ಪುತ್ತೂರು: ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ವಿದ್ಯಾರ್ಥಿ ಸಂಘಟನೆಯಾದ ಎನ್ಎಸ್ಯು ಆಯೋಜಿಸಿದ್ದ ಅಖಿಲ ಕರ್ನಾಟಕ ಮ್ಯಾರಥಾನ್ ಸ್ಪರ್ಧೆಯು ಈಶ್ವರಮಂಗಲ ಪೇಟೆಯಿಂದ ಮಾಡನ್ನೂರುವರೆಗೆ ನಡೆಯಿತು.
ನೂರುಲ್ ಹುದಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಕ್ಕೂ ಮಿಕ್ಕ ಸ್ಪರ್ದಿಗಳು ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದರು.
ಸ್ಪರ್ಧೆಗೂ ಮುನ್ನ ಈಶ್ವರಮಂಗಲ ಪೇಟೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಅವರು ಮಾತನಾಡಿ, ಭವಿಷ್ಯದಲ್ಲಿ ಆರೋಗ್ಯವಂತ ಸಮಾಜ ಸೃಷ್ಟಿಯಾಗಬೇಕಾದರೆ ಮಾದಕ ವ್ಯಸನಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ವಿದ್ಯಾರ್ಥಿ ಹಾಗೂ ಯುವ ಸಮೂಹದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಇಂತಹ ಚಟಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮವು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುತ್ತೂರಿನ ವೈದ್ಯ ಡಾ.ನಝೀರ್ ಅಹ್ಮದ್ ಮಾತನಾಡಿ, ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಮಾದಕ ವ್ಯಸನಗಳಿಂದ ದೂರುವುಳಿಯುವುದು ಹಾಗೂ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವ್ಯಾಯಾಮ ನಡೆಸುವುದು ಇವೆರಡನ್ನು ಜೀವನದಲ್ಲಿ ರೂಢಿಗೊಳಿಸಬೇಕು. ಅದನ್ನು ಉತ್ತೇಜಿಸುವ ಕಾರ್ಯಕ್ರಮಗಳು ನಿರಂತರವಾಗಿ ಸಮಾಜದಲ್ಲಿ ನಡೆಯುತ್ತಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನೂರುಲ್ ಹುದಾ ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಅವರು ಮಾತನಾಡಿ, ಕೌಟುಂಬಿಕ ಜಿವನವನ್ನು ಹಾಳುಗೆಡೆಯುವ ಮಾದಕ ವ್ಯಸನಗಳಿಂದ ಮುಕ್ತರಾಗುವಂತೆ ಕರೆ ನೀಡಿದರು.
ಸಂದೇಶ ಭಾಷಣ ಮಾಡಿದ ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ ಅವರು 20ನೇ ಶತಮಾನದಲ್ಲಿ ವಿಶ್ವದಾದ್ಯಂತ ಸುಮಾರು 10 ಕೋಟಿ ಜನ ತಂಬಾಕು ಸೇವನೆಯಿಂದ ಬರುವ ರೋಗಗಳಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಪ್ರತೀ ವರ್ಷ 8 ರಿಂದ 9 ಲಕ್ಷ ಜನ ತಂಬಾಕು ಸೇವನೆಗೆ ಸಂಬಂಧಪಟ್ಟ ಕಾಯಿಲೆಗಳಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2010ರ ಭಾರತದ ಯುವಕ/ಯುವತಿಯರ ಜಾಗತಿಕ ತಂಬಾಕು ಸೇವನೆ ಸರ್ವೇಕ್ಷಣೆಯಲ್ಲಿ ನೂರರಲ್ಲಿ ಶೇಕಡಾ ಮೂವತ್ತು ಭಾಗ ಜನ, ಯಾವುದಾದರೊಂದು ವಿಧದ ತಂಬಾಕು ಬಳಸುತ್ತಿದ್ದಾರೆ ಎಂಬ ಅಂಶವನ್ನು ಪತ್ತೆಹಚ್ಚಲಾಗಿದೆ. ಇದರ ಪ್ರಮಾಣವು ದಿನೇ ದಿನೇ ಏರಿಕೆಯಾಗುತ್ತಿದ್ದು ಈ ಅಪಾಯಕಾರಿ ಬೆಳವಣಿಗೆಗೆ ಕಡಿವಾಣ ಹಾಕಬೇಕಾದ ಸಮಾಜಿಕ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ನೆ.