ಎಲ್ಲಾ ರಂಗದಲ್ಲೂ ಫಿಲೋಮಿನಾದ ವಿದ್ಯಾರ್ಥಿಗಳು ಪ್ರಜ್ವಲಿಸುತ್ತಿರುವುದು ಸಾಧನೆ-ಬಲರಾಂ ಆಚಾರ್ಯ
ಪುತ್ತೂರು: ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ದೂರದೃಷ್ಟಿತ್ವದಿಂದ ಪುತ್ತೂರಿನಲ್ಲಿ ಅಂದು ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡು ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಪರಿಣಮಿಸಿದೆ ಮಾತ್ರವಲ್ಲ ಸಮಾಜದ ಪ್ರತಿಯೊಂದು ರಂಗದಲ್ಲೂ ಫಿಲೋಮಿನಾದ ವಿದ್ಯಾರ್ಥಿಗಳು ಪ್ರಜ್ವಲಿಸಿರುತ್ತಾರೆ, ಇದೇ ಸಂಪ್ರದಾಯ ಮುಂದಿನ ದಿನಗಳಲ್ಲೂ ಮುಂದುವರೆಯಲಿ ಎಂದು ಕಾಲೇಜು ಹಿರಿಯ ವಿದ್ಯಾರ್ಥಿ ಹಾಗೂ ಜಿ.ಎಲ್ ಸಮೂಹ ಸಂಸ್ಥೆಗಳ ಚೇರ್ ಮ್ಯಾನ್ ಬಲರಾಂ ಆಚಾರ್ಯರವರು ಹೇಳಿದರು.
ಮೇ 17 ರಂದು ಫಿಲೋಮಿನಾ ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಸಂಜೆ ಜರಗಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ವಿದ್ಯಾಸಂಸ್ಥೆಯಲ್ಲಿ ಐವತ್ತು ವರುಷದ ಹಿಂದೆ ಕಲಿತ ನೆನಪುಗಳನ್ನು ಮೆಲುಕು ಹಾಕಲು ಖುಶಿಯಾಗುತ್ತದೆ. ಫಿಲೋಮಿನಾ ವಿದ್ಯಾಸಂಸ್ಥೆ ಎಂಬುದು ನಮಗೆ ಹೆಮ್ಮೆ ಜೊತೆಗೆ ಈ ವಿದ್ಯಾಸಂಸ್ಥೆಯು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಮುಂದುವರೆಯಲಿ ಎಂದರು.
ಮತ್ತೋರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಹೊಟೇಲ್ ಅಶ್ವಿನಿಯ ಮಾಲಕ ದೇರ್ಲ ಕರುಣಾಕರ್ ರೈ ಮಾತನಾಡಿ, ಫಿಲೋಮಿನಾ ವಿದ್ಯಾಸಂಸ್ಥೆಯು ಶೈಕ್ಷಣಿಕ, ಕ್ರೀಡೆ, ರಾಜಕೀಯ, ಸಾಂಸ್ಕೃತಿಕ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಹಾಗೂ ಸರಕಾರದ ಉನ್ನತ ಪದವಿಯಲ್ಲಿ ಸಮಾಜಕ್ಕೆ ಸಾಧಕರನ್ನು ಕೊಡುಗೆಯಾಗಿ ನೀಡಿದೆ. ಈ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯನ್ನು ರೂಢಿಸಿಕೊಂಡು ಬಂದಿದೆ ಮಾತ್ರವಲ್ಲ ಇದೇ ಸಂಸ್ಕೃತಿ ಮುಂದುವರೆಯುತ್ತಾ ಅಭಿವೃದ್ಧಿ ಹೊಂದಲಿ ಎಂದರು.
ಅಧ್ಯಕ್ಷತೆ ವಹಿಸಿದ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಯಾರು ಸಮಾಜದಲ್ಲಿನ ಸವಾಲುಗಳನ್ನು ಧೈರ್ಯವಾಗಿ ಎದುರಿಸುತ್ತಾರೋ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಪ್ರತಿಯೋರ್ವರಲ್ಲೂ ಸಂಸ್ಥೆಯ ಬಗ್ಗೆ ಅಭಿಮಾನವಿರಬೇಕು ಅದು ಹೃದಯಾಂತರಾಳದಿಂದ ಬರಬೇಕು. ಹಿರಿಯ ವಿದ್ಯಾರ್ಥಿಗಳು ಮನದಾಳದಿಂದ ಸಂಸ್ಥೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆ ಜೊತೆಗೆ ಅಭಿವೃದ್ಧಿ ಕಾಣಲು ಸೂಕ್ತ ವೇದಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಿವೃತ್ತ ಪ್ರಾಂಶುಪಾಲ ದಿ.ವಂ|ಹೆನ್ರಿ ಕ್ಯಾಸ್ಟಲಿನೊ ಧತ್ತಿನಿಧಿ ಬಹುಮಾನವನ್ನು ಹಸ್ತಾಂತರಿಸಲಾಯಿತು. ಧತ್ತಿನಿಧಿ ಬಹುಮಾನದ ವಿವರವನ್ನು ಉಪನ್ಯಾಸಕ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಅಭಿಷೇಕ್ ಸುವರ್ಣರವರು ನೀಡಿದರು. 2024-26ನೇ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರತಿಮಾ ಹೆಗ್ಡೆರವರನ್ನು ನಿರ್ಗಮನ ಅಧ್ಯಕ್ಷ ಎ.ಜೆ ರೈಯವರು ಹೂ ನೀಡಿ ಸ್ವಾಗತಿಸಿದರು. ಉಪನ್ಯಾಸಕರಾದ ವಾರಿಜ ಹಾಗೂ ಸುರಕ್ಷಾ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ ಸ್ವಾಗತಿಸಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯತೀಂದ್ರನಾಥ್ ರೈ.ಪಿ.ಡಿ ವಂದಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಹಿರಿಯ ವಿದ್ಯಾರ್ಥಿ ಸಂಘದ ನಿಯೋಜಿತ ಅಧ್ಯಕ್ಷೆ ಪ್ರತಿಮಾ ಹೆಗ್ಡೆ, ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರಶಾಂತ್ ರೈರವರು ನೀಡಿದರು. ಕ್ರೀಡಾ ಸಾಧಕರ ಹೆಸರನ್ನು ಉಪನ್ಯಾಸಕ ಧನ್ಯ ಪಿ.ಟಿ ಓದಿದರು. ಉಪನ್ಯಾಸಕಿ ಶ್ರೀಮಣಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಸನ್ಮಾನ..
ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಉಪ ಪ್ರಾಂಶುಪಾಲ ಡಾ.ಎ.ಪಿ ರಾಧಾಕೃಷ್ಣ, ಪ್ರೊ|ಗಣೇಶ್ ಭಟ್, ಸಸ್ಯಶಾಸ್ತ್ರ ವಿಭಾಗದ ಪ್ರೊ|ನಾಗಾರಾಜು ಎಂ, ಇತಿಹಾಸ ವಿಭಾಗದ ಪ್ರೊ|ಝುಬೈರ್ ಹಾಗೂ ಡಾಕ್ಟರೇಟ್ ಪದವಿ ಪಡೆದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊ ಮತ್ತು ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿ, ನಿವೃತ್ತ ಡಿ.ವೈ.ಎಸ್.ಪಿ ಜಗನ್ನಾಥ್ ರೈ ನುಳಿಯಾಲುರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದವರ ಪೈಕಿ ನಿವೃತ್ತ ಡಿ.ವೈ.ಎಸ್.ಪಿ ಜಗನ್ನಾಥ್ ರೈಯವರು ಮಾತನಾಡಿ, ತನಗೆ ಶಿಸ್ತು ಕಲಿಸಿದ ಈ ಸಂಸ್ಥೆಯನ್ನು ಎಂದಿಗೂ ಮರೆಯಲಾರೆ. ತಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪರ್ಸನಲ್ ಸೆಕ್ಯೂರಿಟಿ ಆದಂತಹ ಸಂದರ್ಭದಲ್ಲಿ ಫಿಲೋಮಿನಾದ ವಿದ್ಯಾರ್ಥಿ ಎಂದು ತನಗೆ ಬಹಳ ಗೌರವ ಸಿಕ್ಕಿತ್ತು. ಆ ಸಂದರ್ಭದಲ್ಲಿ ತಾನು ತನಗೆ ಕಲಿಸಿದ ಶಿಸ್ತಿನ ಸಿಪಾಯಿ ಪ್ರಾಂಶುಪಾಲ ವಂ|ಸೆರಾವೋರವರಿಗೆ ಸೆಲ್ಯೂಟ್ ಹೊಡೆದಿದ್ದೆ ಎಂದರು.
ಅಭಿನಂದನೆ…
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಪ್ರಥಮ ಬಿಎಸ್ಸಿಯ ಸ್ಪಂದನಾ, ಅಂತಿಮ ಬಿಕಾಂನ ಅಭಿರಾಮಚಂದ್ರ ಅಡಿಗುಂಡಿ, ಪ್ರಥಮ ಎಂಕಾಂನ ಬ್ಯೂಲಾ ಪಿ.ಟಿ(ವೈಟ್ ಲಿಪ್ಟಿಂಗ್), ಪ್ರಥಮ ಬಿಸಿಎಯ ವರ್ಷಾ(ಹ್ಯಾಮರ್ ತ್ರೋ), ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ನಿಖಿಲ್ ಬಿ.ಕೆ(ಯೋಗಾಸನ), ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಆದರ್ಶ್ ಶೆಟ್ಟಿ, ಕೆ.ಆರ್ ಯಶ್ವಿನ್, ಅಮೃತಾ ಕೆ(ಅಥ್ಲೆಟಿಕ್ಸ್), ಪ್ರಥ್ವಿ ಕೆ(ಹ್ಯಾಮರ್ ತ್ರೋ), ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ತೃಪ್ತಿ ಎನ್(ಯೋಗಾಸನ), ಮನ್ವಿತ್ ಕಣಜಾಲು(ಚೆಸ್), ಜ್ಯೋತ್ಸ್ನಾ ಲೈಸಾ ಜೋನ್ಸನ್(ಲೈಫ್ ಸೇವಿಂಗ್), ಇಶಿಕಾ ಕೆ(ಕರಾಟೆ), ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ನಂದನ್ ನಾಯ್ಕ್(ಲೈಫ್ ಸೇವಿಂಗ್), ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನೀತಿ ರೈ, ಅದ್ವಿತ್ ರೈ(ಲೈಫ್ ಸೇವಿಂಗ್), ಪ್ರಣಾಮ್(ಕರಾಟೆ) ಹಾಗೂ 2023-24ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈಯ್ದ ಅಶ್ವಿನ್ ಎಂ.ಎಂ(ಕಲಾ ವಿಭಾಗ), ಪ್ರತೀಕ್ಷಾ ಡಿ.ಜೆ(ವಾಣಿಜ್ಯ ವಿಭಾಗ), ಹಲೀಮತ್ ಶೈಮಾ(ವಿಜ್ಞಾನ ವಿಭಾಗ), ಸುಜಿತ್ ಎಸ್ ಪಿ, ಸುಶ್ಮಿತಾ ಡಿ’ಸೋಜ(ಎನ್.ಸಿ.ಸಿ)ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.