7ನೇ ವರ್ಷದ ಹಲಸು ಹಣ್ಣು ಮೇಳ ಸಂಪನ್ನ

0

ಪುತ್ತೂರು:ನವತೇಜ ಪುತ್ತೂರು, ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್, ಜೆಸಿಐ ಪುತ್ತೂರು ಹಾಗೂ ಅಡಿಕೆ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ಬಪ್ಪಳಿಗೆ ಜೈನ ಭವನದಲ್ಲಿ ನಡೆದ ಹಲಸು ಹಣ್ಣು ಮೇಳವು ಮೇ.26ರಂದು ಸಂಜೆ ಸಮಾಪನಗೊಂಡಿತು.


ಹಲಸಿನ ವಿವಿಧ ತಳಿಯ ಗಿಡಗಳು, ಹಲಸಿನ ಉತ್ಪನ್ನಗಳ ಮಳಿಗೆ, ಹಲಸಿನ ಸೋಳೆಯನ್ನು ಬಿಡಿಸುವ ಪರಿಕರಗಳ ಮಳಿಗೆ, ಇತರ ಹಣ್ಣುಗಳ ಮಳಿಗೆ, ಕೃಷಿ ಯಂತ್ರೋಪಕರಣಗಳ ಮಳಿಗೆ, ಆಹಾರ ಮೇಳಗಳು, ಸ್ಥಳದಲ್ಲೇ ತಯಾರಿಸುವ ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಮಳಿಗೆ, ಅಭಿವೃದ್ಧಿ ಪಡಿಸಿದ ವಿವಿಧ ತಳಿಯ ಗಿಡಗಳ ಪ್ರದರ್ಶನ ಹಾಗೂ ಮಾರಾಟಗಳು ಮೂರು ದಿನಗಳ ಹಲಸು ಹಣ್ಣು ಮೇಳದಲ್ಲಿ ಮೇಳೈಸಿದ್ದವು.ಸಾವಿರಾರು ಮಂದಿ ಆಗಮಿಸಿದ್ದರು.


