ಕೋವಿ ಪರವಾನಿಗೆ ಹೊಂದಿರುವ ರೈತರಿಗೆ ನಿರಾಳತೆ
ಪುತ್ತೂರು:ಪ್ರತಿ ಚುನಾವಣೆ ಸಂದರ್ಭ ರೈತರ ಕೋವಿಗಳನ್ನು ಇಲಾಖೆ ಠೇವಣಿ ಇರಿಸಿಕೊಳ್ಳುವುದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ರೈತರಿಗೆ ದೊಡ್ಡಮಟ್ಟದ ನಿರಾಳತೆ ದೊರೆತಿದೆ.ಅಧಿಕೃತವಾಗಿ ಪರವಾನಿಗೆ ನೀಡಿದ ರೈತರ ಕೋವಿಗಳನ್ನು ಚುನಾವಣೆ ಹೆಸರಿನಲ್ಲಿ ಠೇವಣಿ ಇರಿಸಿಕೊಳ್ಳಲಾಗದು ಎಂದು ಹೈಕೋರ‍್ಟ್ ನ್ಯಾಯಮೂರ್ತಿ ಸಚಿನ್‌ಶಂಕರ್ ಅವರು ಐತಿಹಾಸಿಕ ತೀರ್ಪು ನೀಡಿದ್ದಾರೆ.ಇನ್ನು ಮುಂದೆ ಚುನಾವಣೆ ಸಂದರ್ಭದಲ್ಲಿ ಕೋವಿಗಳನ್ನು ಎಲ್ಲರೂ ಠೇವಣಿ ಇಡಬೇಕೆಂದಿಲ್ಲ.
ಕೋವಿ ಪರವಾನಗಿ ನೀಡುವಾಗ ಸೂಕ್ತ ರೀತಿ ಪರಿಶೀಲಿಸಬೇಕು.ಪರವಾನಿಗೆ ನೀಡಲಾದ ಬಳಿಕ ಚುನಾವಣೆ ಹೆಸರಿನಲ್ಲಿ ಕೃಷಿಕರ ಕೋವಿಗಳನ್ನು ಠೇವಣಿ ಇರಿಸಬಾರದು. ಕೋವಿ ಪರವಾನಿಗೆಯಲ್ಲಿ ಉಲ್ಲೇಖಿಸಲಾದ ನಿಯಮಾವಳಿಗಳು ಮತ್ತು ಕೋವಿ ಠೇವಣಿ ಇರಿಸಬೇಕೆಂಬ ಆದೇಶವು ಒಂದಕ್ಕೊಂದು ವ್ಯತಿರಿಕ್ತವಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.ಚುನಾವಣೆ ಹೆಸರಿನಲ್ಲಿ ರೈತರು ಕೋವಿ ಠೇವಣಿ ಇರಿಸುವುದರಿಂದ ಶಾಶ್ವತ ವಿನಾಯಿತಿ ಕೋರಿ ರೈತರು ಹೈಕೋರ್ಟ್‌ನಲ್ಲಿ ಒಟ್ಟು 5 ದಾವೆ ಹೂಡಿದ್ದರು.ಇದರ ವಿಚಾರಣೆ ನಡೆಸಿದ ಹೈಕೋರ‍್ಟ್ ನ್ಯಾಯಮೂರ್ತಿ ಸಚಿನ್‌ಶಂಕರ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.ಚುನಾವಣೆ ಕಾಲದಲ್ಲಿ ಶಸ್ತ್ರಾಸ್ತ್ರ ಠೇವಣಿ ಇಡುವ ಪದ್ಧತಿಯಿಂದ ವಿನಾಯಿತಿ ಕೋರಿ ಬೆಳೆಗಾರರು ಸಲ್ಲಿಸಿದ ಅರ್ಜಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದ್ದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಪರವಾನಿಗೆ ನೀಡುವಾಗಲೇ ಸೂಕ್ತ ತನಿಖೆ ನಡೆಸಿ ಅರ್ಹರಿಗೆ ಮಾತ್ರ ಕೋವಿ ನೀಡಲಾಗುತ್ತದೆ.ಆದ್ದರಿಂದ ಎಲ್ಲರೂ ಶಸ್ತ್ರಾಸ್ತ್ರ ಠೇವಣಿ ಇಡಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ತಪ್ಪು.ಚುನಾವಣೆ ಆಯೋಗ ಮಾರ್ಗಸೂಚಿಗಳ ಪ್ರಕಾರ ಕ್ರಿಮಿನಲ್ ಹಿನ್ನೆಲೆಯವರಿಂದ ಮಾತ್ರ ಶಸಾಸಗಳನ್ನು ಠೇವಣಿ ಇರಿಸಿಕೊಳ್ಳಬೇಕು.ಅಧಿಕಾರಿಗಳು ಕೋರ್ಟ್ ಆದೇಶಗಳ ಪ್ರಕಾರ ನಡೆಯದೇ ಸುಲಭ ದಾರಿಯನ್ನು ಅನುಸರಿಸಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ವನ್ಯಜೀವಿಗಳಿಂದ ಅಪಾಯ ಎದುರಿಸುತ್ತಿರುವ ದುರ್ಬಲ ಸಮುದಾಯಗಳು ಮತ್ತು ಅವರ ಬೆಳೆಗಳ, ಜಾನುವಾರುಗಳಿಗೆ ಆಗಾಗ್ಗೆ ಆಗುವ ಹಾನಿಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.