ಉಪ್ಪಿನಂಗಡಿ: ನೆರೆ ಬಂದ ಸಂದರ್ಭ ರಕ್ಷಣೆಗೆಂದು ಸರಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉಪ್ಪಿನಂಗಡಿಗೆ ಕಲ್ಪಿಸಲಾದ ದೋಣಿಯು ನಿರ್ವಹಣೆ ಕೊರತೆಯಿಂದ ಆರು ವರ್ಷಗಳ ಕಾಲವೂ ಬಾಳಿಕೆ ಬಾರದೆ ಉಪಯೋಗಶೂನ್ಯವಾಗಿದ್ದು, ಆದರೂ 9 ವರ್ಷಗಳ ಕಾಲ ಮಳೆ- ಬಿಸಿಲಿಗೆ ಮೈಯೊಡ್ಡಿ ನೇತ್ರಾವತಿ ನದಿಯಲ್ಲಿದ್ದ ಈ ದೋಣಿಯನ್ನು ಪತ್ರಿಕಾ ವರದಿಗಳ ಬಳಿಕ ಎಚ್ಚೆತ್ತ ಕಂದಾಯ ಇಲಾಖೆಯು ಮೇ.29ರಂದು ನದಿಯಿಂದ ಬಂಧಮುಕ್ತಗೊಳಿಸಿ ಮೇಲಕ್ಕೆ ತಂದಿಟ್ಟಿದೆ.
ನೆರೆ ಪೀಡಿತ ಪ್ರದೇಶವಾಗಿರುವ ಉಪ್ಪಿನಂಗಡಿಗೆ 2014ರಲ್ಲಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರವು ಸೀಮೆ ಎಣ್ಣೆ ಚಾಲಿತ ಒಬಿಎಂ ಯಂತ್ರ ಸಹಿತ ಮರ ಹಾಗೂ ಫೈಬರ್‌ನಿಂದ ತಯಾರಿಸಲಾದ ದೋಣಿಯೊಂದನ್ನು ಕಲ್ಪಿಸಿತ್ತು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ಅದನ್ನು ನೇತ್ರಾವತಿ ನದಿಗೆ ಇಳಿಸಲಾಗಿತ್ತು. ಒಂದು ವರ್ಷ ಮಾತ್ರ ಈ ದೋಣಿಗೆ ಬೇಸಿಗೆಯಲ್ಲಿ ಬಿಸಿಲು ತಾಗದಂತೆ ನದಿ ದಡದಲ್ಲಿ ಟರ್ಫಾಲಿನ್ ಹಾಕಿ ಬಿಸಿಲಿನಿಂದ ರಕ್ಷಣೆಯನ್ನು ನೀಡಿದ್ದರೆ, ಆಮೇಲೆ ಪ್ರತಿ ವರ್ಷವೂ ಈ ದೋಣಿ ಮಳೆ- ಬಿಸಿಲಿಗೆ ಮೈಯೊಡ್ಡಿ ನಿಂತಿತ್ತು. 2020ರಲ್ಲಿ ದೋಣಿಯ ಒಂದೊಂದೇ ಮರದ ತುಂಡುಗಳು ಕಳಚಿ ಬೀಳಲು ಆರಂಭವಾಯಿತು. ಎಲ್ಲಿಯವರೆಗೆ ಅಂದರೆ ಒಬಿಎಂ ಮೆಷಿನ್ ಜೋಡಿಸುವ ದೋಣಿಯ ಜಾಗವೇ ಕಳಚಿ ಬಿದ್ದಿತ್ತು. ಆ ಬಳಿಕ ಈ ದೋಣಿ ಸಂಪೂರ್ಣ ಉಪಯೋಗ ಶೂನ್ಯವಾಗಿತ್ತು. ಸಂಪೂರ್ಣ ಶಿಥಿಲಾವಸ್ಥೆಯನ್ನು ತಲುಪಿದ್ದ ಈ ದೋಣಿಯನ್ನು ನೇತ್ರಾವತಿ ನದಿಯ ದಡದಲ್ಲಿ ಹಗ್ಗದಲ್ಲಿ ಕಟ್ಟಿದ್ದರಿಂದ ಮಳೆಗಾಲದಲ್ಲಿ ನದಿಯ ನೀರು ಹೆಚ್ಚಾದಾಗ ಮೇಲೆ ಬರುತ್ತಿತ್ತು. ನದಿಯ ನೀರು ಕಡಿಮೆಯಾದಾಗ ನದಿಯ ಕೆಳಗೆ ಹೋಗುತ್ತಿತ್ತು. ದ.