ಹಲಸಿನ ಉದ್ಯಮದಲ್ಲಿ ಯಾಂತ್ರಿಕ ವ್ಯವಸ್ಥೆಯ ಬಗ್ಗೆ ವಿಶ್ಲೇಷಣೆಯಾಗಬೇಕು-ಶ್ರೀಪಡ್ರೆ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾಪನ ಭಾಷಣ ಮಾಡಿದ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಮಾತನಾಡಿ, ಹಲಸಿನ ಹಪ್ಪಳಕ್ಕೆ ಬಹಳಷ್ಟು ಬೇಡಿಕೆಯಿದೆ.ಹಪ್ಪಳ ಉದ್ಯಮವಾಗಿ ಮಾಡಿದರೆ ದೊಡ್ಡ ಆರ್ಥಿಕ ಬೆಲೆ.ಹಪ್ಪಳ ಉದ್ಯಮದಲ್ಲೇ ಹಲಸಿಗೆ ಮೌಲ್ಯವರ್ಧನೆಯಾಗಬಹುದು.ಹಲಸಿನಲ್ಲಿ ಅಂಟೇ ದೊಡ್ಡ ಸಮಸ್ಯೆಯಾಗಿದೆ.ಇದಕ್ಕಾಗಿ ಯಾಂತ್ರಿಕ ವ್ಯವಸ್ಥೆಯ ಕುರಿತು ವಿಶ್ಲೇಷಣೆಯಾಗಿ ಸೂಕ್ತ ಪರಿಹಾರ ಕಾಣುವ ಅಗತ್ಯವಿದೆ.ಹಲಸಿನ ಉದ್ಯಮದಲ್ಲಿ ಯಾಂತ್ರಿಕ ವ್ಯವಸ್ಥೆ ಅಳವಡಿಸಿದಾಗ ಮಾರುಕಟ್ಟೆ ಸೋಲಲು ಸಾಧ್ಯವಿಲ್ಲ.ಯಾಂತ್ರಿಕ ವ್ಯವಸ್ಥಯನ್ನು ಅನ್ವೇಷಣೆ ಮಾಡುವ ಕೆಲಸವಾಗಬೇಕು ಎಂದರು.ಹಲಸಿನ ಪಲ್ಪ್‌ಗೂ ಭಾರೀ ಬೇಡಿಕೆಯಿದೆ.ತುಳುವ ಹಲಸನ್ನು ಇದರಲ್ಲಿ ಸದ್ಬಳಕೆ ಮಾಡಬಹುದು.ಹಲಸು ಉದ್ಯಮವನ್ನು ಬೆಳೆಸಲು ಸಾಧ್ಯತೆಗಳು ಬಹಳಷ್ಟಿದೆ ಪ್ರಯತ್ನ ಶೀಲತೆ, ಉದ್ಯಮ ಶೀಲತೆ ಮುಖ್ಯ.ನಾವೇ ಪ್ರಯತ್ನ ಮಾಡಬೇಕು.ಹಲಸಿನ ಬೀಜದ ಹುಡಿ ಮಾಡಿ ಬೆಳೆದವರಿದ್ದಾರೆ.ಕೇರಳದಿಂದ ಉತ್ತರ ಭಾರತಕ್ಕೆ 750 ಟನ್ ಗುಜ್ಜೆ ಸರಬರಾಜಾಗುತ್ತಿದೆ.ಹಲಸು ಉದ್ಯಮ ಬೆಳೆಯಲು ಅವಕಾಶ ದೊಡ್ಡದಿದೆ.ಅಧ್ಯಯನ ನಡೆಸುವುದರ ಜೊತೆಗೆ ಜನರಿಗೆ ತರಬೇತಿ ನೀಡಬೇಕಾದ ಅವಶ್ಯಕತೆಯೂ ಇದೆ.ಹಲಸು ಉದ್ಯಮದಲ್ಲಿ ಹಲವು ರಂಗಗಳಿವೆ.ಇದರಲ್ಲಿ ಇನ್ನಷ್ಟು ಮುಂದೆ ಹೋಗಬೇಕು.ನಾವು ಕೂತಲ್ಲಿಗೆ ಬೆಲೆ ಬರುವುದಿಲ್ಲ.ನಾವು ಮುಂದೆ ಹೋಗಬೇಕು ಎಂದವರು ಹೇಳಿದರು.


