ಹಿರಿಯ ಕಾಂಗ್ರೆಸ್ ಮುಖಂಡ ರಾಜೇಂದ್ರ ಅರಿಗ ಅವರಿಗೆ ನುಡಿನಮನ

0

ರಾಜೇಂದ್ರರು ಕೋಡಿಂಬಾಡಿಯ ಮಾಣಿಕ್ಯವಾಗಿದ್ದರು: ಶಾಸಕ ಅಶೋಕ್ ರೈ

ಪುತ್ತೂರು: ಒಬ್ಬ ರಾಜಕಾರಣಿ ಯಾವ ರೀತಿ ಇರಬೇಕು ಎಂಬುದಕ್ಕೆ ಕೋಡಿಂಬಾಡಿ ಗ್ರಾಪಂ ಮಾಜಿ ಸದಸ್ಯರಾದ ಹಿರಿಯ ಕಾಂಗ್ರೆಸ್ ಮುಖಂಡ ದಿ.ರಾಜೇಂದ್ರ ಅರಿಗರೇ ಸಾಕ್ಷಿಯಾಗಿದ್ದು ಇವರು ಕೋಡಿಂಬಾಡಿ ಗ್ರಾಮದ ಮಾಣಿಕ್ಯದಂತಿದ್ದರು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ಕೋಡಿಂಬಾಡಿ ಮಹಿಷಮರ್ಧಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ನಿಧನರಾದ ರಾಜೇಂದ್ರ ಅರಿಗರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಮಹಿಷ ಮರ್ಧಿನಿ ದೇವಸ್ಥಾನ ಅಭಿವೃದ್ದಿಯಲ್ಲಿ ಮುತುವರ್ಜಿವಹಿಸಿದ್ದ ಅವರು ದೇವಸ್ಥಾನ ಜೀರ್ಣೋದ್ದಾರಗೊಳ್ಳುವ ವೇಳೆ ಅತೀವ ಸಂತುಷ್ಠರಾದ ಓರ್ವ ಶ್ರೇಷ್ಠ ಭಕ್ತರಾಗಿ ಮೆರೆದಿದ್ದರು. ವಿದ್ಯಾರ್ಥಿ ಜೀವನದಲ್ಲಿ ಸಂಘಟನಾತ್ಮಕ ಮನೋಭಾವವನ್ನು ಹೊಂದಿದ್ದ ಅವರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಾಟಕ ಪ್ರಿಯರಾಗಿದ್ದ ಅವರು ಕೋಡಿಂಬಾಡಿಯ ಯುವಕರ ತಂಡವನ್ನು ಕಟ್ಟಿ ನಾಟಕ ಪ್ರದರ್ಶನ ಮಾಡುತ್ತಿದ್ದು ಆ ತಂಂಡದಲ್ಲಿ ನಾನೂ ಇದ್ದು ಸ್ತ್ರೀ ಪಾತ್ರದಾರಿಯಾಗಿ ಅಭಿನಯ ಮಾಡಿದ್ದೆ. ಕೆಲೆಗೆ ಹೆಚ್ಚು ಗೌರವ ನೀಡುತ್ತಿದ್ದ ಅವರು ಅತೀವ ಮುಂದಾಲೋಚಾನ ಶಕ್ತಿಯನ್ನು ಹೊಂದಿದ್ದರು ಅವರ ಅಗಲುವಿಕೆ ಸಮಾಜಕ್ಕೆ ಅಪಾರವಾದ ನಷ್ಟವಾಗಿದೆ ಎಂದು ಹೇಳಿದರು.

