ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಮುನ್ನುಡಿ-ಸಜಂಕಾಡಿ ಶಾಲೆಯ ಗೋಡೆಯಲ್ಲಿ ಕಣ್ಮನ ಸೆಳೆಯುವ ವರ್ಲಿ ಚಿತ್ತಾರ

0

ಪುತ್ತೂರು: ಇನ್ನೇನು ರಜೆ ಕಳೆದು ಶಾಲೆಗಳು ಮತ್ತೆ ಪುನರಾರಂಭಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಸಜಂಕಾಡಿಯಂತಹ ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಯನ್ನು, ಸುಣ್ಣ ಬಣ್ಣ, ಚಿತ್ತಾರದೊಂದಿಗೆ ಒಂದಷ್ಟು ಚಂದಗೊಳಿಸಿ, 2024-25ನೇ ಶೈಕ್ಷಣಿಕ ವರುಷದ ಮೊದಲ ದಿನದಂದು ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಮುಂದಾಗಿರುವುದು ಪ್ರಶಂಸನೀಯ.


1967ರಲ್ಲಿ ಮೂಡಾಯೂರಿನ ಆನಂದ ಆಳ್ವರ ಮನೆಯ ಜಗುಳಿಯಲ್ಲಿ ಆರಂಭಗೊಂಡ ಈ ಶಾಲೆಯು ಕುತ್ಯಾಳ ಪಾದೆ ದಿ. ಕೊರಗಪ್ಪ ರೈ ಗಳ ಹಳೆಯ ಕೊಟ್ಟಿಗೆಯೊಂದಕ್ಕೆ ಸ್ಥಳಾಂತರಗೊಂಡು ಈ ಊರಿನ ವಿದ್ಯಾದೇಗುಲವಾಗಿ ತನ್ನ ಪ್ರಾರಂಭಿಕ ಹೆಜ್ಜೆಯನ್ನು ಇಟ್ಟಿತು. ಮುಂದೆ 1973-74 ರಲ್ಲಿ ಶಾಲೆಗೆ ಸರಕಾರದ ಅನುದಾನ ದೊರಕಿರುವುದರಿಂದ ಕುತ್ಯಾಳ ರಾಧಾಕೃಷ್ಣ ಕಲ್ಲೂರಾಯರ ಸಹಕಾರದಲ್ಲಿ ಈಗಿನ ಬತ್ತೇರಿ ಎಂಬಲ್ಲಿ ನಿರ್ಮಾಣಗೊಂಡು ಸುಸಜ್ಜಿತ ಕಟ್ಟಡವೊಂದು ತಲೆ ಎತ್ತಿನಿಂತಿತು. ಆದರೆ ಶಾಲೆಯು ತನ್ನ ಮೂಲ ಹೆಸರಾದ ’ಸಜಂಕಾಡಿ’ಯನ್ನು ಇಂದಿಗೂ ಹಾಗೆಯೇ ಉಳಿಸಿಕೊಂಡಿದೆ .


ಮುಚ್ಚಿತೆರೆದ ಶಾಲೆ:
ಮಕ್ಕಳ ಕೊರತೆಯಿಂದ ಈ ಶಾಲೆಯು ಒಮ್ಮೆ ಕೆಲವು ವರ್ಷಗಳವರೆಗೆ ಮುಚ್ಚಲ್ಪಟ್ಟಿತ್ತು ನಂತರ ಆಗಿನ ಮಂಡಲ ಉಪಪ್ರಧಾನರಾಗಿದ್ದ ಕುದ್ಕಾಡಿ ಬಾಲಕೃಷ್ಣ ರೈ ಮತ್ತು ಮಂಡಲ ಪಂಚಾಯತ್ ಸದಸ್ಯ ದಿ.ಮಾಯಿಲಪ್ಪ ರೈ ನೆಕ್ರಾಜೆ ಹಾಗೂ ಊರ ಹಿರಿಯರ ಪ್ರಯತ್ನದಿಂದ 1989ರಲ್ಲಿ ಮತ್ತೆ ತೆರೆಯಲ್ಪಟ್ಟಿತು. ಹೀಗೆ ಆರಂಭಗೊಂಡ ಶಾಲೆ ಹಲವು ದಾನಿಗಳ, ಸಂಘಸಂಸ್ಥೆಗಳ ಸಹಕಾರದೊಂದಿಗೆ ಮುನ್ನಡೆಯುತ್ತಾ 2017ರಲ್ಲಿ ಕೇವಲ 20 ಮಕ್ಕಳೊಂದಿಗೆ ಸುವರ್ಣ ಮಹೋತ್ಸವ ಆಚರಿಸಿಕೊಂಡಿತ್ತು. ಆ ಬಳಿಕ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಾ ಈಗ ಸುಮಾರು 50ರಷ್ಟು ವಿದ್ಯಾರ್ಥಿಗಳು ಈ ಗ್ರಾಮೀಣ ಭಾಗದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ .
ಇಲ್ಲಿ ಪಠ್ಯದ ಜೊತೆಗೆ ಪಠ್ಯ ಪೂರಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿವಿಧ ಮಟ್ಟಗಳನ್ನು ಪ್ರತಿನಿಧಿಸಿರುತ್ತಾರೆ.