ಮೇಳದಲ್ಲಿ ಕೃಷಿಯ ವರ್ಧನೆ ಜತೆಗೆ ಮೌಲ್ಯವರ್ಧನೆಗೆ ಒತ್ತು-ಡಾ.ಯು.ಪಿ.ಶಿವಾನಂದ:
ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಮಾತನಾಡಿ, ಮೂರು ದಿನಗಳ ಕಾಲ ನಡೆದ ಹಲಸು ಹಣ್ಣು ಮೇಳವು ಹಬ್ಬದ ವಾತಾವರಣ ಸೃಷ್ಟಿಸಿದೆ.ಮೇಳದಲ್ಲಿ ಬಗೆ ಬಗೆಯ ಆಹಾರಗಳು, ವಿವಿಧ ಸ್ಪರ್ಧೆಗಳು ಜೊತೆಗೆ ಮನರಂಜನೆ ದೊರೆತಿದ್ದು ಜನರ ಮನಸ್ಸು ಗೆದ್ದಿದೆ.ಹಲಸಿನ ವಿಚಾರದಲ್ಲಿ ಪಿಎಚ್‌ಡಿ ಅಥವಾ ಸಂಶೋಧನೆ ಮಾಡುವವರಿಗೆ ಮೇಳದ ಮೂಲಕ ಅವಕಾಶ ದೊರೆತಂತಾಗಿದೆ.ಹಲಸು ಸುಲಭವಾಗಿ ದೊರೆಯುವ ಆಹಾರ ವಸ್ತು.ಜೀವನದ ಭಾಗ.ಮೇಳದ ಮೂಲಕ ಹಲಸಿನ ವಿವಿಧ ಉತ್ಪನ್ನಗಳ ರುಚಿ ದೊರೆತಿದೆ.ಜೀವನಕ್ಕೆ ಬೇಕಾದ ಎಲ್ಲಾ ಉದ್ಯಮಗಳಿಗೆ ಅವಕಾಶ ನೀಡಿ ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಿದೆ.ಮೇಳದಿಂದಾಗಿ ಕೃಷಿಯ ವರ್ಧನೆ, ಮಾರುಕಟ್ಟೆಯ ಬಹುಮುಖಕ್ಕೆ ಅವಕಾಶ ದೊರೆತಿರುವುದಲ್ಲದೇ ಮೌಲ್ಯ ವರ್ಧನೆಗೂ ಒತ್ತು ನೀಡಲಾಗಿದೆ.ಮೇಳದ ವಿಚಾರಗಳು ದಾಖಲೆಯಾಗಿ ಉಳಿಯಬೇಕು.ಅರ್ಥಪೂರ್ಣವಾಗಿ, ಸಂಶೋಧನಾತ್ಮಕವಾಗಿ, ಆರ್ಥಿಕ ಭದ್ರತೆ ಕೊಡುವ ವ್ಯವಸ್ಥೆಗಳು ಬರಬೇಕಾಗಿದೆ.ಹಲಸು ಉದ್ಯಮಕ್ಕೆ ಪೂರಕವಾದ ಉದ್ದಿಮೆಗಳು, ಮಾರುಕಟ್ಟೆ, ಆರ್ಥಿಕ ಶಕ್ತಿ ದೊರೆತಾಗ ಪುತ್ತೂರಿನ ಹಲಸಿನ ಉದ್ಯಮಕ್ಕೆ ಬೆನ್ನೆಲುಬು ಬಂದಂತಾಗುತ್ತದೆ ಎಂದರು.


ಉದ್ಯಮ ಮಾಡುವವರಿಗೆ ಅವಕಾಶ-ಶಂಕರ್ ರಾವ್:
ಜೆಸಿಐ ವಲಯ 15ರ ಉಪಾಧ್ಯಕ್ಷ ಶಂಕರ್ ರಾವ್ ಮಾತನಾಡಿ, ಹಲಸು ಹಣ್ಣು ಮೇಳವು ಉದ್ಯಮ ಮಾಡುವವರಿಗೆ ಅವಕಾಶ ಮಾಡಿಕೊಟ್ಟಿದೆ.ಜನರಿಗೆ ಉತ್ತಮ ಮಾಹಿತಿ ನೀಡಲಾಗಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜೆಸಿಐಯಲ್ಲಿಯೂ ಜೇಕಂ ಟೇಬಲ್ ಇದ್ದು ಇಂತಹ ವಿಷಯಗಳು ಚರ್ಚೆಗೆ ಬರಲಿದೆ ಎಂದರು.


ಭವಿಷ್ಯದ ಆಹಾರ ಕೊರೆತೆಗೆ ಹಲಸು ಉದ್ಯಮ ಪರಿಹಾರ-ನಿರಂಜನ ಪೋಳ್ಯ:
ಸಮೃದ್ಧಿ ಗಿಡ ಗೆಳೆತನ ಸಂಘದ ಅಧ್ಯಕ್ಷ ನಿರಂಜನ ಪೋಳ್ಯ ಮಾತನಾಡಿ, ಕೃಷಿಯಲ್ಲಿ ಬೆಳೆ ಬೆಳೆಸುವುದು ಸುಲಭ.ಆದರೆ ಮಾರುಕಟ್ಟೆ ಸುಲಭವಲ್ಲ.ಈ ನಿಟ್ಟಿನಲ್ಲಿ ಮೌಲ್ಯವರ್ಧನೆಯ ಅಗತ್ಯವಿದೆ.ಹಲಸಿಗೆ ಮಾರುಕಟ್ಟೆ ಸೃಷ್ಟಿಯಾದರೆ ಬೆಳೆಸುವವರಿದ್ದಾರೆ.ಹೀಗಾಗಿ ಸರಿಯಾದ ಮಾರುಕಟ್ಟೆ ಅವಶ್ಯಕತೆಯಿದೆ.ಹಲಸಿನಲ್ಲಿರುವ ಕೊನೆಯ ಉತ್ಪನ್ನಗಳಿಗೂ ಮಾರುಕಟ್ಟೆ ಆಗಬೇಕು.ಆಗ ಉತ್ತಮ ಮಾರುಕಟ್ಟೆ ಸೃಷ್ಟಿಯಾಗಲಿದೆ.ಭವಿಷ್ಯದಲ್ಲಿ ಆಹಾರದ ಲಭ್ಯತೆ ಕಡಿಮೆಯಾಗಲಿದೆ.ಅದಕ್ಕೆ ಈಗಲೇ ತಯಾರಾಗಬೇಕು.ನಮ್ಮ ನಾಳೆಗಾಗಿ ಈಗಲೇ ಹಲಸಿನ ಉತ್ಪನ್ನಗಳಿಗೆ ಪ್ರೋತ್ಸಾಹ ಅಗತ್ಯವಿದೆ ಎಂದರು.