ಕುದುರೆ ನೋಡಲೆಂದೇ ಅವರ ಮನೆಗೆ ಜನ ಹೋಗುತ್ತಿದ್ದರು
ಅಂದಿನ ಕಾಲದಲ್ಲಿ ಕುದುರೆ ಎಲ್ಲಿಯೂ ಇರಲಿಲ್ಲ, ರಾಜೇಂದ್ರ ಅರಿಗರ ಮನೆಯಲ್ಲಿ ಕುದುರೆ ಇತ್ತು ಅದನ್ನು ನೋಡಲು, ಅದರ ಮೇಲೆ ಕುಳಿತುಕೊಳ್ಳಲು ಜನ ಅವರ ಮನೆಗೆ ಹೋಗುತ್ತಿದ್ದರು, ಕದುರೆ ಮೇಲೆ ಏರದವರು ಕೋಡಿಂಬಾಡಿಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಿದ ಅವರು ತನ್ನ ಗ್ರಾಮದ ಜನತೆಯನ್ನು ಅತೀವ ಪ್ರೀತಿ ಮಾಡುತ್ತಿದ್ದರು. ತನ್ನ ಗ್ರಾಮಕ್ಕಾಗಿ ಅಂದಿನ ಕಾಲದಲ್ಲಿ ಎನೆಲ್ಲಾ ಬೇಕೋ ಅದೆಲ್ಲವನ್ನೂ ಮಾಡಲು ಅವಿರತ ಶ್ರಮವಹಿಸಿದ ಶ್ರೇಷ್ಠ ವ್ಯಕ್ತಿಯಾಗಿ ಮೆರೆದರು ಎಂದು ಹೇಳಿದರು.

ಅರಿಗರು ರಾಜಮನೆತನದವರಾಗಿದ್ದರು: ಸೀತಾರಾಮ ಶೆಟ್ಟಿ
ಪ್ರಗತಿಪರ ಕೃಷಿಕ, ನಿವೃತ್ತ ಬ್ಯಾಂಕ್ ಉದ್ಯೋಗಿ ಹೆಗ್ಡೆಹಿತ್ಲು ಸೀತಾರಾಮ ಶೆಟ್ಟಿಯವರು ಮಾತನಾಡಿ, ಅರಿಗರು ರಾಜಮನೆತನದ ವ್ಯಕ್ತಿಯಾಗಿದ್ದರು. ಅವರು ತನ್ನ ಯೌವ್ವನ ಪ್ರಾಯದಲ್ಲಿ ಕೋಡಿಂಬಾಡಿ ಗ್ರಾಮ ಮಾತ್ರವಲ್ಲದೆ ಪುತ್ತೂರು ತಾಲೂಕಿನಲ್ಲೇ ಪರಿಚಿತರಾದ ವ್ಯಕ್ತಿಯಾಗಿದ್ದರು. ಪ್ರಪ್ರಥಮ ಬಾರಿಗೆ ಕೋಡಿಂಬಡಿ ಗ್ರಾಮದ ಪೂರ್ಣ ಮಾಹಿತಿಯನ್ನೊಳಗೊಂಡ ಟೆಲಿಫೋನ್ ಡೈರೆಕ್ಟರಿಯನ್ನು ಮಾಡಿದ್ದು ಮಾತ್ರವಲ್ಲದೆ ಗ್ರಾಮದ ನಕ್ಷೆಯನ್ನು ಸ್ವತ ತಯಾರು ಮಾಡಿ ಸೈ ಎನಿಸಿಕೊಂಡಿದ್ದರು. ಸದಾ ಚಟುವಟಿಕೆಯ ವ್ಯಕ್ತಿಯಾಗಿದ್ದ ಅವರು ಇಂದಿನ ಯುವ ಸಮೂಹಕ್ಕೆ ಆದರ್ಶರಾಗಿದ್ದಾರೆ ಎಂದು ಹೇಳಿದರು.