ಮುಡ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ್ ರೈ ಸಾಂತ್ಯ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪಾಳ್ಯತ್ತಡ್ಕ ಜುಮಾ ಮಸೀದಿ ಖತೀಬರಾದ ನಝೀರ್ ಅಝ್ಹರಿ, ಎನ್.ಎಸ್ ಅಬ್ದಲ್ಲಾ ಹಾಜಿ ಈಶ್ವರಮಮಗಲ, ಸಂಸ್ಥೆಯ ಉಪಾಧ್ಯಕ್ಷರಾದ ಹಿರಾ ಅಬ್ದುಲ್ ಖಾದರ್ ಹಾಜಿ, ಉಪಪ್ರಾಂಶುಪಾಲರಾದ ಸೈಯ್ಯದ್ ಬುರ್ಹಾನ್ ಅಲಿ ತಂಙಳ್, ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಾಮ ಮೇನಾಲ, ನಿವೃತ್ತ ಪೊಲೀಸ್ ಅಧಿಕಾರಿ ಎಂ.ಡಿ. ಹಸೈನಾರ್, ಆಡಳಿತ ಸಮಿತಿ ಸದಸ್ಯರಾದ ಸಿ.ಕೆ ಅಲಿ ದಾರಿಮಿ, ಸಿ.ಕೆ ದಾರಿಮಿ, ಅಝೀಝ್ ಬಪ್ಪಳಿಗೆ, ಇಸಾಕ್ ಪಡೀಲ್, ಖಾಲಿದ್, ಹಸೈನಾರ್, ಹಮೀದ್ ಪೈಚಾರ್, ಫ್ಯಾಮಿಲಿ ಅಬ್ದುಲ್ ಹಮೀದ್, ಸಿ.ಎಚ್. ಅಬ್ದುಲ್ ಅಝೀಝ್ ಹಾಜಿ, ಮಮ್ಮುಂಞಿ ಉಸ್ತಾದ್, ಶಂಸುದ್ದೀನ್ ಈಂದುಮೂಲೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಎನ್ಎಸ್ಯು ಅಧ್ಯಕ್ಷ ಅಜ್ಮಲ್ ಉಜಿರೆ ಸ್ವಾಗತಿಸಿದರು. ಕಾರ್ಯದರ್ಶಿ ಸವಾದ್ ವಿಟ್ಲ ವಂದಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಖಲೀಲುರ್ರಹ್ಮಾನ್ ಅರ್ಷದಿ ಕಾರ್ಯಕ್ರಮ ನಿರೂಪಿಸಿದರು.
ಕಿರುಪತ್ರ ಬಿಡುಗಡೆ:
ತಂಬಾಕು ಸೇವನೆಯ ಕುರಿತು ಜಾಗೃತಿ ಮೂಡಿಸುವ ಕಿರುಪತ್ರವನ್ನು ಡಾ. ನಝೀರ್ ಅಹ್ಮದ್ ಬಿಡುಗಡೆಗೊಳಿಸಿದರು. ಕಿರುಪತ್ರವನ್ನು ಸಾರ್ವಜನಿಕವಾಗಿ ವಿತರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ಮಾದಕ ವ್ಯಸನಗಳ ದುಷ್ಪರಿಣಾಮವವನ್ನು ಬಿಂಬಿಸುವ ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಿದರು.
ಬಹುಮಾನ ವಿತರಣೆ: ಮ್ಯಾರಥಾನ್ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಬಹುಮಾನವನ್ನು ಮಾಡನ್ನೂರು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿತರಿಸಲಾಯಿತು. ಪ್ರಥಮ ಸ್ಥಾನವನ್ನು ಶ್ರೀಧರ್ ಕೊಡಗು, ದ್ವಿತೀಯ ಸ್ಥಾನವನ್ನು ನಿತಿನ್ ಕೊಡಗು ಹಾಗೂ ತೃತೀಯ ಸ್ಥಾನವನ್ನು ಗಣಪತಿ ಕಾರವಾರ ಪಡೆದುಕೊಂಡರು. ವಿಜೇತರಿಗೆ ಟ್ರೋಪಿ, ಪದಕ, ಪ್ರಮಾಣಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.