ಕ. ಜಿಲ್ಲಾಡಳಿತ ಈ ದೋಣಿಯನ್ನು ಇಲ್ಲಿಗೆ ಒದಗಿಸಿದ್ದರೂ, ಇದನ್ನು ಯಾವುದೇ ಇಲಾಖೆಯ ಸುಪರ್ದಿಗೆ ಒಪ್ಪಿಸಿರಲಿಲ್ಲ. ಕಂದಾಯ ಇಲಾಖೆಯು ಇದರ ನಿರ್ವಹಣೆಗೆ ಒತ್ತು ನೀಡಿರಲಿಲ್ಲ. ಇದಕ್ಕೆ ಕಂದಾಯ ಇಲಾಖೆ ಅಂಬಿಗನನ್ನು ನೇಮಿಸಿದ್ದರೂ, ಅವರಿಗೆ ಮಳೆಗಾಲದಲ್ಲಿ ವರ್ಷದ ಮೂರು ತಿಂಗಳು ಮಾತ್ರ ಅಲ್ಲಿ ಕೆಲಸ. ಆ ಬಳಿಕ ದೋಣಿ ಅನಾಥ. ಅಂಬಿಗನಿದ್ದಾಗ ಅವರು ಅದನ್ನು ಶುಚಿಯಾಗಿಡೋದು, ಅದರ ನೀರು ತೆಗೆಯೋದು ಮಾಡುತ್ತಿದ್ದರು. ಆದರೆ ಅವರು ನಿಧನರಾಗಿದ್ದು, 2021ರ ಬಳಿಕ ಆ ದೋಣಿ ಚಾಲನೆಗೆ ಅರ್ಹವಾಗಿಲ್ಲದಿದ್ದರೂ, ಗೃಹ ರಕ್ಷಕ ದಳದವರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದವರು ಈ ಕೆಲಸ ಮಾಡುತ್ತಿದ್ದರು. ಅವರಿಗೂ ಕೂಡಾ ಅಲ್ಲಿ ಕೆಲಸವಿದ್ದದ್ದು ಮಳೆಗಾಲದಲ್ಲಿ ವರ್ಷದ ನಾಲ್ಕು ತಿಂಗಳು ಮಾತ್ರ. ಹಾಗಾಗಿ ಆ ಬಳಿಕ ಆ ದೋಣಿಯ ಹತ್ತಿರ ಸುಳಿಯುವವರೇ ಇರಲಿಲ್ಲ. ಈ ದೋಣಿಯ ಮರದ ತುಂಡುಗಳು ಕಳಚಿ ಹೋಗಿರುವುದು ಒಂದೆಡೆಯಾದರೆ, ದೋಣಿಯ ಕೆಳಗೆ ಹಾಸಲಾಗಿರುವ ಫೈಬರ್ ಕೂಡಾ ಎದ್ದು ಬರುತ್ತಿತ್ತು. ಇದರೊಳಗೆ ಮಳೆ ನೀರು ನಿಂತು ಇದು ಸೊಳ್ಳೆ ಉತ್ಪಾದನಾ ತಾಣವಾಗಿ ಬದಲಾಗಿತ್ತು.
ದೋಣಿಯ ಈ ಸ್ಥಿತಿಯ ಬಗ್ಗೆ ಮಾಧ್ಯಮಗಳು ವರದಿ ಮಾಡಿ ಜಿಲ್ಲಾಡಳಿತವನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಆ ಬಳಿಕ ಎಚ್ಚೆತ್ತ ಕಂದಾಯ ಇಲಾಖೆಯವರು ಪುತ್ತೂರು ಸಹಾಯಕ ಉಪವಿಭಾಗಾಧಿಕಾರಿಯವರ ಸೂಚನೆಯಂತೆ ದೋಣಿಯನ್ನು ಕ್ರೇನ್‌ನ ಸಹಾಯದಿಂದ ನದಿಯಿಂದ ಮೇಲೆತ್ತಿ ದೇವಸ್ಥಾನದಿಂದ ಕೆಲವು ಮೀಟರ್‌ಗಳ ದೂರದಲ್ಲಿ ಅದಕ್ಕೆ ಸೋಲಾರ್ ಟರ್ಫಾಲಿನ್ ಸುತ್ತಿ ಇಟ್ಟಿದ್ದಾರೆ. ಸಂಪೂರ್ಣವಾಗಿ ಶಿಥಿಲಗೊಂಡ ಬಳಿಕ ಅದಕ್ಕೆ ಟಾರ್ಫಾಲಿನ್ ಸುತ್ತಿ ಇಡುವುದಕ್ಕಿಂತ ಅದಕ್ಕಿಂತ ಮೊದಲೇ ವರ್ಷಂಪ್ರತಿ ಈ ರೀತಿ ಇಲಾಖೆಯವರು ಮಾಡುತ್ತಿದ್ದರೆ ದೋಣಿಯೂ ಬಾಳಿಕೆ ಬರುತ್ತಿತ್ತು. ಸರಕಾರದ ಬೊಕ್ಕಸಕ್ಕಾದ ಲಕ್ಷಾಂತರ ರೂಪಾಯಿ ನಷ್ಟವನ್ನು ತಪ್ಪಿಸಬಹುದಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ದೋಣಿಯನ್ನು ನದಿಯಿಂದ ತೆರವುಗೊಳಿಸುವ ಸಂದರ್ಭ ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕರಾದ ಚಂದ್ರ ನಾಯ್ಕ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ., ಈಜುಗಾರ ಸುದರ್ಶನ್ ನೆಕ್ಕಿಲಾಡಿ ಮತ್ತಿತರರಿದ್ದರು.