ಸುವರ್ಣ ಮಹೋತ್ಸವ ಕಂಡಿರುವ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಇನ್ನೂ ಹೆಚ್ಚಿನ ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಇಲ್ಲಿನ ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಹಾಗೂ ಶಿಕ್ಷಕ ಗಣೇಶ ನಾಯಕ್ ಪುತ್ತೂರು ಇವರುಗಳ ವಿಶೇಷ ಮುತುವರ್ಜಿಯಿಂದ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರ ಪ್ರೋತ್ಸಾಹ, ಹಲವಾರು ದಾನಿಗಳ ಸಹಕಾರದೊಂದಿಗೆ ಮೊದಲ ಹಂತದಲ್ಲಿ ’ನಲಿ ಕಲಿ’ ಕೊಠಡಿಗೆ ಸುಣ್ಣಬಣ್ಣ ಬಳಿದು ಜನಪದೀಯ ಸೊಗಡಿನ ವರ್ಲಿಚಿತ್ತಾರವನ್ನು ಬರೆಯುವ ಮೂಲಕ ಮುಂದಿನ ಶೈಕ್ಷಣಿಕ ವರುಷದ ಆರಂಭಕ್ಕೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಮುಂದಾಗಿದ್ದಾರೆ. ಮಂಗಳೂರಿನ ಆಯಾಮ ವಿನ್ಯಾಸದ ನವೀನ್ ಅಡ್ಕಾರ್, ಸುಂದರ್ ಬೆಳ್ಳಿಪ್ಪಾಡಿ, ಸುಚೇತ್ ತೊಡಿಕಾನ, ಕಾರ್ತಿಕ್ ವಿಟ್ಲ ಮೊದಲಾದ ಕಲಾವಿದರ ಕುಂಚದ ಮೂಲಕ ಮಹಾರಾಷ್ಟ್ರದ ಉತ್ತರ ಸಹ್ಯಾದ್ರಿಯ ಬುಡಕಟ್ಟು ಜನರ ಕಲೆಯಾದ ವರ್ಲಿ ಚಿತ್ತಾರದಲ್ಲಿ ಕರಾವಳಿಯ ಸಂಸ್ಕೃತಿಗಳ ಅನಾವರಣ, ಮಕ್ಕಳ ಬಾಲ್ಯದ ಆಟಗಳು, ಸ್ವಚ್ಚತೆಯ ಜಾಗೃತಿಯ ಚಿತ್ರ, ಗ್ರಾಮೀಣ ಬದುಕು, ನಲಿ -ಕಲಿಯ ಉತ್ಸಾಹದ ಕಲಿಕೆಯನ್ನು ಬಿಂಬಿಸುವ ಕಲಾತ್ಮಕ ಚಿತ್ರಗಳು ಕಣ್ಮನ ಸೆಳೆಯುತ್ತಿದೆ.

ಶಾಲೆಗೆ ಬಣ್ಣ ಬಳಿದು ಚಂದಗಾಣಿಸಲು ಹೊರಟಿರುವ ಪ್ರಯತ್ನವಂತೂ ಶ್ಞಾಘನೀಯ. ಶಾಲೆಯ ಅಭಿವೃದ್ಧಿಯಲ್ಲಿ ಎಸ್.ಡಿ.ಎಂ.ಸಿ ಯ ಪೂರ್ಣಸಹಕಾರವಿದೆ.
ಯಶೋಧ, ಅಧ್ಯಕ್ಷರು, ಎಸ್‌ಡಿ.ಎಂ.ಸಿ

LEAVE A REPLY

Please enter your comment!
Please enter your name here