ನಗರದ ಕೃಷಿಕರಿಗೆ ಹೊಸ ತಂತ್ರಜ್ಞಾನದ ಮಾಹಿತಿ ಅವಶ್ಯ-ರತ್ನಾಕರ ಕುಳಾಯಿ:
ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗದ ಸಂಘಟನಾ ಕಾರ್ಯದರ್ಶಿ ರತ್ನಾಕರ ಕುಳಾಯಿ ಮಾತನಾಡಿ, ಹಲಸಿನ ಹಣ್ಣಿನ ವಿವಿಧ ಉತ್ಪನ್ನಗಳು, ಉದ್ಯಮಗಳು, ಮಾರುಕಟ್ಟೆ ಹಾಗೂ ಮೌಲ್ಯವರ್ಧನೆಯ ಬಗ್ಗೆ ಜನರಲ್ಲಿ ಮಾಹಿತಿ ಹಾಗೂ ಅನುಭವದ ಕೊರತೆಯಿದೆ.ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆಯವರಲ್ಲಿ ಸಾಕಷ್ಟು ಯೋಚನೆ, ಯೋಜನೆಗಳಿದ್ದು ಅದು ಪುಸ್ತಕ ರೂಪದಲ್ಲಿ ದಾಖಲೀಕರಣವಾಗಬೇಕು.ನಗರದ ಕೃಷಿಕರು ಹೆಚ್ಚಾಗುತ್ತಿದ್ದು ಆಧುನಿಕತೆ ತರಕಾರಿ ಕೃಷಿಗಳನ್ನು ಮಾಡಲು ತಂತ್ರಜ್ಞಾನ ಬಳಕೆ, ಹೊಸ ಹೊಸ ವ್ಯವಸ್ಥೆಗಳ ಮಾಹಿತಿಗಳನ್ನು ಹಲಸು ಮೇಳದ ಮೂಲಕ ಮುಂದಿನ ದಿನಗಳಲ್ಲಿ ನೀಡುವಂತಾಗಲಿ ಎಂದು ಆಯೋಜಕರಲ್ಲಿ ವಿನಂತಿಸಿದರು.


