ಉಸ್ತಾದರ ಪ್ರಯಾಣದ ಕಷ್ಟಕ್ಕೆ ಮರುಗಿದ ನಾಲ್ವರು ಯುವಕರು-ಪುಣಚದ ಉಸ್ತಾದ್‌ಗೆ ಹೊಸ ಕಾರು ಕೊಡುಗೆ

0

ಪುತ್ತೂರು: ಮಸೀದಿಯ ಧರ್ಮಗುರುವೊಬ್ಬರಿಗೆ ಊರಿನ ನಾಲ್ಕು ಮಂದಿ ಯುವಕರು ಸೇರಿಕೊಂಡು ಹೊಚ್ಚ ಹೊಸ ಕಾರೊಂದನ್ನು ನೀಡಿದ ಅಪರೂಪದ ವಿದ್ಯಮಾನ ಪುಣಚದಲ್ಲಿ ನಡೆದಿದೆ. ಪುಣಚ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಕಳೆದ 26 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಎಂ ಮುಹಮ್ಮದ್ ದಾರಿಮಿ ಅವರಿಗೆ ಯುವಕರು ಕಾರು ನೀಡಿದ್ದು ಈ ಕಾರು ನೀಡಲು ಒಂದು ಕಾರಣವೂ ಇದೆ.
ಕಲ್ಲಡ್ಕ ನಿವಾಸಿಯಾಗಿರುವ ಬಿ.ಎಂ ಮುಹಮ್ಮದ್ ದಾರಿಮಿಯವರು ಪುಣಚ ಮಸೀದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಪ್ರತೀ ಶನಿವಾರ ಮನೆಗೆ ಹೋಗಿ ಭಾನುವಾರ ಸಂಜೆ ವಾಪಸ್ ಮಸೀದಿಗೆ ಬರುತ್ತಿದ್ದರು. ಅವರು ಬಸ್ ಮೂಲಕ ಹೋಗಿ ಬರುತ್ತಿದ್ದರು. ಅವರಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗದ ಕಾರಣ ಹಲವು ಬಾರಿ ಮನೆಗೆ ತಲುಪುವಾಗ ತಡ ರಾತ್ರಿಯೂ ಆಗುತ್ತಿತ್ತು. ಆದರೆ ತಮ್ಮ ಕಷ್ಟವನ್ನು ಅವರು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ತಮ್ಮ ಪಾಡಿಗೆ ಮನೆಗೆ ಹೋಗಿ ಬರುತ್ತಿದ್ದುದಲ್ಲದೇ ಮಸೀದಿಯಲ್ಲಿ ತಮ್ಮ ಕರ್ತವ್ಯವನ್ನು ನಿಷ್ಠೆ, ಶ್ರದ್ಧೆಯಿಂದ ನಿರ್ವಹಿಸುತ್ತಾ ಬರುತ್ತಿದ್ದರು.

ಉಸ್ತಾದ್ ಕಷ್ಟ ಗಮನಿಸಿದ ಯುವಕ..!
ಕೆಲ ಸಮಯಗಳ ಹಿಂದೆ ಬಿ.ಎಂ ಮುಹಮ್ಮದ್ ದಾರಿಮಿ ಬಸ್‌ಗೆ ಕಾಯುತ್ತಿದ್ದರು. ಈ ವೇಳೆ ಅದೇ ದಾರಿಯಾಗಿ ಹೋಗುತ್ತಿದ್ದು ಆಜ್ಜಿನಡ್ಕದ ಆರಿಫ್ ಎಂಬವರು ನೋಡಿದ್ದರು. ಆರಿಫ್ ಅವರು ಪುತ್ತೂರಿಗೆ ಹೋಗಿ ವಾಪಸ್ ಪುಣಚಕ್ಕೆ ಬರುವ ವರೆಗೂ ಬಸ್ ಬಾರದ ಕಾರಣ ಉಸ್ತಾದ್ ಅಲ್ಲೇ ಕುಳಿತುಕೊಂಡಿದ್ದ ದೃಶ್ಯ ಆರಿಫ್ ಅವರ ಮನಸ್ಸಿಗೆ ಬಹಳ ಬೇಸರ ತಂದಿತ್ತು. ಬಳಿಕ ಮನೆಗೆ ಹೋದ ಆರಿಫ್ ಉಸ್ತಾದರ ವಿಚಾರವನ್ನು ಮನೆಯವರ ಜತೆಯೂ ಚರ್ಚೆ ನಡೆಸಿದ್ದರು. ಕೆಲ ಸಮಯದ ಬಳಿಕ ಆರಿಫ್ ಅವರು ತಮ್ಮಿಂದಾಗುವ ಮೊತ್ತ ಸಂಗ್ರಹಿಸಿ ಮುಹಮ್ಮದ್ ದಾರಿಮಿ ಅವರಿಗೆ ಕೊಟ್ಟು ಈ ಹಣದಲ್ಲಿ ನೀವೊಂದು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಎಂದು ಮನವಿ ಮಾಡಿಕೊಂಡಿದ್ದರು. ಆಗ ಮುಹಮ್ಮದ್ ದಾರಿಮಿ ಅವರು ಜಮಾಅತ್ ಕಮಿಟಿ ಜೊತೆ ವಿಷಯ ತಿಳಿಸುತ್ತೇನೆ ಎಂದು ಹೇಳಿ ಅಶ್ರಫ್ ನಟ್ಟಿ ಅವರಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿದ ನಟ್ಟಿ ಅಂದುಂಞಿ ಹಾಜಿಯವರ ಪುತ್ರರಾದ ಅಶ್ರಫ್, ಸತ್ತಾರ್ ಮತ್ತು ಅಯ್ಯೂಬ್ ಅವರು ಅಜ್ಜಿನಡ್ಕ ಆರಿಫ್ ಜೊತೆ ಚರ್ಚೆ ನಡೆಸಿದರು. ಬಳಿಕ ಆರಿಫ್ ಅವರ ಹಣವನ್ನು ಸೇರಿಸಿ ಕಾರು ಖರೀದಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡರು.

