ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಮತ್ತು ಪೋಷಕರ ಸಭೆಯು ನಡೆಯಿತು. ದೀಪ ಬೆಳಗಿಸುವುದರ ಮೂಲಕ 2024-25 ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳ ಉದ್ಘಾಟನೆಯನ್ನು ಪೋಷಕರಾದ ಉಮೇಶ್ ಕೆ ಎಂ ಬಿ, ಪೆರುವಾಜೆ ಇವರು ನೆರವೇರಿಸಿದರು. ಶ್ರೀಯುತರು ತಮ್ಮ ಉದ್ಘಾಟನಾ ಭಾಷಣದಲ್ಲಿ “ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳು ಬಹಳ ಪ್ರಸಿದ್ಧಿಯನ್ನು ಪಡೆದ ಸಂಸ್ಥೆಗಳಾಗಿವೆ. ಇಲ್ಲಿ ಶಿಕ್ಷಣವನ್ನು ಪೂರೈಸಿದ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಜವಾಬ್ದಾರಿಯನ್ನ ನಿಭಾಯಿಸುತ್ತ ಉನ್ನತ ಮಟ್ಟದಲ್ಲಿದ್ದಾರೆ. ಸತ್ಪ್ರಜೆಗಳ ನಿರ್ಮಾಣ ಈ ಸಂಸ್ಥೆಯಲ್ಲಿ ಆಗ್ತಾ ಇದೆ. ಈ ಸಂಸ್ಥೆಯ ಪ್ರತಿ ವಿದ್ಯಾರ್ಥಿಯು ಯಶಸ್ಸನ್ನ ಕಾಣುವಂತಾಗಲಿ” ಎಂದು ಹೇಳಿ ಶುಭ ಹಾರೈಸಿದರು.
ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಸುಬ್ರಹ್ಮಣ್ಯ ಕಾರಂತ್ ಇವರು ಕಾಲೇಜಿನಲ್ಲಿರುವ ವಿವಿಧ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು. ಪ್ರಾಂಶುಪಾಲ ಚಂದ್ರಶೇಖರ್ ಕೆ ಇವರು ಕಾಲೇಜಿನ ವಿವಿಧ ನಿಯಮಾವಳಿಗಳನ್ನು ತಿಳಿಸಿ ಕಾಲೇಜಿನ ಒಟ್ಟು ವ್ಯವಸ್ಥೆಯ ಪರಿಚಯವನ್ನು ಮಾಡಿದರು. ಆಂಗ್ಲ ಭಾಷಾ ಉಪನ್ಯಾಸಕಿ ತನುಜಾ ಅವರು ನೂತನ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವೇದಿಕೆಯಲ್ಲಿದ್ದ ಎಲ್ಲ ಉಪನ್ಯಾಸಕ ಮತ್ತು ಆಡಳಿತ ಮಂಡಳಿಯವರ ಪರಿಚಯವನ್ನು ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ ಎಸ್ ಇವರು ಮಾತನಾಡುತ್ತಾ ” ಪೇಜಾವರ ಸ್ವಾಮಿಗಳವರ ಆಶಯದಂತೆ ಸರ್ವರಿಗೂ ಶಿಕ್ಷಣವನ್ನು ಉನ್ನತ ಮಟ್ಟದಲ್ಲಿ ನೀಡುವ ಉದ್ದೇಶದಿಂದ ಈ ಆಡಳಿತ ಮಂಡಳಿ ಸುಮಾರು ನೂರು ವರ್ಷಗಳಿಂದ ಕಾರ್ಯಪ್ರವೃತ್ತವಾಗಿದೆ.ಅದರ ಭಾಗವಾಗಿ ನಡೆಯುತ್ತಾ ಇರುವ ಈ ಸಂಸ್ಥೆಯಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡಿ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಇದ್ದಾರೆ. ನೂತನ ವಿದ್ಯಾರ್ಥಿಗಳಾದ ನೀವೆಲ್ಲರೂ ಕೂಡ ಇಲ್ಲಿರುವ ವ್ಯವಸ್ಥೆಗಳನ್ನು ಉಪಯೋಗ ಮಾಡಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಿ ಮೂಡಿಬರುವಂತಾಗಲಿ” ಎಂದು ಹೇಳಿದರು.
ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಶಿವಪ್ರಸಾದ್ ಇವರು ಸ್ವಾಗತಿಸಿದರು. ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಕು. ಚೈತ್ರ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಯರಾದ ಗ್ರೀಷ್ಮ ಮತ್ತು ಬಳಗದವರು ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಚೇತನ್ ಎಂ ಕಾರ್ಯಕ್ರಮ ನಿರೂಪಿಸಿದರು.