ಹಲಸು ಕಲ್ಪವೃಕ್ಷಕ್ಕೆ ಸಮಾನ-ಈಶ್ವರ ಭಟ್:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಬಡವರ ಆಹಾರವಾಗಿರುವ ಹಲಸಿನ ವಿವಿಧ ಉತ್ಪನ್ನಗಳ ಮೂಲಕ ಉತ್ತಮ ಮಾರುಕಟ್ಟೆ ಲಭ್ಯವಾಗಿದೆ.ಹಲಸು ಕಲ್ಪವೃಕ್ಷಕ್ಕೆ ಸಮಾನ.ಅದರಲ್ಲಿ ಬಿಸಾಡುವ ವಸ್ತುವಿಲ್ಲ.ಹಲವು ಉತ್ಪನ್ನಗಳನ್ನು ಮಾಡಲು ಅವಕಾಶವಿದ್ದು ಹೆಚ್ಚಾಗಿ ಬೆಳೆಸಬೇಕು.ರಾಸಾಯನಿಕ ಬಳಸದ ಏಕೈಕ ಹಣ್ಣಾಗಿದ್ದು ಮುಂದಿನ ಪೀಳಿಗೆಗೆ ಸಸಿ ನೆಟ್ಟು ಬೆಳೆಸಬೇಕು.ಹಣ್ಣು ಬೆಳೆಸುವ ಜೊತೆಗೆ ಪ್ರಕೃತಿ ಉಳಿಸಲು ಪ್ರೋತ್ಸಾಹ ನೀಡಬೇಕು.ಪ್ರಾಣಿ, ಪಕ್ಷಿಗಳಿಗೂ ಉಪಯೋಗವಾಗಬೇಕು ಎಂದರಲ್ಲದೆ, ಮುಂದಿನ ದಿನಗಳಲ್ಲಿ ಹಲಸು ಮೇಳ ಆಯೋಜನೆ ಮಾಡುವವರಿಗೆ ಬನ್ನೂರು ರೈತರ ಸೇವಾ ಸಂಘದಿಂದ ಸಹಕಾರ ನೀಡಲಾಗುವುದು ಎಂದರು.


ಗೌರವಾರ್ಪಣೆ: ಕಾರ್ಯಕ್ರಮ ವೀಕ್ಷಿಸಲು ತಮಿಳುನಾಡಿನಿಂದ ಆಗಮಿಸಿದ್ದ ಇಶಾ ಕಾವೇರಿ ಕಾಲಿಂಗ್‌ನ ತಮಿಳ್‌ಮಾರನ್, ಕಾರ್ಯಕ್ರಮದ ಪ್ರಾಯೋಜಕರಾದ ಜಿ.ಎಲ್.ಆಚಾರ್ಯ ಚಿನ್ನಾಭರಣ ಮಳಿಗೆ, ಸಾಯ ಎಂಟರ್‌ಪ್ರೈಸಸ್ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆ, ಅನನ್ಯ ಫೀಡ್ಸ್, ಟೊಯೋಟಾ ಕಾರುಗಳ ಸಂಸ್ಥೆ, ಪಶುಪತಿ ಲೈಟಿಂಗ್‌ನ ಮುಖ್ಯಸ್ಥರು, ಸ್ಪರ್ಧೆಗಳ ತೀರ್ಪುಗಾರ ದಿನೇಶ್ ಪ್ರಸನ್ನರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.


ಸ್ಪರ್ಧೆಗಳ ಬಹುಮಾನ ವಿತರಣೆ:
ಮೇಳದಲ್ಲಿ ಉತ್ತಮ ಮಳಿಗೆಯಾಗಿ ಆಯ್ಕೆಯಾದ ಕೊಲ್ಲಂನ ಕಾಚೋಸ್ ಸಂಸ್ಥೆ ಮುಜಿಬ್‌ಗೆ ಉತ್ತಮ ಮಳಿಗೆ ಬಹುಮಾನ ನೀಡಲಾಯಿತು.ಹಲಸಿನ ವಿಚಾರದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ಜೆಸಿಐ ನೇತೃತ್ವದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಜೆಸಿಐ ಅಧ್ಯಕ್ಷ ಮೋಹನ ಕೆ ಸ್ವಾಗತಿಸಿದರು.ನವತೇಜದ ವೇಣುಗೋಪಾಲ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದ ವಿಸ್ತತ ವರದಿ ಮಂಡಿಸಿದರು.ಸುಹಾಸ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು.ನವತೇಜ ಪುತ್ತೂರು ಇದರ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ವಂದಿಸಿದರು.ಜೆಸಿಐ ಪೂರ್ವಾಧ್ಯಕ್ಷರಾದ ಪಶುಪತಿ ಶರ್ಮ, ದಿನೇಶ್ ಪ್ರಸನ್ನ ವಿವಿಧ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here