ಹೊಸ ಕಾರು ಖರೀದಿ:
ನಾಲ್ವರು ಕೂಡಾ ಅಭಿಪ್ರಾಯ ಮಾಡಿ ಉಸ್ತಾದರಿಗೆ ಹೊಸ ಕಾರು ಖರೀದಿಸಿ ಕೊಡುವ ಎಂಬ ಒಮ್ಮತದ ತೀರ್ಮಾನಕ್ಕೆ ಬಂದರು. ನಾಲ್ವರು ಯುವಕರು ಸೇರಿ ಸುಮಾರು 7 ಲಕ್ಷ ರೂ ಮೌಲ್ಯದ ವ್ಯಾಗನರ್ ಕಾರು ಖರೀದಿಸಿ ಉಸ್ತಾದರಿಗೆ ಹಸ್ತಾಂತರಿಸಿದ್ದಾರೆ. ಕಾರು ಸ್ವೀಕರಿಸಿದ ಉಸ್ತಾದ್ ಬಿ.ಎಂ ಮುಹಮ್ಮದ್ ದಾರಿಮಿ ಸಂತಸ ವ್ಯಕ್ತಪಡಿಸಿದ್ದಾರೆ.

ಯುವಕರಿಗೆ ಅಭಿನಂದನೆ:
ತಮ್ಮ ಜಮಾಅತ್‌ನಲ್ಲಿ ಸೇವೆ ಸಲ್ಲಿಸುವ ಉಸ್ತಾದರ ಪ್ರಯಾಣದ ಅನಾನುಕೂಲತೆ ಅರಿತು ಹೊಸ ಕಾರು ಖರೀಸಿದಿ ಕೊಟ್ಟು ಮಾದರಿ ಕಾರ್ಯ ಮಾಡಿದ ನಾಲ್ವರು ಯುವಕರ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಅಭಿನಂದನೆ ಸಲ್ಲಿಸಿದ್ದಾರೆ.

ಪುಣಚ ಮುಹಿಯುದ್ದೀನ್ ಜುಮಾ ಮಸೀದಿಯಲಿ ಬಿ.ಎಂ ಮುಹಮ್ಮದ್ ದಾರಿಮಿ ಅವರು ಸುಧೀರ್ಘ ಸಮಯಗಳಿಂದ ಸೇವೆ ಸಲ್ಲಿಸುತ್ತಿದ್ದು ಊರವರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಉಸ್ತಾದರ ಪ್ರಯಾಣದ ಕಷ್ಟ ಕಂಡ ನಾಲ್ವರು ಯುವಕರು ಉಸ್ತಾದರಿಗೆ ಸೇರಿಕೊಂಡು ಹೊಸ ಕಾರು ನೀಡಿದ್ದಾರೆ. ಇದು ಮಾದರಿ ಕಾರ್ಯ ಮತ್ತು ಇದರಿಂದ ಎಲ್ಲರಿಗೂ ಖುಷಿಯಾಗಿದೆ.
-ಯೂಸುಫ್ ಗೌಸಿಯಾ ಸಾಜ
ಉಪಾಧ್ಯಕ್ಷರು, ಮುಹಿಯುದ್ದೀನ್ ಜುಮಾ ಮಸೀದಿ ಪುಣಚ

LEAVE A REPLY

Please enter your comment!
Please enter your name here