ಪುತ್ತೂರು: ಕರ್ನಾಟಕ ವಿಧಾನ ಪರಿಷತ್ನ ನೈರುತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಗೆ ಜೂ.3ರಂದು ನಡೆಯಲಿರುವ ಮತದಾನಕ್ಕೆ ಸಂಬಂಧಿಸಿದಂತೆ ಜೂ.2ರಂದು ತಾಲೂಕು ಆಡಳಿತ ಸೌಧದಲ್ಲಿ ಮಸ್ಟರಿಂಗ್ ಕಾರ್ಯಗಳು ನಡೆಯಿತು.
ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹಾಗೂ ತಹಶೀಲ್ದಾರ್ ಕುಂಞಿ ಅಹಮದ್ ನೇತೃತ್ವದಲ್ಲಿ ಮಸ್ಟರಿಂಗ್ ಕಾರ್ಯಗಳು ನಡೆದು ಮತದಾನ ಪ್ರಕ್ರಿಯೆಗಳ ಕುರಿತು ಸಿಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು. ಜೂ.3ರಂದು ಮತದಾನ ನಡೆಯಲಿದ್ದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಸಂಜೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಪುತ್ತೂರು ಉಪ ವಿಭಾಗದ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಕಡಬ ತಾಲೂಕುಗಳ ಮತಪತ್ರಗಳ ಡಿ.ಮಸ್ಟರಿಂಗ್ ಕಾರ್ಯಗಳು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ನಡೆದು ನಂತರ ಮತಪತ್ರಗಳನ್ನು ಪೊಲೀಸ್ ಬಂದೋಬಸ್ತ್ ಮೂಲಕ ಮೈಸೂರಿಗೆ ಕೊಂಡೊಯ್ಯಲಾಗುತ್ತಿದೆ. ಜೂ.6ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.