುದು ಎಂದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕರಾದ ಟಿ.ನಾರಾಯಣ ಭಟ್ ಅವರು ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳನ್ನು ಪರಿಚಯಿಸಿ ಮಾತನಾಡಿ, ಪಾಂಡವರು, ಶ್ರೀರಾಮಚಂದ್ರ, ಮಧ್ವಾಚಾರ್ಯರು ಸಂಚರಿಸಿದ ಊರು ರಾಮಕುಂಜ. ಈ ಊರಿನಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹುಟ್ಟಿ ವಿಶ್ವೆದೆಲ್ಲೆಡೆ ತಮ್ಮ ಕೀರ್ತಿ ಪಸರಿಸಿದ್ದಾರೆ. 1919ರಲ್ಲಿ ಇಲ್ಲಿ ವಿದ್ಯಾಸಂಸ್ಥೆ ಆರಂಭಗೊಂಡಿದೆ. ಈಗ ಆಂಗ್ಲ ಹಾಗೂ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪ.ಪೂ.ಕಾಲೇಜುಗಳಿವೆ. ರಾಜ್ಯದ ವಿವಿಧ ಜಿಲ್ಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿನ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಒಟ್ಟು 2500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂದರು.
ಸ್ವಾಗತಿಸಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಅವರು ಮಾತನಾಡಿ, 1919ರಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳು ಆರಂಭಗೊಂಡಿವೆ. 1950 ರಿಂದ 2020ರ ತನಕ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಇಲ್ಲಿನ ವಿದ್ಯಾಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆದಿವೆ. ಈಗ ಶ್ರೀ ವಿಶ್ವಪ್ರಸನ್ನ ಶ್ರೀಪಾದರ ಅಧ್ಯಕ್ಷತೆಯಲ್ಲಿ ಬೆಳವಣಿಗೆ ಕಾಣುತ್ತಿದೆ. ರಾಮಕುಂಜದಲ್ಲಿ ಆಯೋಜಿಸಿರುವ ಶ್ರೀಗಳ ಅಧ್ಯಕ್ಷತೆಯ ವಿದ್ಯಾಸಂಸ್ಥೆಗಳ ಶಿಕ್ಷಕರ, ಆಡಳಿತ ಮಂಡಳಿ ಸದಸ್ಯರ ಶೈಕ್ಷಣಿಕ ಸಮಾವೇಶ ಅವಿಸ್ಮರಣೀಯವಾಗಲಿದೆ ಎಂದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಶೈಕ್ಷಣಿಕ ಸಮಾವೇಶದ ಮೂಲಕ ವಿಶ್ವೇಶತೀರ್ಥ ಶ್ರೀಪಾದರು ಹುಟ್ಟಿದ ಊರಿನ ಪರಿಚಯಿಸುವ ಅವಕಾಶ ದೊರೆತಿದೆ. ರಾಮಕುಂಜ ಮುಂದೊಂದು ದಿನ ಪುಣ್ಯ ಕ್ಷೇತ್ರವಾಗಿ ಬದಲಾಗಲಿದೆ. 13 ವಿದ್ಯಾರ್ಥಿಗಳಿಂದ ಆರಂಭಗೊಂಡ ವಸತಿ ನಿಲಯದಲ್ಲಿ ಈಗ ರಾಜ್ಯದ ವಿವಿಧ ಜಿಲ್ಲೆಗಳ 500ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಮುಂದಿನ 5 ವರ್ಷದಲ್ಲಿ 5 ಸಾವಿರ ಮಕ್ಕಳು ಇಲ್ಲಿನ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವಂತಾಗಬೇಕು. ಇದಕ್ಕೆ ಈ ಶೈಕ್ಷಣಿಕ ಸಮಾವೇಶವೂ ಪೂರಕವಾಗಲಿ ಎಂದರು.
ಬೆಂಗಳೂರು ವಿಜಯಭಾರತಿ ವಿದ್ಯಾಸಂಸ್ಥೆಗಳ ಆಡಳಿತ ವಿಶ್ವಸ್ಥರಾದ ಗಣಪತಿ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ನಿರೂಪಿಸಿದರು. ಹರಿಣಿ ಮತ್ತು ತಂಡದವರು ಪ್ರಾರ್ಥಿಸಿದರು.
400ಕ್ಕೂ ಹೆಚ್ಚು ಮಂದಿ ಭಾಗಿ:
ರಾಮಕುಂಜ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು, ಧಾರವಾಡ, ಬಳ್ಳಾರಿ, ಮೈಸೂರು, ಹುಬ್ಬಳ್ಳಿಯಲ್ಲಿರುವ ಉಡುಪಿ ಪೇಜಾವರ ಶ್ರೀಗಳ ಅಧ್ಯಕ್ಷತೆಯ ಸುಮಾರು 19 ವಿದ್ಯಾಸಂಸ್ಥೆಗಳ 400ಕ್ಕೂ ಹೆಚ್ಚು ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಸಮಾವೇಶದಲ್ಲಿ ಭಾಗಿಗಳಾಗಿದ್ದಾರೆ. ಮೊದಲ ದಿನ ವಿಶ್ರಾಂತ ಪ್ರಾಂಶುಪಾಲ ಡಾ.ಮಾಧವ ಭಟ್, ಖ್ಯಾತ ಚಿಂತಕಿ ಡಾ.ವಿ.ಬಿ.ಆರತಿ ಅವರು ಉಪನ್ಯಾಸ ನೀಡಿದರು. ಬೆಂಗಳೂರಿನ ದಿಶಾ ಫೌಂಡೇಶನ್ ವತಿಯಿಂದ ಶೈಕ್ಷಣಿಕ ಸವಾಲುಗಳು ತರಬೇತಿ ನಡೆಯಿತು. ಮೇ 14ರಂದು ಬೆಳಿಗ್ಗೆ ರೋಹಿತ್ ಚಕ್ರತೀರ್ಥ ಬೆಂಗಳೂರು, ಡಾ.ಗಾಳಿಮನೆ ವಿನಾಯ ಭಟ್ಟ ಅವರು ಉಪನ್ಯಾಸ ನೀಡಲಿದ್ದು ಸಂಜೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರೊಂದಿಗೆ ಸಂವಾದ ನಡೆಯಲಿದೆ.