ಉಪ್ಪಿನಂಗಡಿ: ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಉಪ್ಪಿನಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪಾಲಿಗೆ ಉತ್ತಮ ಸೇವೆ ದೊರಕುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕ ವಲಯದಿಂದ ಗಂಭೀರ ಸ್ವರೂಪದ ಆರೋಪ ವ್ಯಕ್ತವಾಗಿದೆ.
ಕೈಗೆ ಗಾಯವಾಗಿದ್ದ ರೋಗಿಯೋರ್ವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಸಂಧರ್ಭದಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಮೂವರು ವೈದ್ಯೆಯರು ಮೊಬೈಲ್ನೊಂದಿಗೆ ತಲ್ಲೀನರಾಗಿದ್ದುಕೊಂಡು ರೋಗಿಯನ್ನು ಒಬ್ಬರಿಂದ ಇನ್ನೊಬ್ಬರ ಬಳಿಗೆ ಹೋಗುವಂತೆ ಮಾಡುತ್ತಿದ್ದರೆ ವಿನಹ ಚಿಕಿತ್ಸೆ ನೀಡಲು ಮುಂದಾಗುತ್ತಿರಲಿಲ್ಲ. ಬಳಿಕ ರೋಗಿಯನ್ನು ಪುತ್ತೂರು ಆಸ್ಪತ್ರೆಗೆ ಹೋಗಲು ನಿರ್ದೇಶನ ನೀಡಿ ಸತಾಯಿಸಿದ್ದಾರೆಂದು ರೋಗಿಯೊಂದಿಗೆ ಹೋಗಿದ್ದ ಉಪ್ಪಿನಂಗಡಿಯ ಯುವ ಉದ್ಯಮಿ ಫಯಾಜ್ ದೂರಿದ್ದಾರೆ.
ಮಾತ್ರವಲ್ಲದೆ ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ವಯೋವೃದ್ದ ರೋಗಿಗಳನ್ನು ಕೂಡಾ ಇನ್ನು ಮುಂದಕ್ಕೆ ನೀವು ಇಲ್ಲಿಗೆ ಬರಬೇಡಿ, ಪುತ್ತೂರು ಅಥವಾ ಮಂಗಳೂರಿನ ಆಸ್ಪತ್ರೆಗೆ ಹೋಗಿ ಎಂದು ತಿಳಿಸುತ್ತಿದ್ದರೆಂದೂ ಆರೋಪಿಸಿರುವ ಅವರು, ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಈ ರೀತಿಯ ನಿರ್ಲಕ್ಷ್ಯವನ್ನು ತಾನು ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ತಾಲೂಕು ಆರೋಗ್ಯಾಧಿಕಾರಿಗಳ ನಿರ್ದೇಶನದ ಅನ್ವಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರು ಶನಿವಾರದಂದು ತನ್ನಲ್ಲಿ ಘಟನೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ಫಯಾಜ್ ತಿಳಿಸಿದ್ದಾರೆ.