ನಾಟಕದಿಂದ ಮುಗುರುತೆಲಿಕೆ ಬಿರುದು ಪಡೆದಿದ್ದರು: ಮುರಳೀಧರ್ ರೈ
ರಾಜೇಂದ್ರ ಅರಿಗರು ನಾಟಕ ಪ್ರಿಯರಾಗಿದ್ದರು. ಕುಂಬ್ರ ದುರ್ಗಾಪ್ರಸಾದ್ ರೈ ಯವರ ಮುಗುರು ತೆಲಿಕೆ ನಾಟಕವನ್ನು ಯಸಶ್ವಿಯಾಗಿ ಪ್ರದರ್ಶನ ಮಾಡಿದ ಬಳಿಕ ರಾಜೇಂದ್ರ ಮುಗುರುತೆಲಿಕೆ ಎಂಬ ಹೆಸರು ಕೂಡಾ ಬಂದಿತ್ತು. ತನ್ನಲ್ಲಿರುವ ಕುದುರೆಯಿಂದ ತನ್ನ ಗ್ರಾಮವನ್ನು ಸುತ್ತಾಡುತ್ತಿದ್ದ ಅವರು ಗ್ರಾಮದಲ್ಲಿ ಎಲ್ಲಿಯಾದರೂ ಸಮಸ್ಯೆ ಯಾದಲ್ಲಿ ತನ್ನ ಕುದುರೆಯ ಮೂಲಕ ತೆರಳುತ್ತಿದ್ದರು. ಜನರಲ್ಲಿ ಅಪಾರ ಗೌರವ ಇದ್ದ ಅವರು ತನ್ನ ರಾಜಕೀಯ ಜೀವನದ ಮೂಲಕ ಮನೆ ಮಾತಾಗಿದ್ದರು ಎಂದು ಹೇಳಿದ್ದರು.

ರಾಜೇಂದ್ರರಿಂದ ಕಲಿಯುವುದು ತುಂಬಾ ಇದೆ: ಬದಿನಾರ್
ಒಬ್ಬ ಗ್ರಾಪಂ ಸದಸ್ಯನಾಗಿ ತನ್ನ ಗ್ರಾಮಕ್ಕೆ ಏನು ಮಾಡಬಹುದು ಎಂಬುದನ್ನು ರಾಜೇಂದ್ರ ಅರಿಗರಿಂದ ಕಲಿಯಬೇಕಿದೆ. ತನ್ನ ಸದಸ್ಯತ್ವ ಅವಧಿಯಲ್ಲಿ ಗ್ರಾಮದ ಮೂಕ ಪ್ರಾಣಿಗಳಿಗೂ ಸಾರ್ವಜನಿಕ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದ ಮಹಾನ್ ಮಾನವತಾವಾದಿಯಾಗಿದ್ದ ಇವರು ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿ ಮೆರೆದವರು. ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಂಡಿದ್ದ ಅವರು ಕೈ ಹಾಕದ ಕ್ಷೇತ್ರಗಳೇ ಇಲ್ಲ. ಎಲ್ಲಾ ರಂಗದಲ್ಲೂ ತನ್ನ ಪ್ರತಿಭೆಯ ಛಾಪನ್ನು ವಿಸ್ತರಿಸಿದ್ದ ಅವರು ಗ್ರಾಮದ ಅಮೂಲ್ಯ ಸೊತ್ತಾಗಿ ಪರಿಣಮಿಸಿದ್ದರು ಎಂದು ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ಅಬಿಪ್ರಾಯ ವ್ಯಕ್ತಪಡಿಸಿದರು.

ಕೋಡಿಂಬಾಡಿ ಮಹಿಷಮರ್ಧಿನಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಮಾತನಾಡಿ, ರಾಜೇಂದ್ರ ಅರಿಗರ ಕಲಾ ಸಾಹಿತ್ಯ ಪ್ರೇಮದ ಬಗ್ಗೆ ಕೊಂಡಾಡಿದರು. ವೇದಿಕೆಯಲ್ಲಿ ಬನ್ನೂರು ರೈತ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಸುಬಾಸ್‌ನಾಯಕ್ ನೆಕ್ಕರಾಜೆ, ಶ್ರೀನಿವಾಸ್ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಪತ್ನಿ ಸುಮಾ ಅಶೋಕ್ ರೈ ಭಾಗವಹಿಸಿದರು. ಕೋಡಿಂಬಾಡಿ ಮಹಿಷಮರ್ಧಿನಿ ದೇವಸ್ಥಾನದ ಮೊಕ್ತೇಸರರಾದ ಸಂತೋಷ್ ರವರು ಸ್ವಾಗತಿಸಿದರು. ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ನಡುಮನೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here