ಪುತ್ತೂರು:ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ರೈಲ್ವೇ ಕ್ರಾಸಿಂಗ್ ಗೇಟ್ ತುಂಡಾಗಿ ಬಿದ್ದು ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಮೇ29 ರಂದು ನರಿಮೊಗರುವಿನಲ್ಲಿ ನಡೆದಿದೆ.
ಪುರುಷರಕಟ್ಟೆ-ಪಂಜಳ ಸಂಪರ್ಕ ರಸ್ತೆಯ ಸಾಂದೀಪನಿ ಶಾಲಾ ಬಳಿಯಲ್ಲಿರುವ ರೈಲ್ವೇ ಟ್ರಾಕ್ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದೆ.ಬೆಟ್ಟಂಪಾಡಿ ನಿವಾಸಿ ಜಗನ್ನಾಥ ಎಂಬವರು ಪುತ್ರನನ್ನು ಸಾಂದೀಪನಿ ಶಾಲೆಯಲ್ಲಿ ದಾಖಲಾತಿ ಮಾಡಿಸಲು ತನ್ನ ಹೋಂಡಾ ಆಕ್ವೀವಾದಲ್ಲಿ ಪುರುಷರಕಟ್ಟೆ ರಸ್ತೆಯ ಮೂಲಕ ಬರುತ್ತಿದ್ದರು.ಅಪರಾಹ್ನ 2.30ರ ಸಮಯದಲ್ಲಿ ರೈಲ್ವೆಯ ಗೇಟ್ ಹಾಕಲಾಗಿತ್ತು.ರೈಲು ತೆರಳಿದ ಬಳಿಕ ಗೇಟ್ ತೆರೆದು ವಾಹನಗಳು ತೆರಳುತ್ತಿದ್ದಾಗ ಮೇಲಕ್ಕೆ ಹೋಗಿದ್ದ ಗೇಟ್‌ನ ಬುಡದ ಭಾಗದಿಂದಲೇ ತುಂಡಾಗಿ ಜಗನ್ನಾಥರವರ ತಲೆ ಮೇಲೆ ಬಿದ್ದು ನಂತರ ಅವರ ಪುತ್ರನ ತಲೆ ಮೇಲೆ ಬಿದ್ದಿದೆ.ಜಗನ್ನಾಥರವರು ಹೆಲ್ಮೆಟ್ ಧರಿಸಿದ್ದರಿಂದ ಜಗನ್ನಾಥ ಹಾಗೂ ಅವರ ಪುತ್ರ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾನವೀಯತೆ ಮರೆತ ರೈಲ್ವೇ ಇಲಾಖೆಯವರು: ಅಪಘಾತದ ಬಗ್ಗೆ ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಪ್ರಭುರವರು ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ತಮ್ಮ ಇಲಾಖೆಯ ವಾಹನದ ಮೂಲಕ ರೈಲ್ವೆ ಇಲಾಖೆಯ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ದ ರೈಲ್ವೇ ಇಲಾಖೆಯವರು ನಂತರ ನಮ್ಮ ಆಸ್ಪತ್ರೆಯಿಲ್ಲ.ನೀವು ಹೇಳಿದ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು ಹೊರತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಗಾಯಾಳು ಆರೋಪಿಸಿದ್ದಾರೆ.
ಇದೇ ಮೊದಲಲ್ಲ…!:
ರೈಲ್ವೇಯ ಗೇಟ್ ತುಂಡಾಗಿ ಬಿದ್ದಿರುವುದು ಇದೇ ಮೊದಲಲ್ಲ.ಈ ಹಿಂದೆಯೂ ಇದೇ ಗೇಟ್ ತುಂಡಾಗಿ ಬಿದ್ದಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ.ಗೇಟ್ ತುಕ್ಕು ಹಿಡಿದು ಹೋಗಿದ್ದರೂ ಅದನ್ನು ಸರಿಪಡಿಸುವ ಕಾರ್ಯ ಮಾಡದೇ ರೈಲ್ವೇ ಇಲಾಖೆ ನಿರ್ಲಕ್ಷ್ಯ ವಹಿಸಿದ್ದರಿಂದ ಮತ್ತೆ ಗೇಟ್ ತುಂಡಾಗಿ ಬಿದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಂಜೂರಾದರೂ ಮೇಲ್ಸೇತುವೆ ನಿರ್ಮಾಣವಾಗಿಲ್ಲ:
ನರಿಮೊಗರು ಸೇರಿದಂತೆ ನಾಲ್ಕು ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್‌ರವರ ಮೂಲಕ ಅನುದಾನ ಮಂಜೂರಾಗಿದ್ದರೂ ಮೇಲ್ಸೇತುವೆ ಮಾತ್ರ ನಿರ್ಮಾಣಗೊಂಡಿಲ್ಲ.ಇದರಿಂದಾಗಿ ಘಟನೆ ನಡೆದಿದೆ.ಈ ರಸ್ತೆಯಲ್ಲಿ ಖಾಸಗಿ ಶಾಲೆಗಳ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿವೆ.ಪ್ರತಿದಿನ ಹಲವು ರೈಲುಗಳ ಸಂಚಾರವಾಗುತ್ತಿದ್ದು ಒಂದು ರೈಲು ಸಂಚರಿಸುವಾಗ ವಾಹನ ಸವಾರರು ಕನಿಷ್ಠ ಮುಕ್ಕಾಲು ತಾಸಾದರೂ ಕಾಯಬೇಕಾದ ಪರಿಸ್ಥಿತಿಯಿದೆ.ಹೀಗಾಗಿ ಮೇಲ್ಸೇತುವೆಯ ನಿರ್ಮಾಣದ ಕಾರ್ಯಗಳು ಅತೀ ಶೀಘ್ರವಾಗಿ ನಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.