ಆದ್ದರಿಂದ ಇದರ ಪರಿಹಾರಕ್ಕೆ ಸ್ಕ್ರೀನಿಂಗ್ ಸಮಿತಿಯು ಅರಣ್ಯ ಬಳಿಯ ರೈತರು ಹೊಂದಿರುವ ಶಸಾಸಗಳ ಬಗ್ಗೆ ಸೂಕ್ತವಾದ ಕ್ರಮ ಅನುಸರಿಸಬೇಕು. ಅಧಿಕಾರಿಗಳು ಚುನಾವಣೆ ಸಮಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜತೆಗೆ ಅರಣ್ಯದಂಚಿನ ರೈತರು, ದುರ್ಬಲ ಸಮುದಾಯಗಳು ಮತ್ತು ವನ್ಯ ಮೃಗಗಳ ಮಧ್ಯೆ ನಡೆಯುವ ತಿಕ್ಕಾಟ ಪರಿಗಣಿಸಿ ಎರಡರ ಮಧ್ಯೆ ಸಮತೋಲನ ನಿಲುವು ತಳೆಯಬೇಕು ಎಂದು ಕೋರ್ಟ್ ಸೂಚಿಸಿದೆ.
ಯಾವುದೇ ಚುನಾವಣೆ ಆರಂಭಿಸುವ ಮೊದಲೇ ಅಧಿಕಾರಿಗಳು ಆಯುಧ ಪರವಾನಿಗೆ ಹೊಂದಿದವರ ವ್ಯಾಪಕ ಮೌಲ್ಯ ಮಾಪನ ಮಾಡಬೇಕು. ಈ ಪ್ರಕ್ರಿಯೆ ಕ್ರಿಮಿನಲ್ ಹಿನ್ನಲೆ, ಅದರಲ್ಲೂ ಈಹಿಂದೆ ಚುನಾವಣೆ ಅವಧಿಯಲ್ಲಿ ಗಲಭೆ ನಡೆಸಿದವರನ್ನು ಒಳಗೊಂಡಿರಬೇಕು.ಈ ಕ್ರಮಗಳು ಸಂಭಾವ್ಯ ಅಪಾಯ ಗುರುತಿಸಲು ಮತ್ತು ಅಗತ್ಯ ಮುಂಜಾಗರೂಕ ಕ್ರಮಗಳನ್ನು ಕೈಗೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶ ಹೊಂದಿರಬೇಕು ಎಂದೂ ನ್ಯಾಯಾಲಯ ಹೇಳಿದೆ.
ಪ್ರತಿ ಚುನಾವಣೆಗೆ ಮುನ್ನ ಚುನಾವಣೆಯಲ್ಲಿ ತೊಡಗಿಸಿದ ಅಽಕಾರಿಗಳು ಅನುಸರಿಸಬೇಕಾದ ಕ್ರಮಗಳು, ಸಂಕ್ಷಿಪ್ತವಾದ ಸೂಚನೆಗಳು ಬಗ್ಗೆ ಉಪಯೋಗ ಸ್ನೇಹಿ ಮಾರ್ಗಸೂಚಿಗಳನ್ನು ಆಯೋಗವು ಪ್ರಸ್ತುತ ಪಡಿಸಬೇಕು.ಪ್ರತಿ ಚುನಾವಣೆ ನಂತರ ಮಾರ್ಗಸೂಚಿಗಳು ಜಾರಿಯಾಗಿದ್ದರ ಬಗ್ಗೆ ಮೌಲ್ಯಮಾಪನ ನಡೆಸಬೇಕು ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.
ಪ್ರತಿ ಚುನಾವಣೆ ಸಂದರ್ಭದಲ್ಲಿ ಕೋವಿ ಠೇವಣಿ ಇಡಬೇಕೆಂಬ ಜಿಲ್ಲಾಡಳಿತದ ಆದೇಶದ ವಿರುದ್ಧ ಕಡಬ,ಸುಳ್ಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕೋವಿ ಹೊಂದಿರುವ ಕೃಷಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು.ಕೋವಿ ವಿನಾಯಿತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.ಹಾಗಾಗಿ ಹಲವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಅರ್ಜಿ ಸಲ್ಲಿಸಿದವರಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು.ಆದರೆ ಇದು ಎಲ್ಲಾ ಚುನಾವಣೆ ಸಂದರ್ಭದಲ್ಲಿ ಜಾರಿಯಾಗಬೇಕು ಎಂದು ನ್ಯಾಯಾಲಯದಲ್ಲಿ ಆಗ್ರಹಿಸಲಾಗಿತ್ತು.