ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ 34 ನೆಕ್ಕಿಲಾಡಿಯಲ್ಲಿ ಮಣ್ಣು ಹಾಕಿ ಸರ್ವೀಸ್ ರಸ್ತೆ ನಿರ್ಮಿಸಲಾಗಿದ್ದು, ಆದರೆ ಇದರ ಬದಿಯಲ್ಲಿ ಚರಂಡಿ, ಮೋರಿ ನಿರ್ಮಾಣ ಆಗದ ಪರಿಣಾಮ ಮಳೆಯ ಕೆಸರು ನೀರು ಹಲವರ ಮನೆಯೊಳಗೆ ಹಾಗೂ ಅಂಗಡಿ, ಗ್ಯಾರೇಜ್, ಕಬ್ಬಿಣ ಮಾರಾಟ ಮೊದಲಾದ ಉದ್ಯಮ ಸಂಸ್ಥೆಯೊಳಗೆ ನುಗ್ಗಿದ್ದು, ಹಲವರಿಗೆ ಅಪಾರ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಮೇ .12ರಂದು ಸಂಜೆ ಮತ್ತು ಮೇ.13ರಂದು ನಸುಕಿನಲ್ಲಿ ಇಲ್ಲಿ ಭಾರೀ ಮಳೆ ಸುರಿದಿದ್ದು, ಸರ್ವೀಸ್ ರಸ್ತೆಯ ಮೂಲಕ ಹರಿದು ಚರಂಡಿ ಸೇರಬೇಕಾದ ಕೆಸರು ನೀರು 34-ನೆಕ್ಕಿಲಾಡಿಯಲ್ಲಿ ಜಯಂತಿ ಎಂಬವರ ಮನೆಯೊಳಗೆ ಮತ್ತು ದನದ ಹಟ್ಟಿಯೊಳಗೆ ನುಗ್ಗಿದೆ. ಅಲ್ಲದೇ, ಭಾರೀ ಗಾಳಿಗೆ ಜಯಂತಿ ಅವರ ಮಾಡಿನ ಹಂಚು ಹಾರಿ ಹೋಗಿದ್ದು, ಸಾವಿರಾರು ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.
ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಜಗಜೀವನ್ ರೈ ಎಂಬವರ ಮನೆಯೊಳಗೆ ನೀರು ನುಗ್ಗಿದ್ದು, ಮನೆಯ ಸುತ್ತ ಕೆಸರು ಆವರಿಸಿಕೊಂಡಿದೆ. ಹಾಗೂ ಕಾರ್ ಕ್ಲಬ್, ಪಾಂಡೇಲ್ ಸ್ಟೀಲ್ ಮೊದಲಾದ ವರ್ತಕ ಸಂಸ್ಥೆಯ ಒಳಗೂ ನೀರು ನುಗ್ಗಿದ್ದು ಅಪಾರ ನಷ್ಟ ಉಂಟಾಗಿದೆ. ಇನ್ನು ಮುಂದಾದರೂ ಇಲ್ಲಿನ ಸಮಸ್ಯೆಯನ್ನು ಸರಿಪಡಿಸುವಂತೆ ವರ್ತಕರು ಆಗ್ರಹಿಸಿದ್ದಾರೆ.